
ಚಿಕ್ಕಬಳ್ಳಾಪುರ, ಜೂನ್ 03: ಚಿಕ್ಕಬಳ್ಳಾಪುರ (Chikkballapur) ತಾಲೂಕಿನ ನಂದಿ ಗಿರಿಧಾಮದಲ್ಲಿ (Nandi Hills) ಜೂನ್ 19 ರಂದು ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ.ಸಿ.ಸುಧಾಕರ್ಗೆ ತಿಳಿಸಿದ್ದು, ಗಿರಿಧಾಮದಲ್ಲಿ ಬರದ ಸಿದ್ದತೆಗಳು ನಡೆಯುತ್ತಿವೆ.
ನಂದಿ ಗಿರಿಧಾಮದ ಸುತ್ತಮುತ್ತ ಭೌಗೋಳಿಕ ವಿಸ್ತೀರ್ಣ ಹಂಚಿಕೊಂಡಿರುವ ಬಯಲುಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಚಿವ ಸಂಪುಟ ಸಭೆ ವರದಾನವಾಗುವ ನಿರೀಕ್ಷೆಯಿದೆ. ತ್ರಿವಳಿ ಜಿಲ್ಲೆಗಳ ಸಮಸ್ಯೆಗಳು, ಮೂಲಭೂತ ಸಮಸ್ಯೆಗಳು, ವಿಶೇಷ ಪ್ಯಾಕೇಜ್‍ಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. ಮೂರು ಜಿಲ್ಲೆಗಳ ಶಾಸಕರು, ತಮ್ಮ-ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಕ್ಷೇತ್ರಗಳ ಬಗ್ಗೆ ಪಟ್ಟಿ ತಯಾರಿ ಮಾಡಿಕೊಂಡು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಸನ್ನದ್ಧರಾಗಿದ್ದಾರೆ.
1986ರಲ್ಲಿ ನಂದಿ ಗಿರಿಧಾಮದಲ್ಲಿ ಎರಡನೇ ಸಾರ್ಕ್ ಶೃಂಗ ಸಮ್ಮೇಳನ ನಡೆದಿತ್ತು. ಮಹಾತ್ಮ ಗಾಂಧಿಜಿ, ಜವಾಹರಲಾಲ್ ನೆಹರು ಸೇರಿದಂತೆ ವಿಶ್ವದ ಖ್ಯಾತನಾಮರು ನಂದಿ ಗಿರಿಧಾಮದ ಪ್ರಕೃತಿಗೆ ಮನಸೋತಿದ್ದರು. ಈಗ ಸ್ವತಃ ರಾಜ್ಯ ಸರ್ಕಾರ ನಂದಿ ಗಿರಿಧಾಮದ ಪ್ರಕೃತಿ ಸೊಬಗಿನತ್ತ ಚಿತ್ತಹರಿಸಿದ್ದು, ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮಸೀದಿ ಕೊಠಡಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಮೌಲ್ವಿ ತಂದೆಯಿಂದಲೇ ಕೃತ್ಯ
ಇದೇ ವರ್ಷ ಏಪ್ರಿಲ್ 24 ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕರ್ನಾಟಕ ಸಚಿವ ಸಂಪುಟ ಸಭೆ ನಡೆದಿತ್ತು. ಕಳೆದ ವರ್ಷ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು.
Published On - 7:49 pm, Tue, 3 June 25