Chikkamagaluru Tipu Cutout Row: ಚಿಕ್ಕಮಗಳೂರು ಟಿಪ್ಪು ಕಟೌಟ್ ವಿವಾದ: ಪ್ರಮುಖ ಆರೋಪಿ ಅಫ್ರಿದ್ ಬಂಧನ!

ಚಿಕ್ಕಮಗಳೂರಿನಲ್ಲಿ ಟಿಪ್ಪು ಸುಲ್ತಾನ್ ಕಟೌಟ್‌ಗೆ ಪಾಕಿಸ್ತಾನ್ ಪರ ಹಾಡು ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಅಫ್ರಿದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆ ನಿರ್ವಹಿಸುತ್ತಿದ್ದ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ವಿಡಿಯೋ ಶೇರ್ ಹಾಗೂ ಸ್ಟೇಟಸ್ ಹಾಕಿಕೊಂಡವರ ಮೇಲೆಯೂ ತನಿಖೆ ಮುಂದುವರಿದಿದೆ.

Chikkamagaluru Tipu Cutout Row: ಚಿಕ್ಕಮಗಳೂರು ಟಿಪ್ಪು ಕಟೌಟ್ ವಿವಾದ: ಪ್ರಮುಖ ಆರೋಪಿ ಅಫ್ರಿದ್ ಬಂಧನ!
ಪ್ರಮುಖ ಆರೋಪಿ ಅಫ್ರಿದ್
Edited By:

Updated on: Aug 25, 2026 | 8:53 AM

ಮುಖ್ಯಾಂಶಗಳು

  • ಚಿಕ್ಕಮಗಳೂರು ಟಿಪ್ಪು ಕಟೌಟ್ ವಿವಾದದ ಪ್ರಮುಖ ಆರೋಪಿ ಅಫ್ರಿದ್ ಬಂಧನಕ್ಕೊಳಗಾಗಿದ್ದಾನೆ.
  • ಇನ್‌ಸ್ಟಾಗ್ರಾಮ್‌ನಲ್ಲಿ ವಿವಾದಾತ್ಮಕ ವಿಡಿಯೋ ಹಂಚಿಕೊಂಡಿದ್ದ ಆರೋಪಿಗೆ ಹದಿನಾಲ್ಕು ದಿನ ಜೈಲು ಶಿಕ್ಷೆ.
  • ವಿಡಿಯೋ ಶೇರ್ ಮಾಡಿ ಸ್ಟೇಟಸ್ ಹಾಕಿಕೊಂಡವರ ವಿರುದ್ಧ ತನಿಖೆ ತೀವ್ರಗೊಂಡಿದೆ.

ಚಿಕ್ಕಮಗಳೂರು, ಆಗಸ್ಟ್ 25: ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಟಿಪ್ಪು ಸುಲ್ತಾನ್ ಕಟೌಟ್‌ಗೆ ಪಾಕಿಸ್ತಾನ್ ಪರ ಹಾಡು ಹಾಕಿ ಸಾಮಾಜಿಕ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರಿನ ಟಿಪ್ಪು ನಗರದ ನಿವಾಸಿ, 23 ವರ್ಷದ ಅಫ್ರಿದ್ ಬಂಧಿತ ಪ್ರಮುಖ ಆರೋಪಿಯಾಗಿದ್ದಾನೆ.

14 ದಿನಗಳ ನ್ಯಾಯಾಂಗ ಬಂಧನ

ಬಂಧಿತ ಆರೋಪಿ ಅಫ್ರಿದ್ ಖಾಸಗಿ ಕಾರು ಶೋರೂಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಈತ ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುತ್ತಿದ್ದು, ಅದೇ ಖಾತೆಯ ಮೂಲಕ ವಿವಾದಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಫ್ರಿದ್ ಹಾಗೂ ಮತ್ತೊಬ್ಬ ಆರೋಪಿ ರೋಷನ್‌ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಇಬ್ಬರಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ (Suo Moto) ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಕೇವಲ ವಿಡಿಯೋ ಕ್ರಿಯೇಟ್ ಮಾಡಿದವರು ಮಾತ್ರವಲ್ಲದೆ, ಈ ದೇಶದ್ರೋಹಿ ವಿಡಿಯೋವನ್ನು ಶೇರ್ ಮಾಡಿದವರು ಮತ್ತು ವಾಟ್ಸಾಪ್, ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೇಟಸ್ ಹಾಕಿಕೊಂಡವರ ಮೇಲೆಯೂ ತನಿಖೆ ನಡೆಸಲಾಗುತ್ತಿದೆ.

ಘಟನೆಯ ಹಿನ್ನೆಲೆ ಹಾಗೂ ರಾಜಕೀಯ ಕಾವು!

ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಇತ್ತೀಚೆಗೆ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಒಂದನ್ನು ನಿರ್ಮಿಸಲಾಗಿತ್ತು. ಆದರೆ, ಕೆಲವು ಕಿಡಿಗೇಡಿಗಳು ಈ ಕಟೌಟ್ ಬ್ಯಾಕ್‌ಗ್ರೌಂಡ್‌ನಲ್ಲಿ ಪಾಕಿಸ್ತಾನದ ‘ಮುಜಾಹಿದ್’ ಬೆಂಬಲಿತ ಹಾಗೂ ದೇಶವಿರೋಧಿ ಧಾಟಿಯ ಹಾಡನ್ನು ಹಾಕಿ ವಿಡಿಯೋ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ ಟಿಪ್ಪು ಸುಲ್ತಾನ್ ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಬಳಸಿ ಪೋಸ್ಟ್​: ಓರ್ವನ ಬಂಧನ

ಈ ಘಟನೆ ಹೊರಬೀಳುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲೂ ಭಾರಿ ಕಲಾಪ ಸೃಷ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣವೇ ಇಂತಹ ದೇಶದ್ರೋಹಿ ಕೃತ್ಯಗಳಿಗೆ ಕಾರಣ ಎಂದು ಬಿಜೆಪಿ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಶಾಂತಿ ಕದಡಲು ಯತ್ನಿಸುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ವಾಗ್ದಾಳಿ ನಡೆಸಿದೆ. ಸದ್ಯ ಪೊಲೀಸರು ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ವಹಿಸಿದ್ದು, ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us