ಚಿಕ್ಕಮಗಳೂರು: ಕೊಚ್ಚಿ ಹೋದ ಬಾಲಕಿಯ ಪತ್ತೆಗಾಗಿ ಮುಂದುವರೆದ ಶೋಧ; ಜಿಲ್ಲೆಯ ಐದು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ
ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿಯ ಪತ್ತೆಗಾಗಿ ಇಂದು ಕೂಡ ಶೋಧಕಾರ್ಯ ಮುಂದುವರೆಯಿತು. ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಬಾಲಕಿ ಶಾಲೆಯಿಂದ ಅಣ್ಣನ ಜೊತೆ ಮನೆಗೆ ಹೋಗುವಾಗ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾಳೆ.
ಚಿಕ್ಕಮಗಳೂರು: ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿಯ ಪತ್ತೆಗಾಗಿ ಇಂದು ಕೂಡ ಶೋಧಕಾರ್ಯ ಮುಂದುವರೆಯಿತು. ನಿನ್ನೆ (ಜುಲೈ 4) ಚಿಕ್ಕಮಗಳೂರು (Chikkamagaluru) ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಶಾಲೆಯಿಂದ (School) ಅಣ್ಣನ (Brother) ಜೊತೆ ಮನೆಗೆ ವಾಪಸ್ಸಾಗುವಾಗ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾಳೆ. ಬಾಲಕಿಗಾಗಿ ನಿನ್ನೆಯಿಂದ ತೀವ್ರ ಶೋಧ ನಡೆಸುತ್ತಿದ್ದರೂ, ಬಾಲಕಿ ಪತ್ತೆಯಾಗಿಲ್ಲ. ಹೀಗಾಗಿ ಇಂದು ಕೂಡ ಶೋಧ ಕಾರ್ಯ ಮುಂದುವರೆಯಿತು. ಬಾಲಕಿಯ ಶೋಧ ಕಾರ್ಯದಲ್ಲಿ ಅಗ್ನಿಶಾಮಕ ದಳ, ಧರ್ಮಸ್ಥಳ ಶೌರ್ಯ ವಿಪತ್ತು ಪಡೆಯ ಸಿಬ್ಬಂದಿ ಭಾಗಿಯಾಗಿದ್ದಾರೆ.
ಈ ಸಂಬಂಧ ಬೆಂಗಳೂರಿನಿಂದ SDRF ಟೀಂ ಚಿಕ್ಕಮಗಳೂರಿಗೆ ಆಗಮಿಸುತ್ತಿದೆ. ನಾಳೆಯಿಂದ ಎಸ್ಡಿಆರ್ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿ ರಮೇಶ್, ಎಸ್ ಪಿ ಅಕ್ಷಯ್, ಜಿಪಂ ಸಿಇಓ ಪ್ರಭು ಆಗಮಿಸುತ್ತಿದ್ದ ವೇಳೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪ ಅವರ ಕಾರಿನ ಮುಂಭಾಗವೇ ವಿದ್ಯುತ್ ಕಂಬ ಬಿದ್ದಿದೆ. 15 ನಿಮಿಷ ರಸ್ತೆ ಮಧ್ಯೆ ನಿಂತು ದುರಸ್ತಿಗೊಳಿಸಿ ಅಧಿಕಾರಿಗಳು ಹೊಸಪೇಟೆಗೆ ಬಂದಿದ್ದಾರೆ.
ಜಿಲ್ಲೆಯಲ್ಲಿ ಇಂದು ಕೂಡ ವರುಣನ ಆರ್ಭಟ ಮುಂದುವರೆದಿದ್ದು, 5 ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ನಾಲ್ಕು ದಿನ ರಜೆ ಘೋಷಣೆ ಮಾಡಿದ್ದಾರೆ. ಕೊಪ್ಪ ತಾಲೂಕಿನ ಮೂಡಿಗೆರೆ, ಕಳಸ, ಎನ್.ಆರ್.ಪುರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಅಂಬಳೆ ಹೋಬಳಿ ಹೊರತುಪಡಿಸಿ ಉಳಿದ ಶಾಲೆಗಳಿಗೆ ರಜೆ ನಾಳೆಯಿಂದ ಜುಲೈ 9 ರವರೆಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ಇದನ್ನು ಓದಿ: Chandrashekhar Guruji Murder: ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳು ಅರೆಸ್ಟ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ 30ಕ್ಕೂ ಹೆಚ್ಚು ಮನೆಗಳಿಗೆ ನಗ್ಗಿದ ನೀರು
ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಭಾರಿ ಮಳೆಯಿಂದ ಕಾರವಾರ ತಾಲೂಕಿನ ಅರಗ ಗ್ರಾಮದ 30ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಈ ಸಂಬಂಧ ಅರಗ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಹಾಗೇ ನೌಕಾನೆಲೆ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-66 ಕೂಡ ಜಲಾವೃತಗೊಂಡಿದೆ. ಹೆದ್ದಾರಿ ಜಲಾವೃತದಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ನಾಳೆಯೂ (ಜುಲೈ 6) ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ.