ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು ಹಿನ್ನಲೆ: ನಿಗದಿತ ಪ್ರವಾಸಿಗರಿಗೆ ಮಾತ್ರ ಪ್ರವೇಶ, ಟೋಕನ್ ವ್ಯವಸ್ಥೆ ಜಾರಿ; ವಿವರ ಇಲ್ಲಿದೆ

| Updated By: ganapathi bhat

Updated on: Jul 23, 2021 | 6:26 PM

ಪ್ರವಾಸಿಗರು ಬೆಟ್ಟಕ್ಕೆ ಪ್ಲಾಸ್ಟಿಕ್‌ ತರುವಂತಿಲ್ಲ. ಯಾವುದೇ ಕಾರಣಕ್ಕೂ ಕೊವಿಡ್‌ ನಿಯಮಗಳನ್ನು ಉಲ್ಲಂಘಿಸದಂತೆ ವರ್ತಿಸಬೇಕು. ಇಲ್ಲದೇ ಹೋದರೆ ದಂಡ ಬೀಳಲಿದೆ ಅನ್ನೋದು ಕೂಡ ಪ್ರವಾಸಿಗರು ತಿಳಿದಿರಲೇ ಬೇಕಾದ ಎಚ್ಚರಿಕೆ ಅಂಶವಾಗಿದೆ.

ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು ಹಿನ್ನಲೆ: ನಿಗದಿತ ಪ್ರವಾಸಿಗರಿಗೆ ಮಾತ್ರ ಪ್ರವೇಶ, ಟೋಕನ್ ವ್ಯವಸ್ಥೆ ಜಾರಿ; ವಿವರ ಇಲ್ಲಿದೆ
ನಂದಿ ಬೆಟ್ಟದ ಮೇಲಿಂದ ಕಾಣುವ ವಿಹಂಗಮ ದೃಶ್ಯ
Follow us on

ಚಿಕ್ಕಬಳ್ಳಾಪುರ: ತಿರುಪತಿ, ಶಬರಿಮಲೆ ದೇವಾಲಯ ದರ್ಶನಕ್ಕೆ ಆನ್​ಲೈನ್, ಆಫ್​ಲೈನ್ ವಿಧಾನದಲ್ಲಿ ಟಿಕೆಟ್ ಬುಕ್ ಮಾಡಿ ಪ್ರಯಾಣ ಮಾಡೋ ಭಕ್ತರನ್ನು ನೋಡಿದ್ದಾಯ್ತು. ಇದೀಗ ನಂದಿಬೆಟ್ಟಕ್ಕೂ ಅದೇ ಪರಿಸ್ಥಿತಿ ಬಂದಿದೆ. ತಿರುಪತಿ ಶಬರಿಮಲೆಗಳಲ್ಲಿ ದೇವರ ದರ್ಶನದ, ದೇವತಾ ಆರಾಧನೆಯ ಕಾತರವಿದ್ದರೆ ನಂದಿಬೆಟ್ಟದಲ್ಲಿ ಸೌಂದರ್ಯ ಆರಾಧನೆಯ ಆತುರವಿರುತ್ತದೆ. Love is God, Beauty is God ಅನ್ನೋರಿಗೆ ಇಲ್ಲಿ ಕಾಣುವ ಪ್ರಕೃತಿ ಸೌಂದರ್ಯವೇ ದೇವರ ದರ್ಶನವಿದ್ದಂತೆ. ಮನಸಿಗೆ ಶಾಂತಿ, ಖುಷಿ, ನೆಮ್ಮದಿ ಎಲ್ಲವೂ.

ಕೊರೊನಾ ಲಾಕ್​ಡೌನ್ ತೆರವಾದ ಬಳಿಕ ಹೆಚ್ಚಾಗಿ ಬರ್ತಿರೋ ಪ್ರವಾಸಿಗರನ್ನು ನಿಭಾಯಿಸೋಕೆ ಇಲ್ಲಿನ ಅಧಿಕಾರಿಗಳು ಇದೀಗ ಟೋಕನ್ ತಂತ್ರದ ಮೊರೆ ಹೋಗಿದ್ದಾರೆ. ಶನಿವಾರ, ಭಾನುವಾರ ಬಂತೆಂದರೆ ಕಿಕ್ಕಿರಿದು ತುಂಬಿ ಹೋಗೋ ನಂದಿಬೆಟ್ಟದ ರಸ್ತೆ ತುಂಬಾ ಪ್ರವಾಸಿಗರ ಕಾರು, ಬೈಕ್​ಗಳ ದಾಳಿಗೆ ಪೊಲೀಸ್ ಇಲಾಖೆ ಸೇರಿದಂತೆ ನಂದಿಬೆಟ್ಟ ನಿರ್ವಹಣೆ ಹೊತ್ತಿರೊ ಅಧಿಕಾರಿಗಳು ಹೈರಾಣಾಗಿದ್ದಾರೆ.

ಸೀಮಿತ ಪಾರ್ಕಿಂಗ್ ಪ್ರದೇಶದಲ್ಲಿ ಅಸಂಖ್ಯಾತ ವಾಹನಗಳಿಗೆ ಸೌಲಭ್ಯ ಕಲ್ಪಿಸಲಾಗದೇ, ಕೊರೊನಾ ನಿಯಮಗಳನ್ನು ಜಾರಿಗೆ ತರಲಾಗದೇ ಪರದಾಡ್ತಿರೋ ಅಧಿಕಾರಿಗಳು ಪ್ರವಾಸಿಗರನ್ನು ನಿಯಂತ್ರಿಸಲು ಟೋಕನ್ ವ್ಯವಸ್ಥೆ ಜಾರಿಗೆ ತಂದಿದ್ದಾರೆ.

ಮೂರನೇ ಅಲೆ ಆತಂಕದ ಹೆದರಿಕೆ ಇಲ್ಲದೇ ಬಿಂದಾಸ್ ಆಗಿ ನಂದಿ ಗಿರಿಧಾಮಕ್ಕೆ ದಾಂಗುಡಿ ಇಡೋ ಪ್ರವಾಸಿಗರಿಗೆ ಇನ್ನು ಮುಂದೆ ಮುಕ್ತ ಪ್ರವೇಶ ಸಿಗಲಾರದು. ಜಿಲ್ಲಾಡಳಿತದ ಹೊಸ ನಿಯಮಗಳ ಪ್ರಕಾರ ನಂದಿಗಿರಿಧಾಮಕ್ಕೆ ನಿತ್ಯ 300 ಕಾರು, 500 ದ್ವಿಚಕ್ರ ವಾಹನಗಳಿಗೆ ಟೋಕನ್‌ ಕೊಡಲು ನಿರ್ಧರಿಸಿದ್ದು ಆ ಮೂಲಕ ಗಿರಿಧಾಮದ ಮೇಲೆ ವಾಹನ ದಟ್ಟಣೆ ಜೊತೆಗೆ ಪ್ರವಾಸಿಗರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದೆ.

ಮೊದಲ ಹಂತದಲ್ಲಿ ಪ್ರವೇಶ ದ್ವಾರದಲ್ಲಿಯೇ ಟೋಕನ್‌ ವಿತರಿಸಲಿರುವ ನಂದಿಗಿರಿಧಾಮದ ಅಧಿಕಾರಿಗಳು ಬಳಿಕ ಮುಂದಿನ ದಿನಗಳಲ್ಲಿ ಸಂಪೂರ್ಣ ಅನ್‌ಲೈನ್‌ ಮಾಡಲು ಯೋಜನೆ ರೂಪಿಸಿದ್ದಾರೆ. ಹೀಗಾಗಿ ಇನ್ನೂ ಮುಂದೆ ನಂದಿ ಗಿರಿಧಾಮದ ಮೇಲೆ ಪಾರ್ಕಿಂಗ್‌ ಸ್ಥಳವಕಾಶ ನೋಡಿಕೊಂಡು ಕಾರು, ಬೈಕ್‌ಗಳಲ್ಲಿ ಬರುವ ಪ್ರವಾಸಿಗರಿಗೆ ಟೋಕನ್‌ ವಿತರಿಸಲಿದ್ದಾರೆ.

ನಂದಿಗಿರಿಧಾಮದಲ್ಲಿ ಮಾಸ್ಕ್‌ ಹಾಕದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಪ್ರವಾಸಿಗರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ. ಪ್ರವಾಸಿಗರು ಬೆಟ್ಟಕ್ಕೆ ಪ್ಲಾಸ್ಟಿಕ್‌ ತರುವಂತಿಲ್ಲ. ಯಾವುದೇ ಕಾರಣಕ್ಕೂ ಕೊವಿಡ್‌ ನಿಯಮಗಳನ್ನು ಉಲ್ಲಂಘಿಸದಂತೆ ವರ್ತಿಸಬೇಕು. ಇಲ್ಲದೇ ಹೋದರೆ ದಂಡ ಬೀಳಲಿದೆ ಅನ್ನೋದು ಕೂಡ ಪ್ರವಾಸಿಗರು ತಿಳಿದಿರಲೇ ಬೇಕಾದ ಮತ್ತೊಂದು ಎಚ್ಚರಿಕೆ ಅಂಶವಾಗಿದೆ.

ವರದಿ: ಭೀಮಪ್ಪ ಪಾಟೀಲ್

ಇದನ್ನೂ ಓದಿ: Nandi Hills: ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ತ್ವರಿತವಾಗಿ ರೋಪ್ ವೇ ನಿರ್ಮಿಸಲು ಸೂಚಿಸಿದ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್

ನಂದಿಗಿರಿಧಾಮದತ್ತ ಹರಿದು ಬಂದ ಪ್ರವಾಸಿಗರ ದಂಡು; ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಬ್ಬಂದಿಗಳ ಹರಸಾಹಸ

(Nandi Hills Tourists Control Police and Officers decide to go for Online Token System)