Chikkamaluru: ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನ ಈ ಶಾಲೆಯಲ್ಲಿ ರಜೆ ಮಾಡಿದರೆ 1000 ರೂ. ದಂಡ

| Updated By: Ganapathi Sharma

Updated on: Jan 20, 2024 | 3:40 PM

ಶಾಲಾ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆಡಳಿತ ಮಂಡಳಿಯ ವಿರುದ್ಧ ಭಜರಂಗದಳ, ವಿಹೆಚ್​​ಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಯ ಎದುರು ಜಮಾಯಿಸಿದ್ದಾರೆ. ಇದರಿಂದ ಸ್ಥಳದಲ್ಲಿ ತುಸು ಗೊಂದಲದ ಪರಿಸ್ಥಿತಿ ಉಂಟಾಗಿದೆ.

Chikkamaluru: ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನ ಈ ಶಾಲೆಯಲ್ಲಿ ರಜೆ ಮಾಡಿದರೆ 1000 ರೂ. ದಂಡ
ಚಿಕ್ಕಮಗಳೂರು ನಗರದ ಸೇಂಟ್​​​ ಜೋಸೆಫ್ ಶಾಲೆಯ ಆವರಣದಲ್ಲಿ ಜಮಾಯಿಸಿರುವ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು
Follow us on

ಚಿಕ್ಕಮಗಳೂರು, ಜನವರಿ 20: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾನ (Ram Lalla) ಪ್ರಾಣ ಪ್ರತಿಷ್ಠೆ ನಡೆಯುವ ಜನವರಿ 22ರಂದು ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಿಸಿದೆ. ರಾಜ್ಯ ಸರ್ಕಾರ ಕೂಡ ರಜೆ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಆದರೆ, ಈ ಕುರಿತು ರಾಜ್ಯ ಸರ್ಕಾರ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಆದರೆ, ಇತ್ತ ಚಿಕ್ಕಮಗಳೂರಿನ (Chikkamagaluru) ಶಾಲೆಯೊಂದರಲ್ಲಿ ರಜೆ ನೀಡುವುದು ಬಿಡಿ, ರಜೆ ಮಾಡಿದರೆ ಅಂಥವರಿಗೆ 1,000 ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ರಾಮಮಂದಿರ ಕಾರ್ಯಕ್ರಮದ ದಿನ ಶಾಲೆಗೆ ರಜೆ ಹಾಕಿದರೆ ದಂಡ ವಿಧಿಸಲಾಗುವುದು. ಸೋಮವಾರ ಶಾಲೆಗೆ ರಜೆ ಮಾಡಿದರೆ 1000 ರೂ. ದಂಡ ತೆರಬೇಕಾಗುತ್ತದೆ ಎಂದು ಚಿಕ್ಕಮಗಳೂರು ನಗರದ ಸೇಂಟ್​​​ ಜೋಸೆಫ್ ಶಾಲಾ ಮಂಡಳಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ. ಸೇಂಟ್​​​ ಜೋಸೆಫ್ ಶಾಲಾ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆಡಳಿತ ಮಂಡಳಿಯ ವಿರುದ್ಧ ಭಜರಂಗದಳ, ವಿಹೆಚ್​​ಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಯ ಎದುರು ಜಮಾಯಿಸಿದ್ದಾರೆ. ಇದರಿಂದ ಸ್ಥಳದಲ್ಲಿ ತುಸು ಗೊಂದಲದ ಪರಿಸ್ಥಿತಿ ಉಂಟಾಗಿದೆ.

ದೇಶವೇ ಸಂಭ್ರಮಪಡುವಂಥ ದಿನ ನಮ್ಮ ಪಾಲಿಗೆ ಬಂದಿದೆ. ಇಂಥ ಮಹತ್ವದ ಘಳಿಗೆಯಲ್ಲಿ ಶಾಲೆಗೆ ರಜೆ ಕೊಡದೇ ಇರುವುದು ಹಾಗಿರಲಿ. ಸ್ವ ಇಚ್ಛೆಯಿಂದ ರಜೆ ಮಾಡಿ ರಾಮ ಮಂದಿರ ಉದ್ಘಾಟನೆ ಸಮಾರಂಭ ವೀಕ್ಷಿಸಿ ಸಂಭ್ರಮಿಸಲು ಉತ್ಸುಕರಾಗಿರುವ ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಹೊರಟಿರುವುದು ಸರಿಯಲ್ಲ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಆ ದಿನ ಗುಜರಾತ್, ಮಹಾರಷ್ಟ್ರ ಸೇರಿದಂತೆ ಹಲವು ರಾಜ್ಯಗಳು ರಜೆ ಘೋಷಣೆ ಮಾಡಿವೆ. ಕೇಂದ್ರ ಸರ್ಕಾರ ಕೂಡ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ನೀಡಿದೆ. ರಾಮ ಮಂದಿರ ಉದ್ಘಾಟನೆಯನ್ನು ಇಡೀ ದೇಶದ ಜನ ಉತ್ಸವದ ರೀತಿ ಆಚರಿಸುವಂತೆ ಕರೆ ನಿಡಲಾಗಿದೆ. ಕರ್ನಾಟಕದಲ್ಲಿಯೂ ರಜೆ ನೀಡಬೇಕೆಂಬ ಆಗ್ರಹ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಹಾಗೂ ಹಿಂದೂ ಪರ ಸಂಘಟನೆಗಳಿಂದ ವ್ಯಕ್ತವಾಗಿದೆ. ಆದರೆ, ಈ ವಿಚಾರವಾಗಿ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಇದನ್ನೂ ಓದಿ: ಕರ್ನಾಟಕದಿಂದ ಅಯೋಧ್ಯೆಗೆ ತೆರಳಲಿದ್ದಾರೆ 35 ಸಾವಿರಕ್ಕೂ ರಾಮ ಭಕ್ತರು: ಬಿವೈ ವಿಜಯೇಂದ್ರ

ದಂಡ ಹಾಕುವುದಾಗಿ ಹೇಳಿಲ್ಲ: ಪ್ರಾಂಶುಪಾಲರಿಂದ ಸ್ಪಷ್ಟನೆ

ರಜೆ ಮಾಡಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆಯೇ ಸೆಂಟ್ ಜೋಸೆಫ್ ಶಾಲೆಯ ಪ್ರಿನ್ಸಿಪಾಲ್ ಜೀನ್ ಸ್ಪಷ್ಟನೆ ನೀಡಿದ್ದಾರೆ. ಪ್ರತಿ ನಿತ್ಯ ವಿದ್ಯಾರ್ಥಿಗಳಿಗೆ ಹೇಳುವಂತೆ ಹೇಳಿದ್ದೇನೆಯೇ ಹೊರತು ಅಯೋಧ್ಯೆ ರಾಮ ಮಂದಿರ ಕಾರ್ಯಕ್ರಮದ ದೃಷ್ಟಿಯಲ್ಲಿ ಹೇಳಿಲ್ಲ. ವಿದ್ಯಾರ್ಥಿಗಳು ಶಾಲೆಗೆ ರಜೆ ಮಾಡದಂತೆ ಹೇಳಿದ್ದೇನೆ. ಯಾವ ವಿದ್ಯಾರ್ಥಿಗಳಿಗೂ ದಂಡ ಹಾಕುವುದಾಗಿ ನಾನು ಆದೇಶ ಮಾಡಿಲ್ಲ. ಸಾಲು ಸಾಲು ರಜೆ ಇದ್ದಾಗ ನಾನು ಪ್ರತಿ ಬಾರಿಯೂ ವಿದ್ಯಾರ್ಥಿಗಳಿಗೆ ರಜೆ ಮಾಡದಂತೆ ಹೇಳುತ್ತೇನೆ. ಎಲ್ಲ ವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ನೋಡಲಾಗುತ್ತಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಶಾಲೆಗೆ ಡಿಡಿಪಿಐ ಭೇಟಿ

ಸೆಂಟ್ ಜೋಸೆಫ್ ಶಾಲೆಗೆ ಡಿಡಿಪಿಐ ಪ್ರಕಾಶ್ ಭೇಟಿ ನೀಡಿದ್ದು, ಶಾಲಾ ಆಡಳಿತ ಮಂಡಳಿಯ ಜೊತೆ ಸಭೆ ನಡೆಸಿದ್ದಾರೆ. ಪ್ರತಿ ದಿನ ಹೇಳುವಂತೆ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಶಾಲೆಗೆ ಮಕ್ಕಳು ಬರಲಿ ಎಂಬ ಉದ್ದೇಶದಿಂದ ಹೇಳಿದ್ದಾರೆ. ದಂಡ ಹಾಕುವುದರ ಬಗ್ಗೆ ದೂರು ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ‌ ಎಂದು ಸಭೆಯ ಬಳಿಕ ಡಿಡಿಪಿಐ ಪ್ರಕಾಶ್ ತಿಳಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Published On - 2:25 pm, Sat, 20 January 24