ಕೋಚಿಮುಲ್ ಒಕ್ಕೂಟ ವಿಭಜನೆಗೆ ಸರ್ಕಾರದ ಸಮ್ಮತಿ: ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿದ ಸಚಿವ ಸುಧಾಕರ್
ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘ ಪ್ರತ್ಯೇಕಗೊಳಿಸುವುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು ಎಂದು ಸುಧಾಕರ್ ಹೇಳಿದರು.
ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ವರ್ಷಗಳ ಬೇಡಿಕೆ ಇದೀಗ ಈಡೇರಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘ (KOCHIMUL) ಪ್ರತ್ಯೇಕಗೊಳಿಸುವುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ಸ್ವಂತ ಸಹಕಾರ ಹಾಲು ಒಕ್ಕೂಟ ಪಡೆಯುವ ಜಿಲ್ಲೆಯ ಕನಸು ನನಸಾಗಿದೆ. ಇದರಿಂದ ಜಿಲ್ಲೆಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬಹಳಷ್ಟು ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಜನರ ಕೋರಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ಇತರ ಸಂಪುಟ ಸಹೋದ್ಯೋಗಿಗಳಿಗೆ ಅವರು ಧನ್ಯವಾದ ಸಲ್ಲಿಸಿದರು.
ಕೋಚಿಮುಲ್ ಷೇರಿನಲ್ಲಿ ₹ 35 ಕೋಟಿ ಚಿಕ್ಕಬಳ್ಳಾಪುರಕ್ಕೆ ಸೇರುತ್ತದೆ. ₹ 15 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ನಿಧಿ ಇದೆ. ಮೀಸಲು ನಿಧಿಯಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಪಾಲು ಇದೆ. ಹೀಗಾಗಿ ಸರ್ಕಾರಕ್ಕೂ ಇದರಿಂದ ನೂತನ ಒಕ್ಕೂಟ ರಚನೆಯಿಂದ ಸರ್ಕಾರಕ್ಕೆ ಆರ್ಥಿಕವಾಗಿ ಅಷ್ಟೇನೂ ಹೊರೆ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದರು.
ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ಬೇಕು ಎನ್ನುವುದು ನ್ಯಾಯಯುತವಾದ ಬೇಡಿಕೆ ಆಗಿತ್ತು. ಆಡಳಿತ, ರೈತರ ಹಿತದೃಷ್ಟಿಯಿಂದ ಇದು ಸೂಕ್ತವೂ ಆಗಿತ್ತು. ಇದರಲ್ಲಿ ರಾಜಕೀಯ ಏನೂ ಇಲ್ಲ. ರೈತರಿಗಾಗಿ ಸರ್ಕಾರವು ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬೇಕು ಎಂಬ ಬೇಡಿಕೆಯೂ ಇದೆ. ಜನರ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಹಾಲು ಉತ್ಪಾದಕರ ಸಂಘಗಳನ್ನು ಪ್ರತ್ಯೇಕಿಸುವ ಸರ್ಕಾರದ ನಿರ್ಧಾರವನ್ನು ಸಚಿವ ಡಾ.ಕೆ.ಸುಧಾಕರ್ ಶ್ಲಾಘಿಸಿದ್ದಾರೆ. ಹಾಲು ಉತ್ಪಾದಕರ ಸಂಘ ಪ್ರತ್ಯೇಕಿಸುವ ಕುರಿತು ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಂಪುಟದ ಈ ನಿರ್ಧಾರಕ್ಕೆ ಸಚಿವ ಡಾ.ಸುಧಾಕರ್ ಒತ್ತಾಸೆಯಾಗಿ ನಿಂತಿದ್ದರು. ಸಭೆಯು ಒಕ್ಕೂಟ ಪ್ರತ್ಯೇಕಿಸುವ ಕುರಿತು ನಿರ್ಣಯ ತೆಗೆದುಕೊಂಡ ನಂತರ ಡಾ.ಸುಧಾಕರ್ ಸಂಪುಟ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಸರ್ಕಾರದ ಈ ನಿರ್ಧಾರವನ್ನು ರಮೇಶ್ ಕುಮಾರ್ ವಿರುದ್ಧದ ಸಮರದಲ್ಲಿ ಸುಧಾಕರ್ಗೆ ಜಯ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಇದನ್ನೂ ಓದಿ: ‘ನಾನಿರುವುದೇ ನಿಮಗಾಗಿ’ ಹಾಡು ಹಾಡಿ ಜನರನ್ನು ರಂಜಿಸಿದ ಸಚಿವ ಸುಧಾಕರ್ ಇದನ್ನೂ ಓದಿ: ಕರ್ನಾಟಕದ ಜಿಮ್ಗಳಿಗೆ ಮಾರ್ಗಸೂಚಿ ನೀಡಲಾಗುವುದು: ಸಚಿವ ಕೆ ಸುಧಾಕರ್ ಹೇಳಿಕೆ