ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಲೈಂಗಿಕ ದೌರ್ಜನ್ಯ ಕೇಸ್ಗೆ ಟ್ವಿಸ್ಟ್: ಪ್ರೊಫೆಸರ್ ವಿರುದ್ಧ ವಿದ್ಯಾರ್ಥಿನಿ ದೂರು
ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಪ್ರೊ. ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಅಶ್ಲೀಲ ಸಂದೇಶಗಳ ಮೂಲಕ ಕಿರುಕುಳ ನೀಡಿದ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಆ ಮೂಲಕ 2023ರಲ್ಲಿ ನಡೆದಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದ ಆರೋಪವು ಕೇಳಿಬಂದಿದೆ.

ಚಿಕ್ಕಮಗಳೂರು, ನವೆಂಬರ್ 25: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಮೆಡಿಕಲ್ ಕಾಲೇಜುಗಳ (Medical College) ಪೈಕಿ ಒಂದು. ಇದೀಗ ಇದೇ ಕಾಲೇಜಿನ ಪ್ರೊ. ಗಂಗಾಧರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ವಿದ್ಯಾರ್ಥಿನಿ (Student) ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರೊಫೆಸರ್ ವಿರುದ್ಧ ದೂರು ನೀಡಿದ್ದಾರೆ.
ಸಂತ್ರಸ್ತೆ ವಿದ್ಯಾರ್ಥಿನಿ ಹೇಳಿದ್ದಿಷ್ಟು
ದೂರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂತ್ರಸ್ತ ವಿದ್ಯಾರ್ಥಿನಿ, ನನಗೆ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದರು. ನನ್ನೊಂದಿಗೆ ಸಹಕರಿಸು ಎಂದು ಹೇಳುತ್ತಿದ್ದರು. ಒಂಟಿಯಾಗಿ ಚೇಂಬರ್ ನಲ್ಲಿ ಇದ್ದಾಗ ಬರುವಂತೆ ಪೀಡಿಸುತ್ತಿದ್ದರು. ಡಾ. ಗಂಗಾಧರ್ ಅವರಿಂದ ನಿರಂತರವಾಗಿ ಕಿರುಕುಳ ಪಟ್ಟಿದ್ದೇನೆ. ಇದನ್ನೆಲ್ಲಾ ನಾನು ಡೀನ್ ಅವರ ಗಮನಕ್ಕೆ ತಂದಿದ್ದೆ. ಡೀನ್ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Video: ಜೀವನಕ್ಕಾಗಿ ಮೆಕ್ಯಾನಿಕ್ ಕೆಲಸ, ಪ್ರಾಣಿಗಳೇ ಈತನ ಪ್ರಪಂಚ; ಇದು ಕುದುರೆಮುಖದ ರೂಬನ್ ಜೀವನದ ಕಥೆ
ಮೆಸೇಜ್ ಮಾಡಿರುವ ದಾಖಲೆಗಳನ್ನು ನಾನು ನೀಡಿದ್ದೇನೆ. ಆದರೂ ಕ್ರಮಕ್ಕೆ ಮುಂದಾಗಲಿಲ್ಲ. ಆರು ತಿಂಗಳು ಕಾಲೇಜಿಗೆ ಬರದಂತೆ ಹೇಳಿದ್ದರು. ಈಗ ನನಗೆ ಪರೀಕ್ಷೆ ಬರೆಯುಲು ಕೂಡ ಬಿಡುತ್ತಿಲ್ಲ. ನನ್ನ ಗಂಡ ಕೂಡ ವೈದ್ಯ, ಅದೇ ಕಾಲೇಜಿನಲ್ಲಿ ಪ್ರೊಫೆಸರ್. ಅವರಿಗೂ ಕಿರುಕುಳ ನೀಡುತ್ತಿದ್ದಾರೆ. ನನಗೆ ನ್ಯಾಯ ಬೇಕು ಎಂದು ಠಾಣೆಗೆ ಬಂದಿದ್ದೇನೆ. ನನಗೆ ನೈತಿಕವಾಗಿ ಬೆಂಬಲ ಸಿಕ್ಕ ಬಳಿಕ ಠಾಣೆಗೆ ಬಂದು ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಅನಾಟಮಿ ಪ್ರೊ. ಗಂಗಾಧರ್ 3ನೇ ವರ್ಷದ ಮೆಡಿಕಲ್ ವಿದ್ಯಾರ್ಥಿನಿಯೊಬ್ಬರಿಗೆ ಅಶ್ಲಿಲವಾಗಿ ಮೆಸೇಜ್ ಕಳುಹಿಸಿ ಲೈಂಗಿಕ ದೌರ್ಜನ್ಯ ನೀಡ್ತಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿ, ಭಾರೀ ಚರ್ಚೆಗೆ ಕಾರ್ಣವಾಗುತ್ತಿದ್ದಂತೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಹರೀಶ್ ಅವರು ಪ್ರೊ. ಗಂಗಾಧರ್ಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ನಡೆದದ್ದೇನು?
ಮೆಡಿಕಲ್ ಕಾಲೇಜ್ ಪ್ರೊ. ಗಂಗಾಧರ್ ಮತ್ತು ವಿದ್ಯಾರ್ಥಿನಿ ನಡುವೆ 2023ರಲ್ಲಿ ನಡೆದಿದ್ದ ಗುಪ್ತ ಸಂಭಾಷಣೆ ಮೆಡಿಕಲ್ ಕಾಲೇಜು ಆವರಣದಲ್ಲಿ ಭಾರೀ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ ಗಂಗಾಧರ್ರಿಂದ ಕಿರುಕುಳ ಆಗುತ್ತಿದೆ ಎಂದು ಬೆಂಗಳೂರು ಮೂಲದ ವಿದ್ಯಾರ್ಥಿನಿ ಆರೋಪ ಮಾಡಿದ್ದರು. 2023ರಿಂದ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವಿಷಯ ಡೀನ್ಗೆ ಮೊದಲೇ ಗೊತ್ತಿದ್ದರು ಕೂಡ ಯಾವುದೇ ಕ್ರಮಕೈಗೊಳ್ಳದೆ ಪ್ರೊ. ಗಂಗಾಧರ್ ರಕ್ಷಣೆಗೆ ಮುಂದಾಗಿದ್ದರು ಎಂಬ ಆರೋಪ ಸಹ ಇದೆ.
ಹಳೆ ಕೇಸ್: ಹೊಸ ಸ್ವರೂಪ
ಪರೀಕ್ಷೆ ಸಮೀಪಿಸುತ್ತಿದ್ದಂತೆ ಹಾಜರಾತಿ ಕೊರತೆ ಇದೆ ಎಂಬ ಕಾರಣಕ್ಕೆ ಕೆಲ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಟ್ಟಿಲ್ಲ. ಇದಕ್ಕೆ ಪ್ರೊ. ಗಂಗಾಧರ್ ಕಾರಣ. ಅವರು ವೈಯಕ್ತಿಕವಾಗಿ ತೆಗೆದುಕೊಂಡಿದ್ದು, ಪರೀಕ್ಷೆ ಬರೆಯಬಾರದೆಂದು ಹೀಗೆ ಮಾಡಿದ್ದಾರೆಂಬ ಮತ್ತೊಂದು ಆರೋಪ ಮಾಡಿದ್ದಾರೆ. 2023ರಲ್ಲಿ ನಡೆದಿದ್ದ ಘಟನೆ ಈಗ ಹೊಸ ಸ್ವರೂಪ ಪಡೆದುಕೊಂಡು ಭಾರೀ ಸದ್ದು ಮಾಡುತ್ತಿದೆ.
ಸದ್ಯ ಇದರಿಂದ ಎಚ್ಚೆತ್ತುಕೊಂಡಿರುವ ಡೀನ್, ಸಂತ್ರಸ್ತೆ ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ನಲ್ಲಿ ನೀಡಿರುವ ಸಂದರ್ಶನದಲ್ಲಿ, ಪ್ರೊ. ಗಂಗಾಧರ್ ವಾಟ್ಸ್ಆ್ಯಪ್ ಚಾಟ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿರುವ ಬಗ್ಗೆ ಆರೋಪಿಸಿರುತ್ತಾರೆ. 3 ದಿನಗಳ ಒಳಗೆ ಕುರಿತು ಲಿಖಿತ ಸಮಜಾಯಿಷಿ ನೀಡಬೇಕು ಎಂದು ಶೋಕಾಸ್ ನೋಟಿಸ್ ಮೂಲಕ ಸೂಚನೆ ನೀಡಿದ್ದಾರೆ. ತಪ್ಪಿದ್ದಲ್ಲಿ ತಮ್ಮ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಗಂಗಾಧರ್ ಅವರಿಗೆ ನೀಡಿದ ನೋಟಿಸ್ನಲ್ಲಿ ಡೀನ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಲೈಂಗಿಕ ಕಿರುಕುಳ: ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ
ಒಟ್ಟಿನಲ್ಲಿ ಮೆಡಿಕಲ್ ಕಾಲೇಜು ಪ್ರೊ, ವಿದ್ಯಾರ್ಥಿನಿ ನಡುವೆ ವಾಟ್ಸ್ಆ್ಯಪ್ನಲ್ಲಿ ನಡೆದಿದ್ದ ವೈಯಕ್ತಿಕ ಸಂಭಾಷಣೆಯ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ಈ ಪ್ರಕಾರಣ ಮತ್ತೆ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:33 pm, Tue, 25 November 25




