ಅಪರೇಷನ್ ಭೈರ: ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯುಗೆ ಚಳ್ಳೆಹಣ್ಣು ತಿನ್ನಿಸಿದ ‘ಭೈರ ಮತ್ತೆ ಸೇಫ್’
ಭೈರನ ಸೆರೆಗೆ ಅಭಿಮನ್ಯು ಸೇರಿದಂತೆ ಆರು ಆನೆಗಳು ಸಜ್ಜಾಗಿ ಕಾರ್ಯಾಚರಣೆಗೆ ಇಳಿದಿತ್ತು. ಆದರೆ ಭೈರ ಮಾತ್ರ ಯಾರ ಕಣ್ಣಿಗೂ ಬೀಳದೆ ತಪ್ಪಿಸಿಕೊಂಡಿದ್ದಾನೆ. ಇತ್ತ ಆರೋಗ್ಯ ಸಮಸ್ಯೆ ಎದುರಾದ ಹಿನ್ನೆಲೆ ಆನೆಗಳು ವಾಪಸ್ ಆಗಿವೆ.
ಚಿಕ್ಕಮಗಳೂರು: ಕಾಡಾನೆ ಭೈರನನ್ನು ಕೆಡವಿ ಖೆಡ್ಡಾಕ್ಕೆ ಬೀಳಿಸಲು ಕೊಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು, ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಅಜೇಯ, ಪ್ರಶಾಂತ್ ಗ್ಯಾಂಗ್ ಸಜ್ಜಾಗಿತ್ತು. ಜನರಿಗೆ ಉಪಟಳ ಕೊಡುವ ಭೈರನನ್ನು ಸೆರೆ ಹಿಡಿದೇ ಹಿಡಿತಿವಿ ಅಂತ ಕಾರ್ಯಾಚರಣೆಗೂ ಇಳಿದಿತ್ತು. ಆದರೆ ಕಾರ್ಯಾಚರಣೆಗೆ ಇಳಿದ ಒಂದೇ ವಾರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಪ್ಲಾನ್ ಉಲ್ಟಾ ಹೊಡೆಯಿತು. ಇದ್ದಕ್ಕಿದ್ದಂತೆ ಆರು ಆನೆಗಳು ಶಿಬಿರಕ್ಕೆ ವಾಪಸ್ ಆಗಿವೆ. ಇದರಿಂದ ಸ್ಥಳೀಯರು ಕೂಡ ಶಾಕ್ ಆಗಿದ್ದಾರೆ. ಹಾಗಿದ್ದರೆ ಅಲ್ಲಿ ಏನಾಯ್ತು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಕಾಫಿನಾಡಿನಲ್ಲಿ ಕಳೆದ ಕೆಲ ವರ್ಷಗಳಿಂದ ಭಾರೀ ತೊಂದರೆ ಕೊಡುತ್ತಿದ್ದ ಕಾಡಾನೆಯನ್ನ ಹಿಡಿಯಲು ಈ ಗ್ಯಾಂಗ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮಕ್ಕೆ ಧಾವಿಸಿತು. ಕಳೆದ ಭಾನುವಾರ ಬಂದಿದ್ದ ಈ ದಸರಾ ಆನೆಗಳು, ನೂರು ಮಂದಿ ಅರಣ್ಯ ಸಿಬ್ಬಂದಿಗಳ ಜೊತೆ ಸೋಮವಾರದಿಂದ ಕಾರ್ಯಾಚರಣೆಗೆ ಇಳಿದಿದ್ದವು. ಆದರೆ ಎರಡ್ಮೂರು ದಿನ ಭೈರ ಎಂಬ ಕಾಡಾನೆಗೆ ಹುಡುಕಾಟ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಆತನ ಸುಳಿವೇ ಸಿಗಲಿಲ್ಲ. ಈ ಚಿಂತೆಯಲ್ಲಿರುವಾಗಲೇ ಅಪರೇಷನ್ ಭೈರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಕೋಂಬಿಂಗ್ ಸ್ಪೆಷಲಿಸ್ಟ್ ಖ್ಯಾತಿಯ ಅಭಿಮನ್ಯುಗೆ ಭೇದಿ ಶುರುವಾಗಿದೆ.
ತಂಡದ ಕ್ಯಾಪ್ಟನ್ ಆರೋಗ್ಯ ಸರಿಯಿಲ್ಲ ಎಂಬ ತಲೆ ಬಿಸಿ ನಡುವೆ ಮತ್ತೊಂದು ಆನೆ ಗೋಪಾಲಸ್ವಾಮಿಗೆ ಮದವೇರಿದೆ. ಆತನನ್ನ ನಿಯಂತ್ರಣಕ್ಕೆ ತರುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಸ್ವತಃ ಜಿಲ್ಲಾಧಿಕಾರಿಗಳೇ 144 ಸೆಕ್ಷನ್ ಜಾರಿ ಮಾಡಿ ಜನರು ಯಾರು ಆನೆ ಕಾರ್ಯಾಚರಣೆಯ ಸುತ್ತ ಓಡಾಡದಂತೆ ಆದೇಶ ಹೊರಡಿಸಿದರು. ಕೊನೆಗೆ ಇಷ್ಟೆಲ್ಲಾ ಆದ ಮೇಲೆ ನಿನ್ನೆ ಇದ್ದಕ್ಕಿದ್ದಂತೆ ಅಭಿಮನ್ಯು ನೇತೃತ್ಚದ ಆರು ದಸರಾ ಆನೆಗಳ ತಂಡ ನಾಗರಹೊಳೆ ಹಾಗೂ ದುಬಾರೆ ಶಿಬಿರಗಳಿಗೆ ವಾಪಸ್ ಆಗಿವೆ.
ಭೈರನ ದಾಳಿಗೆ ಇಬ್ಬರು ಬಲಿ
ಭೈರನನ್ನ ಹಿಡಿಯುವ ಕಾರ್ಯಾಚರಣೆಗೆ ಅಷ್ಟು ಸುಲಭವಾಗಿ ಸರ್ಕಾರ ಮನಸ್ಸು ಮಾಡಿರಲಿಲ್ಲ. ಕಳೆದ ಎರಡು ತಿಂಗಳಲ್ಲೇ ಇಬ್ಬರು ಭೈರನ ದಾಳಿಗೆ ಬಲಿಯಾಗಿದ್ದಾರೆ. ಹೀಗಾಗಿ ಕಾಡಾನೆಯನ್ನ ಹಿಡಿಯಬೇಕು ಅಂತಾ ಮೃತದೇಹವನ್ನ ಹಿಡಿದುಕೊಂಡು ಮೂಡಿಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಲಾಠಿಚಾರ್ಜ್ ನಡೆದಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಸರ್ಕಾರ ಒಂದು ಕಾಡಾನೆಯನ್ನ ಹಿಡಿಯಲು ಅನುಮತಿ ನೀಡಿತ್ತು. ಅಷ್ಟರಲ್ಲಿಯೇ ಕಾರ್ಯಾಚರಣೆಗೆ ಬಂದಿದ್ದ ದಸರಾ ಆನೆಗಳ ತಂಡ ವಾಪಸ್ ಹೊರಟಿವೆ. ಇಷ್ಟಕ್ಕೆಲ್ಲಾ ಅರಣ್ಯ ಅಧಿಕಾರಿಗಳ ಬೇಜಬ್ದಾರಿತನವೇ ಕಾರಣ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.
ಅಧಿಕಾರಿಗಳ ಆರೋಪಕ್ಕೆ ಸ್ಥಳೀಯರ ಪ್ರತ್ಯಾರೋಪ
ಕಾರ್ಯಾಚರಣೆಗೆ ಬಂದಿದ್ದ ಆನೆಗಳಿಗೆ ಸ್ಥಳೀಯರು ಬೆಲ್ಲ ಅಂತಾ ಎಲ್ಲವನ್ನೂ ಕೊಟ್ಟು ಆನೆಗಳ ಆರೋಗ್ಯ ಹಾಳು ಮಾಡಿದ್ದಾರೆ ಅಂತಾ ಅರಣ್ಯ ಇಲಾಖೆಯವರು ಆರೋಪಿಸುತ್ತಾ ಇದ್ದಾರೆ. ಇತ್ತ ನಾವು ಆನೆಗಳ ಹತ್ತಿರ ಹೋಗಲು ಮಾವುತನ ಅನುಮತಿ ಪಡೆಯಬೇಕಿತ್ತು, ಇನ್ನೆಲ್ಲಿ ನಾವು ಆಹಾರವನ್ನ ಆನೆಗಳಿಗೆ ನೀಡುವುದು. ತಂಪಾಗಿದ್ದ ದಸರಾ ಆನೆಗಳನ್ನ ಬಿಸಿಲಲ್ಲಿ ನಿಲ್ಲಿಸಿ, ಸರಿಯಾದ ವ್ಯವಸ್ಥೆ ಮಾಡದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳೇ ಬೇಜವಾಬ್ದಾರಿ ತೋರಿ ಬಿಲ್ ಮಾಡಿಕೊಳ್ಳಲು ಈ ರೀತಿ ಕಾರ್ಯಾಚರಣೆಯ ನಾಟಕವಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಒಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರ ಜಟಾಪಟಿಯಲ್ಲಿ ಆರೋಗ್ಯ ಹದೆಗೆಡಿಸಿಕೊಂಡು ದಸರಾ ಆನೆಗಳು ಕ್ಯಾಂಪ್ ಕಡೆ ಮುಖ ಮಾಡಿದರೆ, ಹೆಂಗೆ ನಾನು ನಿಮಗೆಲ್ಲಾ ಚಳ್ಳೆಹಣ್ಣು ತಿನ್ನಿಸಿದ್ದು ಅಂತಾ ಭೈರ ತನ್ನ ಕಿವಿ ಕೊಡುವುತ್ತಲೇ ಕಾಡಿನ ಕಡೆ ಮುಖ ಮಾಡಿ ಮತ್ತೆ ಸೇಫ್ ಆಗಿದ್ದಾನೆ.
ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 pm, Sun, 6 November 22