ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ಭೇಟಿ, ನಂದಿಗಿರಿಧಾಮಕ್ಕೆ ಪ್ರವೇಶ ನಿರ್ಬಂಧ
ಪ್ರಧಾನಿ ಮೋದಿ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಭೇಟಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಚಿಕ್ಕಬಳ್ಳಾಪುರ: ಚುನಾವಣೆ ಹೊಸ್ತಿಲಿನಲ್ಲಿ ಪ್ರಧಾನಿ ಮೋದಿ (PM Narendra Modi) ಇದು 7ನೇ ಬಾರಿಗೆ ರಾಜ್ಯ ಆಗಮಿಸುತ್ತಿದ್ದು, ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ಬಳಿ ಇರುವ ಸತ್ಯಸಾಯಿ ಸಾಯಿ ಲೋಕಸೇವಾ ಗ್ರಾಮಕ್ಕೆ ಬರಲಿರುವ ಮೋದಿ, ಸತ್ಯ ಸಾಯಿ ಗ್ರಾಮದ ಸತ್ಯ ಸಾಯಿ ಸರಳಾ ಆಸ್ಪತ್ರೆ ಬಳಿ ನಿರ್ಮಾಣವಾಗಿರುವ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಸರ್ ಎಂ,ವಿಶ್ವೇಶ್ವರಯ್ಯ ಸಮಾಧಿ ಸ್ಮಾರಕ, ಮ್ಯೂಜಿಯಂಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಮುದ್ದೇನಹಳ್ಳಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. 6 ಎಸ್ಪಿ, 9 ಡಿವೈಎಸ್ಪಿ, 39 ಇನ್ಸ್ಪೆಕ್ಟರ್ಗಳು, 98 ಪಿಎಸ್ಐ, 173 ಎಎಸ್ಐ, 1179 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಬಿ.ಎನ್.ಬಚ್ಚೇಗೌಡ, ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್ ಮತ್ತು ಆಹ್ವಾನಿತ ಗಣ್ಯರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಅಲ್ಲದೆ ಪ್ರಧಾನಿ ಮೋದಿ ಕಾಲೇಜು ಉದ್ಘಾಟಿಸಿದ ಬಳಿಕ ಆಶ್ರಮದ ಪ್ರೇಮಾಮೃತಂ ಸಭಾ ಭವನದಲ್ಲಿ ಸಾಯಿಬಾಬಾ ಭಕ್ತರ ಜತೆ ಸಂವಾದ ನಡೆಸಲಿದ್ದಾರೆ.
ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಸಾರ್ವಜನಿಕರಿಗೆ ಮಧ್ಯಾಹ್ನ 2ಗಂಟೆವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ