
ಚಿಕ್ಕಬಳ್ಳಾಪುರ, ಜುಲೈ 04: ಪ್ರೇಮಿಗಳ ಪಾಲಿನ ಪ್ರೇಮಧಾಮ, ಪ್ರವಾಸಿ ತಾಣ ನಂದಿಗಿರಿಧಾಮದಲ್ಲಿ ಜುಲೈ 2ರಂದು ರಾಜ್ಯ ಸರ್ಕಾರದ 14ನೇ ಸಚಿವ ಸಂಪುಟ ಸಭೆ (cabinet meeting) ನಡೆದಿದೆ. ಇದೇ ಸಚಿವ ಸಂಪುಟ ಸಭೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಗೆ ವರದಾನವಾಗಿದ್ದು, 141 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈ-ಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣ ಸೇರಿದಂತೆ ಇತರೆ ಭರಪೂರ ಯೋಜನೆಗಳು ದೊರೆತಿವೆ.
ಸಾಕಷ್ಟು ಗಮನ ಸೆಳೆದಿದ್ದ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ನಡೆದ ರಾಜ್ಯ ಸರ್ಕಾರದ 14ನೇ ವಿಶೇಷ ಸಚಿವ ಸಂಪುಟ ಸಭೆ ಜಿಲ್ಲೆಗೆ ವರದಾನವಾಗಿದೆ. ಫಲಪುಷ್ಪಗಿರಿಧಾಮಗಳ ನಗರಿ ಎಂಬ ಖ್ಯಾತಿಯ ಚಿಕ್ಕಬಳ್ಳಾಪುರದಲ್ಲಿ 141 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈ-ಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹೀಗಾಗಿ ಜಿಲ್ಲೆಯ ಹೂ ಬೆಳಗಾರರಲ್ಲಿ ಮಂದಹಾಸ ಮೂಡಿದೆ.
ಇದನ್ನೂ ಓದಿ: ಕಾರ್ಮಿಕರಿಗೆ ಗುಡ್ ನ್ಯೂಸ್: ಪ್ರೇಮಿಗಳ ಹಾಟ್ ಸ್ಪಾಟ್ ನಂದಿ ಬೆಟ್ಟಕ್ಕೂ ಭರ್ಜರಿ ಕೊಡುಗೆ : ಸಂಪುಟ ಸಭೆಯ ಮುಖ್ಯಾಂಶಗಳು
ಈ ಮೊದಲು ಪಿ.ಪಿ. ಮಾದರಿಯಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಘೋಷಣೆ ಮಾಡಲಾಗಿತ್ತು. ಆದರೆ ಜಿಲ್ಲೆಯ ಶಾಸಕರು ಖಾಸಗಿ ಸಹಬಾಗಿತ್ವ ಬದಲು ನೇರವಾಗಿ ಸರ್ಕಾರದಿಂದಲೇ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒತ್ತಾಯ ಮಾಡಿದರು. ಇದರಿಂದ ನಂದಿಗಿರಿಧಾಮದಲ್ಲಿ ನಡೆದ ಸಚಿವ ಸಂಪುಟದಲ್ಲಿ ಅಸ್ತು ಎನ್ನಲಾಗಿದೆ. ಈ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ನಂದಿಬೆಟ್ಟದಲ್ಲಿ ಅಭಿವೃದ್ದಿ ಕಾಮಗಾರಿಗಳಿಗಾಗಿ 50 ಕೋಟಿ ರೂ.ಗಳ ವಿಶೇಷ ಪ್ಯಾಕೆಜ್ ಘೋಷಣೆ ಮಾಡಲಾಗಿದೆ. ಇದಲ್ಲದೇ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ 11 ಕೋಟಿ ರೂ. ವೆಚ್ಚದಲ್ಲಿ ಎಂಆರ್ಐ ಸ್ಕ್ಯಾನಿಂಗ್ ಯಂತ್ರ ಅಳವಡಿಕೆಗೆ ಅನುಮತಿ ನೀಡಲಾಗಿದ್ದು, ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಅಮರಾವತಿ ಬಳಿ ನಿರ್ಮಾಣವಾಗುತ್ತಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಎರಡನೇ ಹಂತದ ಕಾಮಗಾರಿಗೆ 123 ಕೋಟಿ ರೂ. ಮಂಜೂರು ಮಾಡಲಾಗಿದೆ.
ಚಿಂತಾಮಣಿ ತಾಲೂಕು ಹಾಗೂ ಶಿಡ್ಲಘಟ್ಟ ತಾಲೂಕಿನ 119 ಕೆರೆಗಳಿಗೆ 237 ಕೋಟಿ ರೂ. ವೆಚ್ಚದಲ್ಲಿ ಎಚ್ ಎನ್ ವ್ಯಾಲಿ ಸಂಸ್ಕರಿತ ತ್ಯಾಜ್ಯ ನೀರಿನ್ನು ಹರಿಸಲು ಅನುನೋದನೆ ನೀಡಲಾಗಿದೆ. ಚಿಂತಾಮಣಿ ನಗರದ ಜನತೆಗೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಿರುವ ಭಕ್ತರಹಳ್ಳಿ ಅರಸೀಕೆರೆ ಕೆಳಭಾಗದಲ್ಲಿ ಹೊಸ ಕೆರೆ ನಿರ್ಮಾಣಕ್ಕೆ 36 ಕೋಟಿ ರೂ.ಗೆ ಅಸ್ತು ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ, ಬಾಗೇಪಲ್ಲಿ ಹೆಸರು ಬದಲಾವಣೆಗೆ ಸಚಿವ ಸಂಪುಟ ಅಸ್ತು
ಇಷ್ಟೇ ಇಲ್ಲದೆ ಬಾಗೇಪಲ್ಲಿಯಲ್ಲಿ ಗಂಟ್ಲಮಲ್ಲಮ್ಮ ಡ್ಯಾಂ ನಿರ್ಮಾಣಕ್ಕೆ 189 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರಿಂದ ಜಿಲ್ಲೆಯ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಎತ್ತಿನಹೊಳೆ ಯೋಜನೆ ಸಾಧಕ ಭಾದಕಗಳು ಹಾಗೂ ಎಚ್ಎನ್ ವ್ಯಾಲಿ ನೀರಿನ ತೃತೀಯ ಹಂತದ ಶುದ್ದೀಕರಣ ಬೇಡ ಎಂದಿರುವುದು ಜಿಲ್ಲೆಯ ನೀರಾವರಿ ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.