ಚಿಕ್ಕಬಳ್ಳಾಪುರ, (ಆಗಸ್ಟ್ 29) : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿಯ ಅಭ್ಯರ್ಥಿಯಾಗಿ ಡಾ.ಕೆ.ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗೆಲುವು ಸಾಧಿಸಿದ್ದರು. ಇವರ ಜತೆ ಇವರ ಮಾತುಗಳು ಸಹ ಮಾತುಗಳು ಗೆದ್ದಿದ್ದವು. ಹೌದು..ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಅವರ ಮಾತು, ಡೈಲಾಗ್ಗಳೊಂದಿಗೆ ಗಮನ ಸೆಳೆದಿದ್ದರು. ಯಾವ ಸಿನಿಮಾ ಸ್ಟಾರ್ಗೆ ಕಮ್ಮಿ ಇಲ್ಲವಂತೆ ಡೈಲಾಗ್ ಹೊಡೆಯುವುದರಲ್ಲಿ ಫೇಮಸ್ ಆಗಿದ್ದಾರೆ. ಇದೀಗ ಇವರಿಗೆ ಟಾಲಿವುಡ್‌ನಲ್ಲಿ ಭಾರೀ ಬೇಡಿಕೆ ಬಂದಿದೆ. ಹೌದು…ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಲು ಪ್ರದೀಪ್ ಈಶ್ವರ್‌ಗೆ ಆಫರ್ ಬಂದಿದೆ.
ಟಾಲಿವುಡ್ ಚಿತ್ರರಂಗದ ದಿಗ್ಗಜ ಮೆಗಾಸ್ಟಾರ್ ಚಿರಂಜೀವಿಯವರು ಸಾಮಾಜಿಕ ಕ್ರಾಂತಿಯ ಚಲನಚಿತ್ರವೊಂದರಲ್ಲಿ ನಟಿಸಲು ಸನ್ನದರಾಗುತ್ತಿದ್ದಾರಂತೆ. ಇದರಿಂದ ಚಿರಂಜೀವಿ ಜೊತೆ ಬಣ್ಣ ಹಚ್ಚಿ ನಟಿಸಲು ಶಾಸಕ ಪ್ರದೀಪ್‌ಈಶ್ವರ್‌ಗೆ ಕರೆ ಬಂದಿದೆಯಂತೆ. ಸ್ವತಃ ಮೆಗಸ್ಟಾರ್ ಚಿರಂಜೀವಿಯವರ ಚಲನಚಿತ್ರವನ್ನು ನಿರ್ದೇಶಿಸುತ್ತಿರುವ ಖ್ಯಾತ ನಿರ್ದೇಶಕರೊಬ್ಬರು ಮೊನ್ನೆ ಶಾಸಕ ಪ್ರದೀಪ್‌ಈಶ್ವರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆಂದು ಶಾಸಕ ಪ್ರದೀಪ್‌ಈಶ್ವರ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಂದಿನ ಪ್ರಭಾವಿ ಮಂತ್ರಿ, ಭಾವಿ ಮುಖ್ಯಮಂತ್ರಿಯೆಂದೇ ಬಿಂಬಿತಗೊಂಡಿದ್ದ ಡಾ|| ಕೆ.ಸುಧಾಕರ್‌ರವರನ್ನು ಸೋಲಿಸಿ, ಪ್ರದೀಪ್‌ಈಶ್ವರ್ ಜಯಭೇರಿ ಭಾರಿಸಿದ್ದರು. ಇದರಿಂದ ರಾಜ್ಯದಲ್ಲಿ ಪ್ರದೀಪ್‌ಈಶ್ವರ್ ರಾತ್ರೋರಾತ್ರಿ ರೆಬಲ್‌ಸ್ಟಾರ್ ಆಗಿ ಜನಮನ್ನಣೆ ಪಡೆದಿದ್ದರು.
ತೆಲಂಗಾಣದಲ್ಲಿ ನಡೆದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳನ್ನು ಶಾಸಕ ಪ್ರದೀಪ್‌ಈಶ್ವರ್ ಉಸ್ತುವಾರಿ ವಹಿಸಿದ್ದರು. ತಮ್ಮದೇ ಆದ ಡೈಲಾಗ್ ಜೊತೆಗೆ ಪವನ್‌ಕಲ್ಯಾಣ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಇನ್ನಿತರರ ಡೈಲಾಗ್‌ಗಳನ್ನು ಹೇಳುವುದರ ಮೂಲಕ ತೆಲಂಗಾಣದ ಜನರಲ್ಲಿ ತಮ್ಮ ಪರ ಬಿರುಗಾಳಿ ಎಬ್ಬಿಸಿದ್ದರು. ಇದರಿಂದ ಶಾಸಕ ಪ್ರದೀಪ್‌ಈಶ್ವರ್‌ರವರ ಜನಪ್ರಿಯತೆಯನ್ನು ಗಮನಿಸಿ ಈಗ ತೆಲುಗು ಸಿನಿರಂಗ ಕೈಬೀಸಿ ಕರೆಯುತ್ತಿದೆ.
ಆದರೆ, ಪ್ರದೀಪ್ ಈಶ್ವರ್ ಈಗ ತಾನೇ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಇದರ ಮಧ್ಯ ಟಾಲಿವುಡ್ನ ಈ ಆಫರ್ಅನ್ನು ಅವರು ಒಪ್ಪಿಕೊಳ್ಳುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ