ವಿಶ್ವ ಸಾಂಸ್ಕೃತಿಕ ಉತ್ಸವ ಆರಂಭ: 100 ದಿನ, 100 ದೇಶ, ಜಾಗತಿಕ ಸಾಮರಸ್ಯದ ಒಂದು ಅಭಿಯಾನ
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಆರಂಭವಾದ "ಒಂದು ವಿಶ್ವ ಒಂದು ಕುಟುಂಬ" ಜಾಗತಿಕ ಸಾಂಸ್ಕೃತಿಕ ಉತ್ಸವವು 100 ದಿನಗಳ ಕಾಲ ನಡೆಯಲಿದೆ. ಭಾರತ ಸರ್ಕಾರ ಮತ್ತು IGNCAಯ ಸಹಯೋಗದ ಈ ಉತ್ಸವವು 100 ದೇಶಗಳನ್ನು ಒಗ್ಗೂಡಿಸುವ ಗುರಿ ಹೊಂದಿದೆ. ಸಂಸ್ಕೃತಿ, ಆಧ್ಯಾತ್ಮ ಮತ್ತು ಮಾನವೀಯತೆಯನ್ನು ಸಂಭ್ರಮಿಸುವ ಈ ಉತ್ಸವವು ವಿಶ್ವ ಏಕತೆಗೆ ಒತ್ತು ನೀಡುತ್ತದೆ.

ಚಿಕ್ಕಬಳ್ಳಾಪುರ, ಆಗಸ್ಟ್ 15: ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕು ಮುದ್ದೇನಹಳ್ಳಿಯಲ್ಲಿ ಶುಕ್ರವಾರ (ಆಗಸ್ಟ್ 15) ‘ಒಂದು ವಿಶ್ವ ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ 2025’ ಆರಂಭವಾಯಿತು. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ (IGNCA) ಸಹಯೋಗದಲ್ಲಿ ಆರಂಭವಾದ ಈ ಸಾಂಸ್ಕೃತಿಕ ಸಂಭ್ರಮವು ಜಗತ್ತನ್ನು ಬೆಸೆಯುವ ಪ್ರಯತ್ನ ಮಾಡಲಿದೆ.
ಒಟ್ಟು 100 ದಿನಗಳ ಕಾಲ ನಡೆಯಲಿರುವ ಜಾಗತಿಕ ಮಟ್ಟದ ಸಾಂಸ್ಕೃತಿಕ ಉತ್ಸವವು ಸಂಸ್ಕೃತಿ, ಅಧ್ಯಾತ್ಮ, ಸೇವೆ ಮತ್ತು ಮಾನವೀಯತೆಯ ಸಹಯೋಗದ ಆಚರಣೆಗಳ ಮೂಲಕ 100 ದೇಶಗಳನ್ನು ಬೆಸೆಯಲಿದೆ. ಪವಿತ್ರ ಪರಂಪರೆಗಳಿಂದ ಆಧುನಿಕ ಅಭಿವ್ಯಕ್ತಿಗಳವರೆಗೆ, ವಿಭಿನ್ನ ಶ್ರದ್ಧೆಗಳ ಸಂವಾದದಿಂದ ಕಲಾತ್ಮಕ ಪ್ರದರ್ಶನಗಳವರೆಗೆ, ಉತ್ಸವವು ಸರಳವಾದ ಸತ್ಯವನ್ನು ಪುನರುಚ್ಚರಿಸಲು ಪ್ರಯತ್ನಿಸುತ್ತದೆ. ಗಡಿಗಳು ಮತ್ತು ವಿಭಜನೆಗಳ ಹೊರತಾಗಿಯೂ, ಪ್ರಪಂಚವು ಒಂದು ಕುಟುಂಬವಾಗಿ ಒಟ್ಟಿಗೆ ನಿಲ್ಲಬಹುದು ಎಂದು ಸಾರಿಹೇಳುವ ಪ್ರಯತ್ನ ಮಾಡಲಿದೆ.
ಭಾರತ ಸರ್ಕಾರದ ಸಂಸ್ಕೃತಿ ಖಾತೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಎಲ್ಲ ದೇಶಗಳಿಗೂ ಆತ್ಮೀಯ ಸ್ವಾಗತ ಕೋರಿದರು. ಭಾರತೀಯ ಪರಂಪರೆಯ ಶ್ರೀಮಂತಿಕೆಯನ್ನು ಸಶಕ್ತವಾಗಿ ಪ್ರದರ್ಶಿಸಲು ‘ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ’ದ ಮೂಲಕ ವಿಶೇಷ ಪ್ರದರ್ಶನ ಆಯೋಜಿಸುವುದಾಗಿ ಘೋಷಿಸಿದರು.
ಬೆಂಗಳೂರಿನ ‘ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ’ದ ದಕ್ಷಿಣ ಪ್ರಾದೇಶಿಕ ನಿರ್ದೇಶಕ ಡಿ.ಮಹೇಂದ್ರ ಮಾತನಾಡಿ, ಉತ್ಸವದ ಮುಖ್ಯ ಉದ್ದೇಶವಾಗಿರುವ ಸಾಮರಸ್ಯ ಮತ್ತು ಏಕತೆಯ ದೃಷ್ಟಿಯನ್ನು ಬೆಂಬಲಿಸುವುದಾಗಿ ಹೇಳಿದರು.
‘ಕರ್ಮಯೋಗಿ ಭಾರತ್’ ಸೇವಾ ಅಭಿಯಾನದ ಅಧ್ಯಕ್ಷರು ಮತ್ತು ಕಲಾಕ್ಷೇತ್ರ ಪ್ರತಿಷ್ಠಾನದ ಮಾಜಿ ಅಧ್ಯಕ್ಷರೂ ಆಗಿರುವ ಪದ್ಮಭೂಷಣ ಸುಬ್ರಮಣಿಯನ್ ರಾಮದೊರೈ ಮಾತನಾಡಿ, ಉತ್ಸವದ ಮುಖ್ಯ ಸಂದೇಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಕಾಳಜಿ, ಹಂಚಿಕೊಳ್ಳುವ ಮನೋಭಾವ, ಔದಾರ್ಯ, ಸದ್ಭಾವನೆ, ತಿಳಿವಳಿಕೆ ಮತ್ತು ಸಹಕಾರ’ದ ಸಂದೇಶಗಳು ವಿಶ್ವ ಸಾಂಸ್ಕೃತಿಕ ಉತ್ಸವದ ಮೂಲಕ ಜಗತ್ತಿನೆಲ್ಲೆಡೆ ಪಸರಿಸಲಿದೆ ಎಂದರು.
ಶಿರಾ ಕ್ಷೇತ್ರದ ಶಾಸಕ ಹಾಗೂ ದೆಹಲಿಯಲ್ಲಿ ಕರ್ನಾಟಕ ರಾಜ್ಯದ ವಿಶೇಷ ಪ್ರತಿನಿಧಿ ಡಾ ಟಿ.ಬಿ.ಜಯಚಂದ್ರ ಮಾತನಾಡಿ, ಈ ಉಪಕ್ರಮವು ಜಾಗತಿಕ ಸಂಸ್ಕೃತಿಯನ್ನು ಸಂಭ್ರಮಿಸುವ, ಪ್ರೀತಿ ಮತ್ತು ಸೇವೆಯನ್ನು ತಳಹದಿಯಾಗಿ ಹೊಂದಿರುವ ಪರಂಪರೆಯ ಮುಂದುವರಿಕೆಯಾಗಿದೆ’ ಎಂದು ಶ್ಲಾಘಿಸಿದರು.
‘ಒಂದು ವಿಶ್ವ ಒಂದು ಕುಟುಂಬ ಸೇವಾ ಅಭಿಯಾನ’ದ ಸಂಸ್ಥಾಪಕರಾದ ಸದ್ಗುರು ಮಧುಸೂದನ್ ಸಾಯಿ ಅವರು ಪ್ರಧಾನ ಭಾಷಣ ಮಾಡಿದರು. ‘ಸಂಪರ್ಕ, ಕಾಳಜಿ, ಸಹಯೋಗ, ಸಹಬಾಳ್ವೆ ಮತ್ತು ಸಹಕಾರವೇ ಸಂಸ್ಕೃತಿ’ ಎಂದರು. ‘ಶತಮಾನದಲ್ಲಿ ಒಮ್ಮೆ ನಡೆಯಬಹುದಾದ ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಏಕತೆ, ಪ್ರೀತಿ ಮತ್ತು ಶಾಂತಿಯ ಅನುಭವ ಪಡೆದುಕೊಳ್ಳಬೇಕು’ ಎಂದು ಜಗತ್ತಿನ ಎಲ್ಲರಿಗೂ ಆಹ್ವಾನ ನೀಡಿದರು.
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನಡೆಸಿಕೊಟ್ಟ ‘ವಂದೇ ಮಾತರಂ’ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಮುಂದಿನ ದಿನಗಳಲ್ಲಿ ನಡೆಯಲಿರುವ ಹಲವು ಮಹತ್ವದ ಆಚರಣೆಗಳಿಗೆ ‘ವಂದೇ ಮಾತರಂ’ ಸಶಕ್ತ ಮುನ್ನುಡಿ ಬರೆಯಿತು.
ಜಾಗತಿಕ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿನಿಮಯದಲ್ಲಿ ‘ವಿಶ್ವ ಸಾಂಸ್ಕೃತಿಕ ಉತ್ಸವ 2025’ ಒಂದು ಹೆಗ್ಗುರುತಾಗಿದೆ. ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳ ವಿನಿಮಯಕ್ಕೆ ಇದು ಅದ್ಭುತ ವೇದಿಕೆ ಒದಗಿಸಲಿದೆ. ಭೌಗೋಳಿಕತೆ, ನಂಬಿಕೆ ಮತ್ತು ಸಂಪ್ರದಾಯಗಳನ್ನು ಮೀರಿ ಮಾನವೀಯತೆಯನ್ನು ಬೆಸೆಯುವ ಪ್ರಯತ್ನಗಳ ಮೇಲೆ ಈ ಉತ್ಸವವು ಬೆಳಕು ಚೆಲ್ಲುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 pm, Sat, 16 August 25




