ತಾಕತ್ತು ಇದ್ರೆ ಕೋಚಿಮುಲ್ ವಿಭಜನೆ ನಿಲ್ಲಿಸಿ: ರಮೇಶ್​ಕುಮಾರ್, ನಂಜೇಗೌಡರಿಗೆ ಸಚಿವ ಸುಧಾಕರ್ ಸವಾಲು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 19, 2022 | 8:23 PM

ಇವರಿಬ್ಬರೂ ನಯ ವಂಚಕರು. ತಾಕತ್ತು ಇದ್ದರೆ ಕೋಚಿಮುಲ್ ವಿಭಜನೆ ನಿಲ್ಲಿಸಲಿ ಎಂದು ಸಚಿವ ಡಾ.ಕೆ.ಸುಧಾಕರ ಸವಾಲು ಹಾಕಿದರು.

ತಾಕತ್ತು ಇದ್ರೆ ಕೋಚಿಮುಲ್ ವಿಭಜನೆ ನಿಲ್ಲಿಸಿ: ರಮೇಶ್​ಕುಮಾರ್, ನಂಜೇಗೌಡರಿಗೆ ಸಚಿವ ಸುಧಾಕರ್ ಸವಾಲು
ಕಾಂಗ್ರೆಸ್ ಶಾಸಕ ರಮೇಶ್​ ಕುಮಾರ್ ಮತ್ತು ಡಾ.ಕೆ.ಸುಧಾಕರ
Follow us on

ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ನಿಲ್ಲಿಸಲು ಹೈಕೋರ್ಟ್​ ತಡೆಯಾಜ್ಞೆ ತಂದಿರುವವರ ವಿರುದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹರಿಹಾಯ್ದ ಘಟನೆ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿ ನಡೆಯಿತು. ಪ್ರಕರಣದ ಹಿಂದೆ ಶಾಸಕರಾದ ಕೆ.ಆರ್.ರಮೇಶ ಕುಮಾರ್ ಹಾಗೂ ಶಾಸಕ ಕೆ.ವೈ.ನಂಜೇಗೌಡ ಅವರೇ ಇದ್ದಾರೆ ಎನ್ನುವ ಭಾವನೆಯಿಂದ ‘ಗುಳ್ಳೆನರಿಗಳು’ ಎಂದು ಟೀಕಿಸಿದರು. ಇವರಿಬ್ಬರೂ ನಯ ವಂಚಕರು. ತಾಕತ್ತು ಇದ್ದರೆ ಕೋಚಿಮುಲ್ ವಿಭಜನೆ ನಿಲ್ಲಿಸಲಿ ಎಂದು ಸವಾಲು ಹಾಕಿದರು. ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್​ ವಿಭಜನೆ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಪ್ರತಿಷ್ಠೆಯ ವಿಚಾರವಾಗಿ ಪರಿವರ್ತನೆಯಾಗಿದೆ.

ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿಯೂ ಸಚಿವ ಸುಧಾಕರ್ ಶಿವಶಂಕರರೆಡ್ಡಿ ಮತ್ತು ರಮೇಶ್​ ಕುಮಾರ್ ವಿರುದ್ಧ ಹರಿಹಾಯ್ದಿದ್ದರು. ‘ಶಿವಶಂಕರರೆಡ್ಡಿ, ರಮೇಶ್ ಕುಮಾರ್ ಅವರಂತಹ ನೂರು ಜನ ಅಡ್ಡ ಬಂದರೂ ಕೋಚಿಮುಲ್ ವಿಭಜಿಸುವುದಂತೂ ಖಚಿತ. ಹಾಲು ಒಕ್ಕೂಟವನ್ನು ಬೇರ್ಪಡಿಸಲು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಪತ್ರ ಬರೆದಿದ್ದರು. ಆದರೆ ಈಗ ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ನಮ್ಮ ಜಿಲ್ಲೆಯ ಪಾಲು ನಮಗೆ ಸಿಗಬೇಕು ಎಂದು ಕೋರಿದ್ದೇನೆ. ಪ್ರತಿ ಬಾರಿ ಕೋಲಾರದಲ್ಲಿರುವ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟಕ್ಕೆ ಚಿಕ್ಕಬಳ್ಳಾಪುರದ ರೈತರು ಹೋಗಬೇಕೆಂದರೆ ಸಾಧ್ಯವಿಲ್ಲ’ ಎಂದು ದೂರಿದ್ದರು.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್​ನಲ್ಲಿ ಶಾಸಕ ರಮೇಶ್ ಕುಮಾರ್ ರಿಂಗ್ ಮಾಸ್ಟರ್​ನಂತೆ ಇದ್ದಾರೆ. ಬ್ಯಾಂಕ್ ವ್ಯವಹಾರಗಳಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲೂ ರಾಜಕೀಯ ಬೆರಕೆಯಾಗುತ್ತಿದೆ ಎಂದು ಆರೋಪ ಮಾಡಿದ್ದರು. ಕಳೆದ ನವೆಂಬರ್ 8, 2021ರಂದು ಈ ಕುರಿತು ಕರ್ನಾಟಕ ಸಚಿವ ಸಂಪುಟವು ನಿರ್ಧಾರ ತೆಗೆದುಕೊಂಡಿತ್ತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತ್ಯೇಕಿಸುವ ನಿರ್ಣಯವನ್ನು ಕರ್ನಾಟಕ ರಾಜ್ಯ ಸಚಿವ ಸಂಪುಟವು ನಿರ್ಣಯ ತೆಗೆದುಕೊಂಡಿತ್ತು. ಈ ನಿರ್ಣಯದ ಹಿಂದೆ ಒತ್ತಾಸೆಯಾಗಿ ಡಾ.ಕೆ.ಸುಧಾಕರ್ ಇದ್ದರು. ಹಲವು ವರ್ಷಗಳಿಂದ ಈ ವಿಷಯ ಕೋಲಾರ-ಚಿಕ್ಕಬಳ್ಳಾಪುರ ನಾಯಕರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಕೋಚಿಮುಲ್ ಒಕ್ಕೂಟ ವಿಭಜನೆಗೆ ಸರ್ಕಾರದ ಸಮ್ಮತಿ: ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿದ ಸಚಿವ ಸುಧಾಕರ್

ಇದನ್ನೂ ಓದಿ: ಕೋಚಿಮುಲ್​ನಲ್ಲಿ ಅವ್ಯವಹಾರ ಆರೋಪ: ಶಾಸಕರು, ಸಂಸದರ ವಾಕ್ಸಮರ