ಚಿಕ್ಕಮಗಳೂರಿನಲ್ಲಿ 10 ರೂಪಾಯಿ ಚಿಲ್ಲರೆಗಾಗಿ 28 ವರ್ಷದ ಬಾರ್ ಕ್ಯಾಶಿಯರ್ ಕೊಲೆ; 6 ಆರೋಪಿಗಳು ಅರೆಸ್ಟ್

ಚಿಕ್ಕಮಗಳೂರಿನಲ್ಲಿ 10 ರೂಪಾಯಿ ಚಿಲ್ಲರೆಗಾಗಿ 28 ವರ್ಷದ ಬಾರ್ ಕ್ಯಾಶಿಯರ್ ಕೊಲೆ; 6 ಆರೋಪಿಗಳು ಅರೆಸ್ಟ್
ಸಖರಾಯಪಟ್ಟಣ ಪೊಲೀಸ್ ಠಾಣೆ

ಆರು ಜನರೂ ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಮುಷ್ಠಿಯಲ್ಲಿ ಎದೆ, ಹೊಟ್ಟೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದು ಹೋಗಿದ್ದಾರೆ. ಹಲ್ಲೆಗೊಳಗಾದ ಯಶ್ಪಾಲ್ ತೀವ್ರ ಎದೆ ನೋವು ಎಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

TV9kannada Web Team

| Edited By: Ayesha Banu

Apr 04, 2022 | 6:42 PM

ಚಿಕ್ಕಮಗಳೂರು: ಚಿಲ್ಲರೆ ಹಣಕ್ಕಾಗಿ ಮದ್ಯ ವ್ಯಸನಿಗಳು ಬಾರ್ ಕ್ಯಾಶಿಯರ್(Bar Cashier Murder) ಜೊತೆ ಜಗಳವಾಡಿ ಆತನನ್ನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ. ಘಟನೆಯಲ್ಲಿ 28 ವರ್ಷದ ಯಶ್‍ಪಾಲ್ ಮೃತ ದುರ್ದೈವಿ.

ಯುಗಾದಿ ಹಬ್ಬದ ದಿನವಾದ ಶನಿವಾರ ಸಂಜೆ ಆರು ಗಂಟೆಗೆ ಆರು ಜನ ಯುವಕರು ಸಖರಾಯಪಟ್ಟಣ ಸಮೀಪದ ಪ್ರವಾಸಿತಾಣ ಅಯ್ಯನಕೆರೆಗೆ ಹೋಗಿದ್ದರು. ಅಲ್ಲಿಂದ ಬಂದವರು ಮದ್ಯದ ಖರೀದಿಗೆ ಸಖರಾಯಪಟ್ಟಣದ ಬಾರ್ಗೆ ಬಂದಿದ್ದರು. ಬಿಯರ್ ಖರೀದಿಸಿದ ಬಳಿಕ ಚಿಲ್ಲರೆ ಹಣಕ್ಕಾಗಿ ಬಾರಿನ ಮತ್ತೊಬ್ಬ ಕ್ಯಾಶಿಯರ್ ಲಕ್ಷ್ಮಿಶ್ ಎಂಬುವನ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಹತ್ತು ರೂಪಾಯಿ ಚಿಲ್ಲರೆ ಹಣಕ್ಕಾಗಿ ಕ್ಯಾಶಿಯರ್ ಜೊತೆ ಗಲಾಟೆ ಮಾಡಿದ್ದರು. ಈ ವೇಳೆ, ಬಾರ್ ಮುಂದೆ ಇದ್ದ ಬೈಕನ್ನ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಗಲಾಟೆ ಮಾಡಿದ್ದಾರೆ. ಬೈಕ್‍ಗಳನ್ನ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವುದನ್ನ ಕಂಡು ಮತ್ತೊಬ್ಬ ಕ್ಯಾಶಿಯರ್ ಯಶ್‍ಪಾಲ್ ಆಕ್ಷೇಪಿಸಿದ್ದಾರೆ.

ಜನ ಓಡಾಡಲು ತೊಂದರೆಯಾಗುತ್ತೆ. ಪೊಲೀಸರು ಬಂದರೆ ಬೈಯುತ್ತಾರೆ, ಗಾಡಿಗಳನ್ನ ತೆಗೆಯಿರಿ ಎಂದಿದ್ದಾನೆ. ಆಗ ಆರು ಜನರೂ ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಮುಷ್ಠಿಯಲ್ಲಿ ಎದೆ, ಹೊಟ್ಟೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದು ಹೋಗಿದ್ದಾರೆ. ಹಲ್ಲೆಗೊಳಗಾದ ಯಶ್ಪಾಲ್ ತೀವ್ರ ಎದೆ ನೋವು ಎಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಗರೆ ಬಳಿ ಸಾವನ್ನಪ್ಪಿದ್ದಾರೆ. ಮೃತ ಯಶ್‍ಪಾಲ್ ಮನೆಯವರು ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಡ ಕುಟುಂಬದ ಯಶ್‍ಪಾಲ್ ಏಳೆಂಟು ವರ್ಷಗಳಿಂದ ಬಾರ್ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಾ ತನ್ನ ತಾಯಿಯನ್ನ ನೋಡಿಕೊಳ್ಳುತ್ತಿದ್ದ. ಮನೆಗೆ ಅವನೇ ಆಧಾರಸ್ತಂಭವಾಗಿದ್ದ. ತಾಯಿ-ಮಗ ಇಬ್ಬರೇ ವಾಸವಿದ್ದು, ಇದೀಗ ಮಗನನ್ನ ಕಳೆದುಕೊಂಡು ತಾಯಿಯ ಆಸರೆಗೆ ಯಾರೂ ಇಲ್ಲದಂತಾಗಿದೆ. ಪ್ರಕರಣ ದಾಖಲಿಸಿಕೊಂಡ ಸಖರಾಯಪಟ್ಟಣ ಪೊಲೀಸರು ಯಶ್‍ಪಾಲ್ ಮೇಲೆ ಹಲ್ಲೆ ಮಾಡಿದ ಚಿಕ್ಕಮಗಳೂರಿನ ನರಿಗುಡ್ಡನಹಳ್ಳಿ ರಘು, ಹೌಸಿಂಗ್ ಬೋರ್ಡ್ ಪ್ರಕಾಶ್, ಕಲ್ಯಾಣ ನಗರದ ಯಶೀಶ್, ತರೀಕೆರೆಯ ಶ್ರೀಧರ್, ಮಂಜುನಾಥ್, ಬೀರೂರು-ಅಜ್ಜಂಪುರ ರಸ್ತೆಯ ಸಂಜಯ್ ಎಂಬ ಆರು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಬಿಯರ್ ಖರೀದಿಸಲು ಬಾರ್​ಗೆ ಬಂದವರ ನಡುವೆ ಜಗಳ; ಮಧ್ಯೆ ಬಂದ ಕ್ಯಾಶಿಯರ್​ನನ್ನೇ ಕೊಂದು ಎಸ್ಕೇಪ್ ಆದವರು ಅರೆಸ್ಟ್ ಆದ್ರು!

ಪ್ರಧಾನಿ ಮೋದಿ ಎದುರು‌ ಅಧಿಕಾರಿಗಳ ಕಳವಳ: ರಾಜ್ಯಗಳು ಕೊಡುವ ಉಚಿತ ಗಿಫ್ಟ್ ನಿಂದ ಶ್ರೀಲಂಕಾದ ಹಾದಿಯಲ್ಲಿ ಭಾರತ!

Follow us on

Related Stories

Most Read Stories

Click on your DTH Provider to Add TV9 Kannada