ಚಿಕ್ಕಮಗಳೂರು ಪೊಲೀಸರ ಬೃಹತ್​ ಬೇಟೆ; 1 ಕ್ವಿಂಟಲ್​ಗೂ ಹೆಚ್ಚು ತೂಕದ ಒಣ ಗಾಂಜಾ ತರಕಾರಿ ಗಾಡಿಯಲ್ಲಿ ಪತ್ತೆ, ಮೂವರು ವಶಕ್ಕೆ

ಚಿಕ್ಕಮಗಳೂರು ಪೊಲೀಸರ ಬೃಹತ್​ ಬೇಟೆ; 1 ಕ್ವಿಂಟಲ್​ಗೂ ಹೆಚ್ಚು ತೂಕದ ಒಣ ಗಾಂಜಾ ತರಕಾರಿ ಗಾಡಿಯಲ್ಲಿ ಪತ್ತೆ, ಮೂವರು ವಶಕ್ಕೆ
ವಶಕ್ಕೆ ಪಡೆದ ಕ್ವಿಂಟಲ್​ಗಟ್ಟಲೆ ಗಾಂಜಾ

CEN ಇನ್ಸ್ಪೆಕ್ಟರ್ ರಕ್ಷಿತ್ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿ ಮಾಡಿ ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಿಗೆ ತಮ್ಮ ತಂಡದ ಮೂಲಕ ಪೂರೈಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

TV9kannada Web Team

| Edited By: Skanda

Aug 28, 2021 | 9:36 AM

ಚಿಕ್ಕಮಗಳೂರು: ಕರ್ನಾಟಕದ ಕರಾವಳಿ, ಮಲೆನಾಡು ಜಿಲ್ಲೆಗಳ ಕಾಲೇಜು ಹುಡುಗರು, ಕೂಲಿ ಕಾರ್ಮಿಕರನ್ನ ಗುರಿಯಾಗಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದರ ಮೇಲೆ ದಾಳಿ ನಡೆಸಿರುವ ಚಿಕ್ಕಮಗಳೂರು ಪೊಲೀಸರು ಒಂದು ಕ್ವಿಂಟಲ್​ಗೂ ಹೆಚ್ಚು ತೂಕದ ಒಣ ಗಾಂಜಾ (Marijuana) ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ಕರ್ತಿಕೆರೆ ಬಳಿ ಘಟನೆ ನಡೆದಿದ್ದು, ಗಾಂಜಾ ಸಾಗಿಸುತ್ತಿದ್ದ ವಾಹನದ ಮೇಲೆ CEN ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಮಲೆನಾಡು ಭಾಗದಲ್ಲಿ ಇಷ್ಟು ದೊಡ್ಡಮಟ್ಟದ ಕಾರ್ಯಾಚರಣೆ ನಡೆದ್ದು, ಒಟ್ಟು 102 ಕೆಜಿ ಒಣ ಗಾಂಜಾ ದಾಳಿ ವೇಳೆ ಲಭ್ಯವಾಗಿದೆ.

CEN ಇನ್ಸ್ಪೆಕ್ಟರ್ ರಕ್ಷಿತ್ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿ ಮಾಡಿ ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಿಗೆ ತಮ್ಮ ತಂಡದ ಮೂಲಕ ಪೂರೈಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಗುಂಪು ತರಕಾರಿ ಗಾಡಿಯಲ್ಲಿ ಗಾಂಜಾ ಸಾಗಣೆ ಮಾಡುವ ಮೂಲಕ ಅಕ್ರಮ ಚಟುವಟಿಕೆಯನ್ನು ಎಗ್ಗಿಲ್ಲದೆ ನಡೆಸುತ್ತಿದ್ದರು, ಕಾಲೇಜು ಹುಡುಗರು, ಕೂಲಿ ಕಾರ್ಮಿಕರೇ ಇವರ ಗುರಿಯಾಗಿದ್ದರು ಎಂದು ಹೇಳಲಾಗಿದೆ.

ಈ ರೀತಿಯ ಗಾಂಜಾ ರೇಡ್ ಇದು ಮೊದಲೆನಲ್ಲ. ಈ ಹಿಂದೆಯೂ ಹಲವಾರು ದಾಳಿ ನಡೆಸಿ ಪೊಲೀಸರು ಗಾಂಜಾ ಮಾಲು ಸಮೇತ ಆರೋಪಿಗಳನ್ನ ಬಂಧಿಸಿದ್ದರು. ಆದರೆ ಇದು ದೊಡ್ಡಮಟ್ಟದ ಕಾರ್ಯಾಚರಣೆಯಾಗಿದ್ದು, ಈ ಹಿಂದೆ ಬಂಧನ ಮಾಡಿದ ಆರೋಪಿಗಳಿಂದ ಪಡೆದ ಮಾಹಿತಿ ಹಾಗೂ ಈ ಗಾಂಜಾ ಖರೀದಿಯಲ್ಲಿ ಯಾರ್ಯಾರು ಭಾಗಿಯಾಗುತ್ತಾರೆ ಅನ್ನೋ ಮಾಹಿತಿಯನ್ನ ಪಡೆದ ಪೊಲೀಸರು ಆ ವ್ಯಕ್ತಿಗಳ ಚಲನ ವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಚಿಕ್ಕಬಳ್ಳಾಪುರದ ಇಬ್ಬರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗಾಂಜಾವನ್ನ ದೊಡ್ಡ ಮಟ್ಟದಲ್ಲಿ ಡೀಲ್ ಮಾಡಿಕೊಂಡು ಅದನ್ನ ನಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು ಎಂಬ ಮಾಹಿತಿಯನ್ನ ಅರಿತ ಪೊಲೀಸರು ಆರೋಪಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ನಿನ್ನೆ ಕೂಡ ವಿಶಾಖಪಟ್ಣಣದಿಂದ ಗಾಂಜಾ ಲೋಡ್ ಆಗಿ ಬರುತ್ತಿದ್ದ ಮಾಹಿತಿಯನ್ನ ಖಚಿತ ಪಡಿಸಿಕೊಂಡು ಆರೋಪಿಗಳ ಸಮೇತ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ.

GANJA RAID

ತರಕಾರಿ ಗಾಡಿಯಲ್ಲಿದ್ದ ಗಾಂಜಾ

ತರಕಾರಿ ಗಾಡಿಯಲ್ಲಿ ಒಂದು ಕ್ವಿಂಟಲ್​ಗೂ ಅಧಿಕ (102 ಕೆಜಿ) ಗಾಂಜಾ ಸಾಗಿಸುತ್ತಿದ್ದ ವಿಚಾರ ಮಲೆನಾಡಿಗರನ್ನೂ ಸೇರಿಸಿದಂತೆ ಇಡೀ ರಾಜ್ಯದ ಜನತೆಯನ್ನೇ ಅಚ್ಚರಿಗೆ ನೂಕಿದ್ದು, ಇಷ್ಟು ದೊಡ್ಡ ಪ್ರಮಾಣದ ಗಾಂಜಾ ಸಾಗಣೆಯಾಗುತ್ತಿದೆ ಎಂದರೆ ಸದರಿ ಜಾಲ ಎಷ್ಟು ವರ್ಷಗಳಿಂದ ಸಕ್ರಿಯವಾಗಿದ್ದಿರಬಹುದು ಎಂಬ ಅನುಮಾನ ಹುಟ್ಟುಹಾಕಿಸಿದೆ. ಆಂಧ್ರಪ್ರದೇಶದಿಂದ ಗಾಂಜಾವನ್ನ ನಮ್ಮ ರಾಜ್ಯಕ್ಕೆ ಸಾಗಿಸುವುದು ಅಷ್ಟು ಸುಲಭವಲ್ಲ. ಆದ್ರೆ ಈ ಖತರ್ನಾಕ್ ಗ್ಯಾಂಗ್ ಆಂಧ್ರದ ವಿಶಾಖಪಟ್ಟಣದಿಂದ ತುಂಬಾ ಸಲೀಸಾಗಿ ಗಾಂಜಾವನ್ನ ನಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು. ತರಕಾರಿ ಗಾಡಿಯಲ್ಲಿ ಯಾರಿಗೂ ಅನುಮಾನ ಬಾರದ ಹಾಗೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಗೆ ಗಾಂಜಾ ಸಫ್ಲೈ ಆಗ್ತಿತ್ತು. ಪಿಕ್ ಆಪ್ ವಾಹನದಲ್ಲಿ ಕೆಳಗಡೆ ಗಾಂಜಾವನ್ನ ಇಟ್ಟು, ಈ ಖತರ್ನಾಕ್ಗಳು ತರಕಾರಿಯನ್ನ ಮೇಲೆ ಲೋಡ್ ಮಾಡುತ್ತಿದ್ದರು. ಇದರಿಂದ ಚೆಕಿಂಗ್ ಸ್ಥಳಗಳಲ್ಲೂ ಪೊಲೀಸರು ಸೇರಿದಂತೆ ಯಾರಿಗೂ ಕೂಡ ಡೌಟೇ ಬರ್ತಾ ಇರಲಿಲ್ಲ. ಚಿಕ್ಕಮಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗದ ಅನೇಕ ಗಾಂಜಾ ಪಾಯಿಂಟ್ಗಳಿಗೆ ಈ ಮಾಲು ಹಂಚಿಕೆಯಾಗುತ್ತಿತ್ತು ಎಂದು ಪೊಲೀಸರಿಗೆ ಮಾಹಿತಿ ಇತ್ತು. ಹಾಗಾಗಿ ಚಿಕ್ಕಮಗಳೂರು ನಗರಕ್ಕೆ ಎಂಟ್ರಿಯಾಗುವ ಮುನ್ನವೇ ತಾಲೂಕಿನ ಕರ್ತಿಕೆರೆ ಬಳಿ ಪೊಲೀಸರು ದಾಳಿ ಆರೋಪಿಗಳನ್ನ ಹೆಡಮುರಿಕಟ್ಟುವುದರ ಜೊತೆಗೆ ದೊಡ್ಡಮಟ್ಟದ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ.

ಹೀಗೆ ಮೂಟೆಗಟ್ಟಲ್ಲೇ ಬರುತ್ತಿದ್ದ ಗಾಂಜಾವನ್ನ ಚಿಕ್ಕ ಚಿಕ್ಕ ಪಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಹೊರಗಡೆಯಿಂದ ಗಾಂಜಾವನ್ನ ತರುತ್ತಿದ್ದ ವ್ಯಕ್ತಿಗಳು ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ. ಪ್ರತಿ ಜಿಲ್ಲೆಗಳಲ್ಲೂ ಹೀಗೆ ಹೊರಗಡೆಯಿಂದ ಬಂದ ಗಾಂಜಾವನ್ನ ಮಾರಾಟ ಮಾಡಲು ನಿರ್ದಿಷ್ಟ ವ್ಯಕ್ತಿಗಳು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ನೆಟ್ವರ್ಕ್ನ ವ್ಯಕ್ತಿಗಳಿಗೆ ಗಾಂಜಾವನ್ನ ನೀಡಿ ಡೀಲ್ ಮುಗಿಸಿಕೊಂಡು ಹೊರಗಡೆಯಿಂದ ಬಂದ ವ್ಯಕ್ತಿಗಳು ಕೈತೊಳೆದುಕೊಳ್ಳುತ್ತಿದ್ದರು. ಹೀಗೆ ಆಂಧ್ರದಿಂದ ಬಂದ ಗಾಂಜಾ ಸ್ಥಳೀಯ ವ್ಯಕ್ತಿಗಳ ಕೈ ಸೇರುತ್ತಿತ್ತು. ಆ ವ್ಯಕ್ತಿಗಳ ಕೂಡ ಕೆಲವು ತಂಡಗಳನ್ನ ಮಾಡಿಕೊಂಡು ಗಾಂಜಾವನ್ನ ಕಾಲೇಜು ವಿದ್ಯಾರ್ಥಿಗಳು, ಯುವಕರು, ಕೂಲಿ ಕಾರ್ಮಿಕರನ್ನ ಗುರಿಯಾಗಿಸಿ ಮಾರಾಟ ಮಾಡುತ್ತಿರೋದನ್ನ ಪೊಲೀಸರು ಪತ್ತೆ ಹಚ್ಚಿದ್ದರು.

ಈ ಹಿಂದೆ 1ಕೆಜಿ, 2 ಕೆಜಿ ಗಾಂಜಾವನ್ನ ಕೆಲವೆಡೆ ವಶಪಡಿಸಿಕೊಳ್ಳುತ್ತಿದ್ದ ಪೊಲೀಸರು, ಸಿಕ್ಕಿಬಿದ್ದ ಆರೋಪಿಗಳಿಂದ ಮಾಹಿತಿ ಪಡೆದು ಕಿಂಗ್ ಪಿನ್ಗಳನ್ನ ಬೇಟೆಯಾಡೋಕೆ ಸಿದ್ದತೆ ನಡೆಸಿದ್ದರು. ಈ ಹಿಂದೆ ಸ್ಥಳೀಯವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಬಂಧನವಾಗಿದ್ದರೂ ಕೂಡ ಹೀಗೆ ಲಾಕ್ ಆದ ಅನೇಕರು ಮಾಹಿತಿಯನ್ನ ಬಿಟ್ಟುಕೊಡದೇ ಇದ್ದಿದ್ದು ಪೊಲೀಸರ ದೊಡ್ಡ ಮಟ್ಟದ ಕಾರ್ಯಾಚರಣೆಗೆ ತೊಡಕಾಗಿತ್ತು. ಈ ಮಧ್ಯೆಯೂ ಗಾಂಜಾದ ಬೆನ್ನು ಬಿಡದ ಖಾಕಿ ಪಡೆ, ಬೃಹತ್ ಕಾರ್ಯಾಚರಣೆಗೆ ಸದ್ದಿಲ್ಲದೇ ತಯಾರಿ ನಡೆಸಿತ್ತು. ಆ ಬಳಿಕ ಖಚಿತ ಮಾಹಿತಿ ಪಡೆದುಕೊಂಡು ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಲು ಸೆನ್ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ರಕ್ಷಿತ್, ಸಬ್ ಇನ್ಸ್ಪೆಕ್ಟರ್ಗಳಾದ ರಫೀಕ್, ನೀತು ಗುಡೆ ಹಾಗೂ ಸಿಬ್ಬಂದಿಗಳು ತುಂಬಾ ಶ್ರಮವಹಿಸಿದ್ದರು. ಚಿಕ್ಕಮಗಳೂರು ಪೊಲೀಸ್ ಇತಿಹಾಸದಲ್ಲೇ ದೊಡ್ಡಮಟ್ಟದ ಕಾರ್ಯಾಚರಣೆ ಇದಾಗಿದ್ದು, ಎಸ್ಪಿ ಅಕ್ಷಯ್ ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡವನ್ನ ಶ್ಲಾಘಿಸಿದ್ದು ನಗದು ಬಹುಮಾನವನ್ನ ನೀಡಿದ್ದಾರೆ. ಅಲ್ಲದೇ ಇಲಾಖೆಯಿಂದ ಪ್ರಶಸ್ತಿ ಕೊಡಿಸಲು ಶಿಫಾರಸ್ಸು ಮಾಡಲು ಸೂಚಿಸುತ್ತೇನೆ ಅಂತಾ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ತಿಳಿಸಿದ್ದಾರೆ.

ದಾಳಿಯಲ್ಲಿ ಲಭ್ಯವಾದ 102 ಕೆಜಿ ಒಣ ಗಾಂಜಾವನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಗಳನ್ನೂ ತಮ್ಮ ಸುಪರ್ದಿಗೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ರಾಜ್ಯದಲ್ಲಿ ಡ್ರಗ್ಸ್​ ದಂಧೆ ಕುರಿತು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಹೊತ್ತಿನಲ್ಲೇ ಮಲೆನಾಡಿನಲ್ಲಿ ಬೃಹತ್​ ಗಾಂಜಾ ಜಾಲ ಪತ್ತೆಯಾಗಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಮಾದಕ ದ್ರವ್ಯ ಜಾಲಕ್ಕೆ ಅಂತ್ಯ ಹಾಡಬೇಕಿದೆ.

ವರದಿ: ಪ್ರಶಾಂತ್, ಚಿಕ್ಕಮಗಳೂರು

ಇದನ್ನೂ ಓದಿ: ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಗಾಂಜಾ ಮಾರುತ್ತಿದ್ದ ಬಿಎಂಟಿಸಿ ಚಾಲಕ, ನಿರ್ವಾಹಕ ಅರೆಸ್ಟ್ 

ಬೀದರ್: ಸಂತಪುರ ಪೊಲೀಸರಿಂದ 592 ಕೆಜಿ ಗಾಂಜಾ ಜಪ್ತಿ, ನಾಲ್ವರ ಬಂಧನ

(Chikkamagaluru Police Raid 102 kg Marijuana found in Vegetable van three suspects detained)

Follow us on

Related Stories

Most Read Stories

Click on your DTH Provider to Add TV9 Kannada