ಚಿಕ್ಕಮಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ‘ಶಕ್ತಿ ಯೋಜನೆ’ ಜಾರಿಯಿಂದ ಚಿಕ್ಕಮಗಳೂರು (Chikkamagalur) ವಿಭಾಗದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ (KSRTC Bus) ಪ್ರಯಾಣಿಸುವವರ ಸಂಖ್ಯೆಯಲ್ಲಿ ಶೇ 25ರಷ್ಟು ಏರಿಕೆಯಾಗಿದೆ. ಆದಾಗ್ಯೂ, ಹೊಸ ಯೋಜನೆಯ ಅನುಷ್ಠಾನದ ನಂತರ ಆದಾಯ ಸಂಗ್ರಹವು ಸುಮಾರು ಶೇ 45 ರಷ್ಟು ಕುಸಿದಿದೆ. ಈ ವಿಭಾಗವು ಚಿಕ್ಕಮಗಳೂರು ಜಿಲ್ಲೆಯ ಏಳು ತಾಲ್ಲೂಕುಗಳನ್ನು ಮತ್ತು ಹಾಸನ ಜಿಲ್ಲೆಯ ಆಲೂರು, ಬೇಲೂರು ಮತ್ತು ಸಕಲೇಶಪುರ ತಾಲ್ಲೂಕುಗಳನ್ನು ಒಳಗೊಂಡಿದೆ. ವಿಪರ್ಯಾಸವೆಂದರೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಅಲಭ್ಯತೆಯಿಂದಾಗಿ ಶೇ 40ರಷ್ಟು ಮಹಿಳೆಯರು ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಮತ್ತೊಂದೆಡೆ, ಪ್ರಯಾಣಿಕರ ಸಂಖ್ಯೆ 1.6 ಲಕ್ಷ ಮತ್ತು ಆದಾಯ 65 ಲಕ್ಷ ರೂಪಾಯಿ ತಲುಪಿದೆ. ಹೊಸ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ 20ರಷ್ಟು ಹೆಚ್ಚಾಗಿದೆ. ಮೊದಲು ಶೇ 15 ರಿಂದ 20 ರಷ್ಟು ಪ್ರಯಾಣಿಕರು ಮಹಿಳೆಯರಾಗಿದ್ದರು. ಆದರೆ ಈಗ ಶೇ 40 ರಷ್ಟು ಮಹಿಳೆಯರು ಪ್ರಯಾಣಿಸುತ್ತಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಕೆಎಸ್‌ಆರ್‌ಟಿಸಿಯು 35 ರಿಂದ 40 ಲಕ್ಷ ರೂಪಾಯಿ ಟಿಕೆಟ್ ಮೊತ್ತವನ್ನು ಸಂಗ್ರಹಿಸುತ್ತಿದ್ದು, ಮಹಿಳಾ ಪ್ರಯಾಣಿಕರ ಟಿಕೆಟ್ ಶುಲ್ಕವನ್ನು ರಾಜ್ಯ ಸರ್ಕಾರ ಭರಿಸಲಿದೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೊತ್ತವು ದಿನಕ್ಕೆ 25 ರಿಂದ 30 ಲಕ್ಷ ರೂಪಾಯಿಗಳವರೆಗೆ ಇರುತ್ತದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆಆರ್ ಬಸವರಾಜ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ವಿಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ಗಳು ದಿನಕ್ಕೆ ಸುಮಾರು 1.80 ಲಕ್ಷ ಕಿಲೋಮೀಟರ್ ಕ್ರಮಿಸುತ್ತವೆ ಮತ್ತು 65 ಲಕ್ಷ ರೂಪಾಯಿ ಆದಾಯವನ್ನು ಗಳಿಸುತ್ತವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Chikkamagaluru: ಡ್ರೈವರ್ ಸೀಟ್ನ ಡೋರ್ ಮೂಲಕ ಬಸ್ ಹತ್ತಿದ ನಾರಿಯರು, ಬಪ್ಪರೆ ಲೇಡಿಸ್
ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿಗೆ ತಂದಿದ್ದರೂ, 430 ಹಳ್ಳಿಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿಲ್ಲದ ಕಾರಣ ಜಿಲ್ಲೆಯ ಸುಮಾರು ಶೇ 40 ರಷ್ಟು ಮಹಿಳೆಯರು ಯೋಜನೆಯಿಂದ ವಂಚಿತರಾಗಿದ್ದಾರೆ. 10 ಕಿಲೋಮೀಟರ್ ದೂರ ಕ್ರಮಿಸಿ ಕೆಲಸದ ಸ್ಥಳಕ್ಕೆ ಬರುತ್ತಿದ್ದು, ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ ಎಂದು ಕೊಪ್ಪ ತಾಲೂಕಿನ ಕೂಲಿ ಕಾರ್ಮಿಕರಾಗಿರುವ ಅನ್ನಪೂರ್ಣ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ನಮ್ಮ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲ, ಹೊಸದಾಗಿ ಜಾರಿಗೆ ತಂದಿರುವ ಯೋಜನೆ ಪ್ರಯೋಜನವಾಗಿಲ್ಲ, ಕೆಎಸ್‌ಆರ್‌ಟಿಸಿಯವರು ಬೆಳಗ್ಗೆ ಮತ್ತು ಸಂಜೆಯಾದರೂ ಸೇವೆ ಆರಂಭಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಎಲ್ಲ ಪ್ರದೇಶಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕಿದ್ದರೆ ಕನಿಷ್ಠ 50 ಬಸ್‌ಗಳು ಮತ್ತು ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:58 pm, Tue, 20 June 23