ಮುಲ್ಲಾಗಳಿಗೆ ಎದೆ ಸೀಳಿದ್ರೆ 3 ಅಕ್ಷರ ಬರಲ್ಲ ಹೇಳಿಕೆ ಕೇಸ್: ಸಿಟಿ ರವಿ ನಿವಾಸಕ್ಕೆ ನೋಟಿಸ್​ ಅಂಟಿಸಿದ ಪೊಲೀಸ್

ಮುಲ್ಲಾಗಳಿಗೆ ಎದೆ ಸೀಳಿದ್ರೆ 3 ಅಕ್ಷರ ಬರಲ್ಲ ಎಂಬ ಬಿಜೆಪಿ ಎಂಎಲ್​​ಸಿ ಸಿಟಿ ರವಿ ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಮುಸ್ಲಿಮರು ಆಕ್ರೋಶಗೊಂಡಿದ್ದಾರೆ. ಇನ್ನು ಅವಹೇಳನಕಾರಿ ಹೇಳಿಕೆ ಆರೋಪದಡಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಈ ಸಂಬಂಧ ಚಿಕ್ಕಮಗಳೂರಿನ ಅವರ ನಿವಾಸಕ್ಕೆ ನೋಟಿಸ್‌ ನೀಡಲು ಬಂದ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ದಾದವಾಗಿದ್ದು, ಭಾರೀ ಹೈಡ್ರಾಮಾವೇ ನಡೆದಿದೆ.

ಮುಲ್ಲಾಗಳಿಗೆ ಎದೆ ಸೀಳಿದ್ರೆ 3 ಅಕ್ಷರ ಬರಲ್ಲ ಹೇಳಿಕೆ ಕೇಸ್: ಸಿಟಿ ರವಿ ನಿವಾಸಕ್ಕೆ ನೋಟಿಸ್​ ಅಂಟಿಸಿದ ಪೊಲೀಸ್
Ct Ravi
Edited By:

Updated on: Jul 26, 2026 | 3:28 PM

ಮುಖ್ಯಾಂಶಗಳು

  • ಮುಲ್ಲಾಗಳಿಗೆ ಎದೆ ಸೀಳಿದರೆ 3 ಅಕ್ಷರ ಬರಲ್ಲ ಎಂಬ ಬಿಜೆಪಿ ಎಂಎಲ್​​​ಸಿ ಸಿಟಿ ರವಿ ಹೇಳಿಕೆ ವಿಚಾರ
  • ಸಿ.ಟಿ.ರವಿ ನಿವಾಸಕ್ಕೆ ನೋಟಿಸ್ ಅಂಟಿಸಿದ ಚಿಕ್ಕಮಗಳೂರು ನಗರ ಠಾಣೆಯ ಇನ್ಸ್​ಪೆಕ್ಟರ್​ ಅಭಯ್ ಪ್ರಕಾಶ್
  • ಸಿ.ಟಿ.ರವಿ ನಿವಾಸಕ್ಕೆ ಅಂಟಿಸಿದ್ದ ನೋಟಿಸ್​ ಕಿತ್ತು ಎಸೆದ ಕಾರ್ಯಕರ್ತರು

ಚಿಕ್ಕಮಗಳೂರು, (ಜುಲೈ 26): ಅವಹೇಳನಕಾರಿ ಹೇಳಿಕೆ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜುಲೈ 26) ಭಾನುವಾರ ಪೊಲೀಸರು, ಚಿಕ್ಕಮಗಳೂರಿನ (Chikkamagaluru) ಸಿಟಿ ರವಿ ಅವರ ಮನೆಗೆ ನೋಟಿಸ್ ನೀಡಲು ಬಂದ ವೇಳೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಚಿಕ್ಕಮಗಳೂರು ನಗರ ಠಾಣೆಯ ಇನ್ಸ್​ಪೆಕ್ಟರ್​ ಅಭಯ್ ಪ್ರಕಾಶ್ ಅವರು ಸಿಟಿ ರವಿ ಅವರಿಗೆ ನೋಟಿಸ್ ನೀಡಲು​ ಮುಂದಾಗಿದ್ದಾರೆ. ಆದ್ರೆ, ಸಿಟಿ ರವಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದು, ಬಳಿಕ 27 ರಂದು 11 ಗಂಟೆಗೆ ತನಿಖೆಗೆ ಬರುವಂತೆ ನೋಟಿಸ್​ ಅನ್ನು ಮನೆಯ ಗೋಡೆಗೆ ಅಂಟಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು, ನೋಟಿಸ್ ಕಿತ್ತೆಸೆದು ಪೊಲೀಸರಿಗೆ ಧಿಕ್ಕಾರ ಕೂಗಿದರು.

ಸಿ.ಟಿ. ರವಿ ಹೇಳಿದ್ದೇನು?

ಈ ವೇಳೆ ಪೊಲೀಸರ ಜತೆ ಮಾತನಾಡಿದ ಸಿ.ಟಿ. ರವಿ, ತಾವು ಮಾಡಿದ ಭಾಷಣದಲ್ಲಿ ಯಾವುದೇ ಸಮುದಾಯದ ವಿರುದ್ಧ ದ್ವೇಷ ಅಥವಾ ಅವಹೇಳನಕಾರಿ ಅಂಶಗಳಿಲ್ಲ. ನಾನು ಬೆಂಕಿ ಹಚ್ಚಲು ಬಂದ ವ್ಯಕ್ತಿಯ ಬಗ್ಗೆ ಮಾತನಾಡಿದ್ದೇನೆ. ಎಫ್‌ಐಆರ್‌ನಲ್ಲಿ ಮುಸ್ಲಿಂ ಸಮುದಾಯದ ಅವಹೇಳನ ಎಲ್ಲಿದೆ? ಎಂದು ಪ್ರಶ್ನಿಸಿದರು.

ಇದನ್ನೂ ನೋಡಿ: ಎದೆ ಸೀಳಿದರೆ ಮೂರು ಅಕ್ಷರ ಇಲ್ಲದ ಮುಲ್ಲಾಗಳಿಗೂ, ನೀಟ್ ಪರೀಕ್ಷೆಗೂ ಏನು ಸಂಬಂಧ?: ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ

ಯಾರೇ ದೂರು ನೀಡಿದರೂ ತಕ್ಷಣ ಎಫ್‌ಐಆರ್‌ ದಾಖಲಿಸಿ ಬಂಧನ ಮಾಡುತ್ತೀರಾ? ದೂರು ನೀಡಿದವರು ಯಾರು, ದೂರಿನ ಸ್ವರೂಪ ಏನು ಎಂಬುದನ್ನು ಪರಿಶೀಲಿಸಬೇಕಲ್ಲವೇ? ನನ್ನ ಭಾಷಣದಲ್ಲಿ ‘ಧರ್ಮ’ ಎಂಬ ಪದವೇ ಇಲ್ಲ. ‘ಮುಲ್ಲಾ’ ಎಂದರೆ ‘ಮುಸ್ಲಿಂ’ ಎಂಬ ಅರ್ಥವೇ? ಬೆಂಕಿ ಹಚ್ಚಲು ಬಂದ ವ್ಯಕ್ತಿಯನ್ನು ಉಲ್ಲೇಖಿಸಿ ಮಾತನಾಡಿದ್ದೇನೆ. ನಾಳೆಯೂ ಅದನ್ನೇ ಹೇಳುತ್ತೇನೆ ಎಂದರು.

ಕಾರ್ಯಕರ್ತರ ಪ್ರತಿಭಟನೆ, ಇನ್ಸ್‌ಪೆಕ್ಟರ್ ವಾಪಸ್

ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, “ನಾವು ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ದೂರು ನೀಡಿದ್ದೇವೆ. ಆ ಪ್ರಕರಣದಲ್ಲಿ ಎಷ್ಟು ಕ್ರಮ ಕೈಗೊಂಡಿದ್ದೀರಿ? ನಮ್ಮ ದೂರಿನ ಬಗ್ಗೆ ಏನು ಕ್ರಮವಾಗಿದೆ?” ಎಂದು ಪೊಲೀಸರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್, ನೋಟಿಸ್​ ನೀಡಲು ಬಂದಿದ್ದೇವೆ, ನಾವು ಬಂಧನ ಮಾಡಲು ಬಂದಿಲ್ಲ. ತನಿಖೆ ಮಾಡುತ್ತೇವೆ ಅಷ್ಟೇ ಎಂದರು. ಆದರೂ ಸುಮ್ಮನಾಗದ ಕಾರ್ಯಕರ್ತರು, ಪೊಲೀಸರನ್ನು ಸುತ್ತುವರೆದು ಪ್ರತಿಭಟನೆ ಮಾಡುತ್ತ ಧಿಕ್ಕಾರ ಕೂಗಿದ್ದಾರೆ. ಇದರಿಂದ ಕೋಪಗೊಂಡ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್, ಇಲ್ಲಿಯವರೆಗೆ ಯಾರು ಈ ತರಹ ಮಾಡಿಲ್ಲ. ಇದು ತಪ್ಪು. ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದೀರಿ ಎಂದು ಹೇಳಿ ಅಲ್ಲಿಂದ ತೆರಳಿದರು.

ಸಿಟಿ ರವಿ ವಿರುದ್ಧ ಎಫ್​​​ಐಆರ್

ದೇಶಾದ್ಯಂತ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನಡೆದ ನೀಟ್ ಪತ್ರಿಕೆ ಸೋರಿಕೆ ಪ್ರತಿಭಟನೆಗಳ ಕುರಿತು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಚಿಕ್ಕಮಗಳೂರು ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.  ಜಮಿಯಾ ಸಮಿತಿ ಅಧ್ಯಕ್ಷ ಮುದಾಸಿರ್ ಪಾಷ ನೀಡಿದ್ದ ದೂರಿನ ಮೇರೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.
FIR Against CT Ravi Over Alleged Hate Speech: ಮುಲ್ಲಾಗಳ ಎದೆ ಸೀಳಿದ್ರೆ 3 ಅಕ್ಷರವಿಲ್ಲ ಎಂದಿದ್ದ ಸಿ.ಟಿ.ರವಿ

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Sun, 26 July 26

Follow Us