ನನ್ನಿಂದಲೇ ಮಕ್ಕಳು, ಮೊಮ್ಮಕ್ಕಳಿಗೆ ಕೊರೊನಾ ಬಂತು; ಕ್ಷಮಿಸು ಮಾರಿಕಾಂಬ ದೇವಿ ಎಂದು ಡೆತ್ ನೋಟು ಬರೆದು ಆತ್ಮಹತ್ಯೆಗೆ ಶರಣು
ನಿವೃತ್ತಿಯ ಬಳಿಕ ಹಳ್ಳಿಯಲ್ಲೇ ತೋಟ ನೋಡಿಕೊಂಡು ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದರು. ಸೋಮ ನಾಯಕ್ ಅವರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಮನನೊಂದಿದ್ದಾರೆ. ನನ್ನಿಂದ ಕುಟುಂಬಸ್ಥರಿಗೆ ಯಾರಿಗೂ ಏನು ಆಗುವುದು ಬೇಡ, ಎಲ್ಲರೂ ಚೆನ್ನಾಗಿರಿ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ
ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೊನಾ ಹರಡುವಂತಾಯಿತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಕೊರೊನಾ ಸೋಂಕಿತ ನಿವೃತ್ತ ಉಪ ತಹಶೀಲ್ದಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
72 ವರ್ಷದ ಸೋಮಾ ನಾಯಕ್ ಮೃತ ದುರ್ದೈವಿ. ಮೃತ ಸೋಮಾನಾಯಕ್ ಮೂಲತಃ ಜಿಲ್ಲೆಯ ತರೀಕೆರೆ ತಾಲೂಕಿನ ಬೇಲೆನಹಳ್ಳಿ ಸಮೀಪದ ಬೇಲೆನಹಳ್ಳಿ ತಾಂಡ್ಯಾದ ನಿವಾಸಿ. ನಿವೃತ್ತಿಯ ಬಳಿಕ ಹಳ್ಳಿಯಲ್ಲೇ ತೋಟ ನೋಡಿಕೊಂಡು ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದರು. ಸೋಮ ನಾಯಕ್ ಅವರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಮನನೊಂದಿದ್ದಾರೆ. ನನ್ನಿಂದ ಕುಟುಂಬಸ್ಥರಿಗೆ ಯಾರಿಗೂ ಏನು ಆಗುವುದು ಬೇಡ, ಎಲ್ಲರೂ ಚೆನ್ನಾಗಿರಿ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್‍ನಲ್ಲಿ ಪಲ್ಸ್ ರೇಟ್ ಕಡಿಮೆಯಾಗಿ, ಉಸಿರಾಟಕ್ಕೆ ತೊಂದರೆಯಾಗಿ ಸಾಯಲು ಕಷ್ಟವಾಗುತ್ತದೆ, ಆತ್ಮಹತ್ಯೆ ಮಾಡಿಕೊಂಡ್ರೆ ಸುಖವಾಗಿ ಸತ್ತರೆ ಚಿಂತೆಯೇ ಇಲ್ಲ ಎಂದು ಬರೆದಿದ್ದಾರೆ.
ಶ್ರೀ ಮಾರಿಕಾಂಬ ದೇವಿಗೆ ಕ್ಷಮೆ ಕೋರಿ ಡೆತ್ ನೋಟ್ ಬರೆದಿಟ್ಟ ಸೋಮನಾಯಕ್
“ಅಮ್ಮಾ, ಮಾರಿಕಾಂಭ ದೇವಿ, ನಿನ್ನ ಕ್ಷೇತ್ರವನ್ನ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಅಷ್ಟರಲ್ಲಿಯೇ ನೀನು ನನ್ನನ್ನ ಕರೆದುಕೊಂಡು ಬಿಟ್ಟೆ ಎಂದು ದೇವರಿಗೂ ಕ್ಷಮೆ ಕೇಳಿದ್ದಾರೆ. ನಾನು ಕೊರೊನಾ ಪಾಸಿಟಿವ್ ಆಗಿರೋ ಕಾರಣ ಅಗ್ನಿಸ್ಪರ್ಶ ಮಾಡಲು ಅನುಕೂಲವಾಗುವಂತೆ ಜಾಗ ಆರಿಸಿಕೊಂಡಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಇದು ಪ್ರಪಂಚಕ್ಕೆ ಆದ ಕೆಟ್ಟ ಕಾಯಿಲೆ. ನನ್ನ ಬಗ್ಗೆ ಯಾರೂ ಯೋಚಿಸಬೇಡಿ. ನಿಮ್ಮೆಲ್ಲರ ಜೀವನಕ್ಕೆ ದಾರಿ ಮಾಡಿದ್ದೇನೆ.
ನನಗೆ ಜೀವನ ಸಾಕು, ಡಿಸಿಸಿ ಬ್ಯಾಂಕಿನ ನನ್ನ ಖಾತೆಯಲ್ಲಿ 1,28,000 ಹಣ ಇದೆ. ನನ್ನ ಮೊಮ್ಮಗಳ ಹೆಸರಿನಲ್ಲಿ ಪೋಸ್ಟ್ ಆಫೀಸ್‍ನಲ್ಲಿ ಜಮಾ ಮಾಡಿಬಿಡಿ. ನಾನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಟ್ಟಿದ್ದೇನೆ ನೋಡಿ. ನನ್ನ ಚೈನು, ಉಂಗುರ ಬೀರುವಿನಲ್ಲಿದೆ ತೆಗೆದುಕೊಳ್ಳಿ. ನನ್ನ ಬಗ್ಗೆ ಯಾರೂ ಯೋಚಿಸಬೇಡಿ. ನನಗೆ ಜೀವನ ಸಾಕು. ನನ್ನಿಂದ ಯಾರಿಗೂ ಏನಾಗುವುದು ಬೇಡ. ನನ್ನ ಸಾವಿಗೆ ನಾನೇ ಕಾರಣ ಎಂದು ತೋಟದಲ್ಲಿ ತಮ್ಮ ಕಾರಿನಲ್ಲಿ ತಾವೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
(Chikkamagaluru-tarikere-retired-tahsildar-soma-naik-commits-suicide-due-to-coronavirus-death-note)
Published On - 2:58 pm, Mon, 10 May 21