Kadur: ಆಂಬುಲೆನ್ಸ್ ಸಿಗದೆ ಅಪ್ಪ ತೀರಿಕೊಂಡರು ಎಂದು ನೊಂದ ಈ ಕ್ಯಾಂಟೀನ್ ವ್ಯಾಪಾರಿ ಹೊಸ ಆಂಬುಲೆನ್ಸ್ ತರಿಸಿ, ಸಮಾಜ ಸೇವೆಗೆ ಬಿಟ್ಟಿದ್ದಾರೆ!

Ambulance: 6 ತಿಂಗಳಿಂದ ತಂದೆ ಹೆಸರಲ್ಲಿ ಆಂಬುಲೆನ್ಸ್ ಬಿಟ್ಟಿರೋ ಇವ್ರು ಈವರೆಗೆ 35ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕಳಿಸಿದ್ದಾರೆ. ಚಿಕ್ಕ ಕ್ಯಾಂಟೀನ್ ಜೊತೆ ಟ್ರ್ಯಾಕ್ಟರ್ ಹಾಗೂ ಲಾರಿ ಇದೆ. ಅದರಲ್ಲಿ ಬಂದ ಲಾಭದ ಹಣವನ್ನ ಕೂಡಿಟ್ಟು ಆಂಬುಲೆನ್ಸ್ ತಂದು ಸಾರ್ವಜನಿಕ ಸೇವೆಗೆ ಬಿಟ್ಟಿದ್ದಾರೆ.

Kadur: ಆಂಬುಲೆನ್ಸ್ ಸಿಗದೆ ಅಪ್ಪ ತೀರಿಕೊಂಡರು ಎಂದು ನೊಂದ ಈ ಕ್ಯಾಂಟೀನ್ ವ್ಯಾಪಾರಿ ಹೊಸ ಆಂಬುಲೆನ್ಸ್ ತರಿಸಿ, ಸಮಾಜ ಸೇವೆಗೆ ಬಿಟ್ಟಿದ್ದಾರೆ!
ಸಮಾಜ ಸೇವೆಗೆ ಆಂಬುಲೆನ್ಸ್ ಬಿಟ್ಟಿರುವ ಕಡೂರಿನ ಕ್ಯಾಂಟೀನ್ ಮಂಜಣ್ಣ
Follow us
| Updated By: ಸಾಧು ಶ್ರೀನಾಥ್​

Updated on: Mar 04, 2023 | 7:25 AM

ಆತ ರಸ್ತೆ ಬದಿಯ ಕ್ಯಾಂಟೀನ್ ವ್ಯಾಪಾರಿ. ದಿನಕ್ಕೆ ಅಬ್ಬಾಬ್ಬ ಅಂದ್ರೆ 500-600 ರೂಪಾಯಿ ದುಡಿಯಬಹುದು. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅಪ್ಪನ (Father) ಹೊತ್ಕೊಂಡು ಊರೂರು ಅಲೆದಿದ್ದ. ಆದ್ರೆ, ಅದೊಂದು ದಿನ ಮಾತ್ರ ಅಪ್ಪನ ಪರಿಸ್ಥಿತಿ ಚಿಂತಾಜನಕವಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆತಂದ್ರೆ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಇರಲಿಲ್ಲ. ಖಾಸಗಿ ಆಂಬುಲೆನ್ಸ್ ಗಳಿಗೆ (Ambulance) ಫೋನ್ ಮಾಡಿದ್ರೆ 8-10 ಸಾವಿರ ಹೇಳಿದ್ದರು. ಹೆತ್ತವರಿಗಿಂತ ದುಡ್ಡು ಮುಖ್ಯ ಅಲ್ಲ ಅಂತಾ ಕರೆದುಕೊಂಡು ಹೋಗಿದ್ದ. ಹೋಗುವಷ್ಟರಲ್ಲಿ ತುಂಬಾ ತಡವಾಗಿತ್ತು. ಆದ್ರೆ, ಐದೇ ದಿನಕ್ಕೆ ಅಪ್ಪ ತೀರಿಕೊಂಡ್ರು. ಅದೇ ನೋವಿಗೆ ಈಗ ತನ್ನ ಅಂಗಡಿ ಮುಂದೆಯೇ ಐದೂವರೆ ಲಕ್ಷದ ಆಂಬುಲೆನ್ಸ್ ನಿಲ್ಲಿಸಿಕೊಂಡಿದ್ದಾನೆ. ಏಕೆ ಅಂತೀರಾ… ಈ ಸ್ಟೋರಿ ನೋಡಿ… ಆತನ ಹೆಸರು ಮಂಜುನಾಥ್. ಕ್ಯಾಂಟೀನ್ ಮಂಜಣ್ಣ ಎಂದೇ ಚಿರಪಚಿತ. ಚಿಕ್ಕಮಗಳೂರು (Chikmagalur) ಜಿಲ್ಲೆ ಕಡೂರು (Kadur) ಪಟ್ಟಣ ನಿವಾಸಿ. ಈತನ ಮುಂದೆ ನಿಂತಿರುವ ಆಂಬುಲೆನ್ಸ್ ಅವರದ್ದೇ. ಮೂರ್ನಾಲ್ಕು ವರ್ಷದ ಹಿಂದೆ ಇವರ ತಂದೆ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಂದೆಯನ್ನ ಹೊತ್ಕೊಂಡ್ ಕರ್ನಾಟಕದಲ್ಲಿ ತೋರಿಸದ ಆಸ್ಪತ್ರೆಯಿಲ್ಲ. ಆದ್ರೆ, ತಂದೆಗೆ ತೀರಾ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಹೋದಾಗ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಇರಲಿಲ್ಲ (Son).

ಖಾಸಗಿ ಆಂಬುಲೆನ್ಸ್ ಅವರು ಬಾಯಿಗೆ ಬಂದ ದರ ಕೇಳಿದ್ದರು. ಹೇಗೋ ತಂದೆಯನ್ನ ಆಸ್ಪತ್ರೆಗೆ ಸೇರಿಸಿದ್ದರು. ಆದ್ರೆ, ಅವರು ತೀರಿಕೊಂಡರು. ಅದೇ ನೋವಿನಲ್ಲಿ ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು, ಟೈಂಗೆ ಸರಿಯಾಗಿ ಆಂಬುಲೆನ್ಸ್ ಸಿಗಬೇಕು ಅಂತ ತಾನೇ ಒಂದು ಆಂಬುಲೆನ್ಸ್ ತಂದು ತಮ್ಮ ಕ್ಯಾಂಟೀನ್ ಮುಂದೆ ನಿಲ್ಲಿಸಿಕೊಂಡಿದ್ದಾರೆ ಕ್ಯಾಂಟೀನ್ ಮಂಜಣ್ಣ. ಯಾವುದೇ ಹೊತ್ತಲ್ಲಿ, ಯಾರೇ ಬಂದು ಕೇಳಿದರು ಒಂದು ರೂಪಾಯಿ ಹಣವಿಲ್ಲದೆ ಪೆಟ್ರೋಲ್ ಹಾಕಿಸಿಕೊಂಡು ಹೋಗಿ ಅಂತ ಕಳಿಸುತ್ತಾರೆ. ಅಂದು ನನ್ನ ತಂದೆಗೆ ಆಂಬುಲೆನ್ಸ್ ಸಿಗಲಿಲ್ಲ. ಇಂದು ಕೇಳಿದವರಿಗೆ ಇಲ್ಲ ಅನ್ನಲ್ಲ. ಪೆಟ್ರೋಲ್‍ಗೂ ಹಣ ಇಲ್ಲ ಅಂದ್ರೆ ನಾವೇ ಹಾಕಿಸಿ ಕಳಿಸುತ್ತೇವೆ. ಈ ಕೆಲಸ ನನಗೆ ಮನಸ್ಸಿಗೆ ಖುಷಿ ಕೊಡ್ತಿದೆ ಅಂತಾರೆ ಕ್ಯಾಂಟೀನ್ ಮಂಜಣ್ಣ, ಆಂಬುಲೆನ್ಸ್ ದಾನಿ.

ನನ್ನ ತಂದೆಗೆ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗಲಿಲ್ಲ. ಕೊರೋನಾ ಸಂದರ್ಭದಲ್ಲೂ ಇನ್ ಟೈಂ ಆಂಬುಲೆನ್ಸ್ ಸಿಗದೆ ಎಷ್ಟೋ ಜನ ಸಾವನ್ನಪ್ಪಿದ್ದಾರೆ ಎಂದು ತಾವೇ ಐದೂರವರೆ ಲಕ್ಷ ರೂಪಾಯಿಯ ಆಂಬುಲೆನ್ಸ್ ತಂದು ತನ್ನ ಕ್ಯಾಂಟೀನ್ ಮುಂದೆಯೇ ನಿಲ್ಲಿಸಿಕೊಂಡಿದ್ದಾರೆ. ಈ ಆಂಬುಲೆನ್ಸ್ ನಲ್ಲಿ ಆಕ್ಸಿಜನ್, ಟ್ರೀಟ್‍ಮೆಂಟ್ ಕಿಟ್ ಎಲ್ಲವೂ ಇದೆ. ಯಾರೇ ಬಂದು ಕೇಳಿದರು ಇಲ್ಲ ಅನ್ನಲ್ಲ. ಪೆಟ್ರೋಲ್ ಹಾಕಿಸಿಕೊಂಡು ಹೋಗಿ ಅಂತ ಡ್ರೈವರ್ ಜೊತೆ ಕಳಿಸುತ್ತಾರೆ.

ಡ್ರೈವರ್ ಬಾಟಾ ಕೂಡ ಕೇಳಲ್ಲ. ಅವರೇ ಪ್ರೀತಿಯಿಂದ ಕೊಟ್ಟರೆ ಮಾತ್ರ ಪಡೆದುಕೊಳ್ಳುತ್ತಾರೆ. ಈ ಕ್ಯಾಂಟೀನ್ ಮಂಜಣ್ಣ ಸ್ಲಂನಲ್ಲಿ ವಾಸವಿದ್ದಾರೆ. ಅದೇ ಸ್ಲಂನಲ್ಲಿ ಸುಮಾರು 30ಕ್ಕೂ ಹೆಚ್ಚು ಡ್ರೈವರುಗಳೂ ಇದ್ದಾರೆ. ಅವರು ಕೂಡ ಯಾವುದೇ ಹೊತ್ತಲ್ಲಿ ಹೋಗಿ ಕೇಳಿದರೂ ಇಲ್ಲ ಅನ್ನದೆ ಆಂಬುಲೆನ್ಸ್ ತೆಗೆದುಕೊಂಡು ಹೋಗುತ್ತಾರೆ. ಕಳೆದ ಆರು ತಿಂಗಳಿಂದ ತಂದೆ ಹೆಸರಲ್ಲಿ ಆಂಬುಲೆನ್ಸ್ ಬಿಟ್ಟಿರೋ ಇವ್ರು ಈವರೆಗೆ 35ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕಳಿಸಿದ್ದಾರೆ. ಚಿಕ್ಕ ಕ್ಯಾಂಟೀನ್ ಜೊತೆ ಟ್ರ್ಯಾಕ್ಟರ್ ಹಾಗೂ ಲಾರಿ ಇದೆ. ಅದರಲ್ಲಿ ಬಂದ ಲಾಭದ ದುಡ್ಡು ಹಾಗೂ ಕ್ಯಾಂಟೀನ್‍ನಲ್ಲಿ ಬಂದ ಹಣವನ್ನ ಕೂಡಿಟ್ಟು ಆಂಬುಲೆನ್ಸ್ ತಂದು ಸಾರ್ವಜನಿಕ ಸೇವೆಗೆ ಬಿಟ್ಟಿದ್ದಾರೆ. ಇವರ ಈ ಕೆಲಸಕ್ಕೆ ಸ್ಥಳೀಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಸೇವಾ ಮನೋಭಾವಕ್ಕೆ ಹಣ ಬೇಡ. ಮನಸ್ಸು ಬೇಕಷ್ಟೆ. ಮನೆಯಲ್ಲಿ ಕೋಟಿ-ಕೋಟಿ ಕೊಳೆಯುತ್ತಿದ್ರು ನೂರು ರೂಪಾಯಿ ಕೊಡೋದಕ್ಕೆ ಮೀನಾಮೇಷ ಎಣಿಸ್ತಾರೆ. ನಿಂಗ್ ಯಾಕ್ ಕೊಡ್ಬೇಕು. ನಮ್ಮಣ್ಣನಾ… ನನ್ ಬಾಮೈದನಾ…. ಅಂತೆಲ್ಲಾ ನೂರಾರು ಪ್ರಶ್ನೆ ಕೇಳ್ತಾರೆ. ದುಡ್ಡು ಮನಸ್ಸನ್ನ ತಂದು ಕೊಡಲ್ಲ. ಆದ್ರೆ, ಕ್ಯಾಂಟೀನ್ ಮಂಜಣ್ಣನಿಗೆ ದುಡ್ಡಿಲ್ಲ ಅಂದರೂ ಆ ಒಳ್ಳೆಯ ಮನಸ್ಸು ಇದೆ. ದುಡಿಯೋ ಮೂರು ಕಾಸಲ್ಲೇ ಐದೂವರೆ ಲಕ್ಷದ ಆಂಬುಲೆನ್ಸ್ ತಂದು ರಸ್ತೆ ಬದಿ ನಿಲ್ಲಿಸಿಕೊಂಡು ಕೇಳ್ದೋರ್ಗೆಲ್ಲಾ ಕೊಡ್ತಿದ್ದಾರೆ. ಇವರ ಸಾಮಾಜಿಕ ಕಾಳಜಿಗೆ ಹ್ಯಾಟ್ಸ್​​ ಆಫ್ ಹೇಳಲೇಬೇಕು.

ವರದಿ: ಅಶ್ವಿತ್ ಮಾವಿನಗುಣಿ, ಟಿವಿ9, ಚಿಕ್ಕಮಗಳೂರು