ಕಾರ್ಮಿಕರಿಗೆ ಗುಡ್ ನ್ಯೂಸ್: ಪ್ರೇಮಿಗಳ ಹಾಟ್ ಸ್ಪಾಟ್ ನಂದಿ ಬೆಟ್ಟಕ್ಕೂ ಭರ್ಜರಿ ಕೊಡುಗೆ : ಸಂಪುಟ ಸಭೆಯ ಮುಖ್ಯಾಂಶಗಳು
ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎತ್ತಿನಹೊಳೆ ಯೋಜನೆಗೆ ಆದ್ಯತೆ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮರುನಾಮಕರಣ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಒಬಿಸಿ ವರ್ಗಕ್ಕೆ UPSC ತರಬೇತಿ, ಹೊಸ ತಾಲ್ಲೂಕುಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಯೋಜನೆಗಳನ್ನು ಘೋಷಿಸಲಾಗಿದೆ.

ಚಿಕ್ಕಬಳ್ಳಾಪುರ, ಜುಲೈ 02: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ನಂದಿ ಬೆಟ್ಟದಲ್ಲಿ (Nandi Hills) 14ನೇ ಸಚಿವ ಸಂಪುಟ ಸಭೆ (Cabinet Meeting) ನಡೆಯಿತು. ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರತೀ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದ್ದು ಇದಕ್ಕೆ 1125.25 ಕೋಟಿ ಮಂಜೂರು ಮಾಡಲಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ವಿನೂತನ ಮಾದರಿಯಲ್ಲಿ ಶಾಲೆ ಆರಂಭಿಸಲಿದ್ದೇವೆ. ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಪರೀಕ್ಷೆ ತರಬೇತಿ ನೀಡಲು 10 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಎರಡು ವಸತಿ ಶಾಲೆಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ಹೊಸ ತಾಲೂಕುಗಳಲ್ಲಿ ಸಮುದಾಯ ಆರೋಗ್ಯ ಸ್ಥಾಪಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಎತ್ತಿನಹೊಳೆಗೆ ಆದ್ಯತೆ
ಎತ್ತಿನಹೊಳೆ ಯೋಜನೆಗೆ 23,251 ಕೋಟಿ ರೂ. ಮಂಜೂರು ಮಾಡಲಾಗಿದೆ. ಈಗಾಗಲೇ ಎತ್ತಿನಹೊಳೆ ಯೋಜನೆಗೆ 17 ಸಾವಿರ ಕೋಟಿ ರೂ. ಖರ್ಚಾಗಿದೆ. ಎತ್ತಿನಹೊಳೆ ಯೋಜನೆಯಿಂದ 21.1 ಟಿಎಂಸಿ ನೀರು ಸಿಗಲಿದೆ. ಕುಡಿಯುವ ಉದ್ದೇಶಕ್ಕೆ 14 ಟಿಎಂಸಿ ನೀರು ಬೇಕು. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಸಿಗಲಿದೆ. ಮೊದಲು ಕುಡಿಯುವ ನೀರಿನ ಯೋಜನೆ ಮುಗಿಸಲು ನಿರ್ಧಾರ ಮಾಡಿದ್ದೇವೆ. ಶೇಕಡಾ 96ರಷ್ಟು ಕೆಲಸ ಮುಗಿದಿದೆ. ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸುತ್ತೇವೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮರುನಾಮಕರಣ
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಮತ್ತು ಬಾಗೇಪಲ್ಲಿ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲು ನಿರ್ಧಾರ ಮಾಡಿದ್ದೇವೆ. ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ.
ನಂದಿ ಬೆಟ್ಟ ಅಭಿವೃದ್ಧಿ ಹಣ ಬಿಡುಗಡೆ: ಡಿಕೆ ಶಿವಕುಮಾರ್
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕೋಲಾರದ ಅಮಾನಿಕೆರೆ, ಅಂತರಗಂಗಾ ಬೆಟ್ಟ ಅಭಿವೃದ್ಧಿಗೆ 79 ಕೋಟಿ ರೂ., ಗಂಟ್ಲ ಮಲ್ಲಮ್ಮ ಜಲಾಶಯ ನಿರ್ಮಾಣಕ್ಕೆ 189 ಕೋಟಿ ರೂ., ನಂದಿಗಿರಿಧಾಮ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆಗೆ ಹೆಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ, ಬಾಗೇಪಲ್ಲಿ ಹೆಸರು ಬದಲಾವಣೆಗೆ ಸಚಿವ ಸಂಪುಟ ಅಸ್ತು
ಚಿಂತಾಮಣಿಯಲ್ಲಿ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಅನುಮೋದನೆ ದೊರೆತಿದೆ. ಚಿಕ್ಕಬಳ್ಳಾಪುರದಲ್ಲಿ ಅಂತರ್ ರಾಷ್ಟ್ರೀಯ ಹೂವಿನ ಮಾರುಕಟ್ಟೆಗೆ 141 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು 36 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಬೆಂಗಳೂರು ಉತ್ತರ ವಿವಿ ಎರಡನೇ ಹಂತದಲ್ಲಿ ಕಾಮಗಾರಿಗೆ 123 ಕೋಟಿ ರೂಪಾಯಿ ವೆಚ್ಚದಲ್ಲಿ ಅನುದಾನ ನೀಡಲಾಗುವುದು. ಎಚ್.ಎನ್. ವ್ಯಾಲಿ ಯೋಜನೆ ವಿಸ್ತರಣೆ, ಶಿಡ್ಲಘಟ್ಟದ 45 ಕೆರೆಗಳು ಸೇರಿದಂತೆ ಚಿಂತನೀಯ ಕೆರೆಗಳಿಗೆ ನೀರು ಹರಿಸಲು ಅನುಮೋದನೆ ದೊರೆತಿದೆ ಎಂದು ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Wed, 2 July 25








