ಪ್ರೇಯಸಿ ಜೊತೆ ಪ್ರವಾಸಕ್ಕೆ ಹೊರಟ ಗಂಡ! 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಗೃಹಿಣಿ ಮನನೊಂದು ನೇಣಿಗೆ ಶರಣು
ಹೆಣ್ಣೂರು ಕದಿರೇನಹಳ್ಳಿ ಗ್ರಾಮದ ಮುನಿರಾಜು-ದೇವಮ್ಮ ದಂಪತಿಗೆ ಮೋನಿಕಾ ಸೇರಿ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಅದರಲ್ಲಿ ಮೋನಿಕಾ ದೊಡ್ಡವಳು. ಕಷ್ಟಪಟ್ಟು ಡಿಗ್ರಿ ಓದಿಸಿದ್ದೆವು. ದೊಡ್ಡವಳ ಬಾಳನ್ನು ಅಳಿಯ ಹಾಳು ಮಾಡಿದ್ದಾನೆ ಅಂತಾ ಮೃತಳ ತಂದೆ ತಾಯಿ ಗೋಳಾಡಿದ್ದಾರೆ.

ಅವರು ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವರ ತಂದೆ ತಾಯಿ ಅದ್ದೂರಿ ಮದುವೆ ಮಾಡಿದ್ದರು. ಮದುವೆಯಾಗಿ ಕೇವಲ 8 ತಿಂಗಳು ಆಗಿತ್ತು. ಕೈಹಿಡಿದ ಮನದನ್ನೆ ಸುಂದರಿಯಾಗಿದ್ರೂ… ಆಕೆಯ ಗಂಡ ಆಕೆಯನ್ನು ತವರು ಮನೆಗೆ ಕಳುಹಿಸಿ ಪ್ರೇಯಸಿಯ ಜೊತೆ ಸುತ್ತಾಡ್ತಿದ್ದ, ಸಾಲದು ಅಂತ ತಾನು ಪ್ರೇಯಸಿ ಜೊತೆ ಸುತ್ತಾಡ್ತಿರುವ ಹಾಗೂ ಮೋಜು ಮಸ್ತಿ ಮಾಡ್ತಿರುವ ಫೋಟೊಗಳನ್ನು, ತನ್ನ ನವ ಪತ್ನಿಗೆ ಕಳುಹಿಸಿದ್ದ. ಇದ್ರಿಂದ ಮನನೊಂದ ನವವಿವಾಹಿತೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ನೋಡಿ.
ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿ ಗ್ರಾಮದ 20 ವರ್ಷದ ಮೋನಿಕಾ ಹಾಗೂ ಚಿಕ್ಕಬಳ್ಳಾಪುರ ನಗರ ಪ್ರಶಾಂತ್ ನಗರ ನಿವಾಸಿ 25 ವರ್ಷದ ಭಾರ್ಗವ್, ಕೇವಲ 8 ತಿಂಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯಾಗಿ ಸುಖ ಸಂಸಾರದಲ್ಲಿ ತೇಲಾಡುತ್ತಿದ್ದಾಗ ಅದೇನ್ ಆಯಿತೊ ಏನೊ… ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪ ಇತ್ತಂತೆ. ಇದ್ರಿಂದ ಮೋನಿಕಾ ಗಂಡ ಭಾರ್ಗವ, ವಿಜಯದಶಮಿ ಹಬ್ಬದ ಪ್ರಯುಕ್ತ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದ. ಅದಾದಮೇಲೆ ವಾಪಸ್ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿಲ್ಲ. ಇದ್ರಿಂದ ಅನುಮಾನಗೊಂಡ ಪತ್ನಿ, ಕರೆದುಕೊಂಡು ಹೋಗಲು ಹೇಳಿದಾಗ… ಬೇರೆಯದ್ದೆ ಕತೆ ಹೇಳಿದ್ದ ಗಂಡ ಭಾರ್ಗವ. ಇಂದು ಬುಧವಾರ ಗಂಡ ಬರುವುದರ ಬದಲು ಆತನು ಕಳುಹಿಸಿದ್ದ ಕೆಲವು ಫೊಟೊಗಳು ಮೋನಿಕಾ ವಾಟ್ಸಪ್ ಗೆ ಬಂದಿದ್ದವು! ಅದನ್ನು ನೋಡಿ ದಂಗಾದ ಮೋನಿಕಾ…, ತವರು ಮನೆಯಲ್ಲೆ ನೇಣು ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾಳೆ.
ಗಂಡ ಭಾರ್ಗವ… ತವರು ಮನೆಯಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಹೋಗುವುದರ ಬದಲು… ತಾನು ಬೇರೆ ಯುವತಿಯನ್ನು ಪ್ರೀತಿ ಮಾಡ್ತಿದ್ದೀನಿ, ಆಕೆಯೂ ತನ್ನನ್ನು ಪ್ರೀತಿ ಮಾಡ್ತಿದ್ದಾಳೆ, ಇಬ್ಬರೂ ಸೇರಿ ಪ್ರವಾಸದಲ್ಲಿ ಇದ್ದೇವೆ ಅಂತ ಹೇಳಿದ್ದ. ಜೊತೆಗೆ, ಲವ್ವರ್ ಜೊತೆ ಇರುವ ಕೆಲವು ಪೋಟೊಗಳನ್ನು ವಾಟ್ಸಪ್ ಗೆ ಪೋಸ್ಟ್ ಮಾಡಿದ್ದಾನಂತೆ. ಇದ್ರಿಂದ ಮನನೊಂದ ಮೋನಿಕಾ, ತನ್ನ ಸಾವಿಗೆ ತನ್ನ ಗಂಡ ಭಾರ್ಗವನೇ ಕಾರಣ ಅಂತಾ ಡೆತ್ ನೋಟ್ ಬರೆದಿಟ್ಟು, ತಂದೆಯ ಮನೆ ಮೇಲೆ ಇರುವ ಕೊಠಡಿಯಲ್ಲೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.
ಇನ್ನು ಹೆಣ್ಣೂರು ಕದಿರೇನಹಳ್ಳಿ ಗ್ರಾಮದ ಮುನಿರಾಜು-ದೇವಮ್ಮ ದಂಪತಿಗೆ ಮೋನಿಕಾ ಸೇರಿ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಅದರಲ್ಲಿ ಮೋನಿಕಾ ದೊಡ್ಡವಳು. ಕಷ್ಟಪಟ್ಟು ಡಿಗ್ರಿ ಓದಿಸಿದ್ದೆವು. ದೊಡ್ಡವಳ ಬಾಳನ್ನು ತನ್ನ ಅಳಿಯ ಹಾಳು ಮಾಡಿದ್ದಾನೆ. ಯಾವ ಪೋಷಕರಿಗೂ ಇಂಥ ಗತಿ ಬರಬಾರದು. ಯಾರೂ ಕೂಡ ಈ ರೀತಿ ಮಾಡಬಾರದು ಅಂತಾ ಮೃತಳ ತಂದೆ ತಾಯಿ ಗೋಳಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ)
Published On - 5:58 pm, Wed, 12 October 22