ಕರ್ನಾಟಕದಿಂದ ಅಯೋಧ್ಯೆಗೆ ತೆರಳಲಿದ್ದಾರೆ 35 ಸಾವಿರಕ್ಕೂ ರಾಮ ಭಕ್ತರು: ಬಿವೈ ವಿಜಯೇಂದ್ರ
ರಾಮ ಭಕ್ತರ ಉತ್ಸಾಹಕ್ಕೆ ಅಡ್ಡಿಯಾಗದಂತೆ ರಾಜ್ಯ ಸರ್ಕಾರ ಕೂಡಾ ಸಹಕಾರ ಕೊಡಬೇಕು ಎಂದು ಆಗ್ರಹಿಸಿದ ವಿಜಯೇಂದ್ರ, ಕೋಲಾರ ಫ್ಲೆಕ್ಸ್ ಹರಿದ ಪ್ರಕರಣ, ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧನದಂತಹ ಪ್ರಕರಣಗಳು ಕೆಲವು ದೇಶದ್ರೋಹಿ ಚಟುವಟಿಕೆಗಳಿಗೆ ಅವಕಾಶ ಆಗಬಹುದು ಎಂದರು.
ಬೆಂಗಳೂರು, ಜನವರಿ 20: ಕರ್ನಾಟಕದಿಂದ ಅಯೋಧ್ಯೆಗೆ (Ayodhya) ಜನವರಿ 22ರ ಬಳಿಕ 60 ದಿನಗಳ ಅವಧಿಯಲ್ಲಿ 35 ಸಾವಿರಕ್ಕೂ ಹೆಚ್ಚು ರಾಮ ಭಕ್ತರು ಪ್ರಯಾಣಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನವರಿ 31ರಿಂದ ಮಾರ್ಚ್ 25ರ ವರೆಗೆ ರಾಮ ಭಕ್ತರು ಅಯೋಧ್ಯೆಗೆ ಪ್ರಯಾಣ ಮಾಡಲಿದ್ದಾರೆ. ಪ್ರಯಾಣದ ಖರ್ಚು ವೆಚ್ಚವನ್ನು ಅವರೇ ಭರಿಸಲಿದ್ದಾರೆ. ಪ್ರತಿ ರೈಲಿನಲ್ಲೂ 1500 ಜನ ಪ್ರಯಾಣ ಮಾಡಲಿದ್ದು, ಒಟ್ಟು 25 ರೈಲುಗಳ ಮೂಲಕ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿಸಿದರು.
ರಾಮ ಭಕ್ತರ ಉತ್ಸಾಹಕ್ಕೆ ಅಡ್ಡಿಯಾಗದಂತೆ ರಾಜ್ಯ ಸರ್ಕಾರ ಕೂಡಾ ಸಹಕಾರ ಕೊಡಬೇಕು ಎಂದು ಆಗ್ರಹಿಸಿದ ಅವರು, ಕೋಲಾರ ಫ್ಲೆಕ್ಸ್ ಹರಿದ ಪ್ರಕರಣ, ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧನದಂತಹ ಪ್ರಕರಣಗಳು ಕೆಲವು ದೇಶದ್ರೋಹಿ ಚಟುವಟಿಕೆಗಳಿಗೆ ಅವಕಾಶ ಆಗಬಹುದು. ಅಶಾಂತಿ ನಿರ್ಮಾಣವಾಗಲು ಕಾರಣವಾಗಬಹುದು. ಯಾವುದೇ ಸಮಸ್ಯೆ, ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ರಾಜ್ಯದ 60 ಕ್ಕೂ ಹೆಚ್ಚು ಪಿವಿಆರ್ಗಳಲ್ಲಿ ಪ್ರಾಣ ಪ್ರತಿಷ್ಠೆ ನೇರ ಪ್ರಸಾರ ಇರಲಿದೆ. ಮಂತ್ರಾಕ್ಷತೆ ವಿತರಣೆಗೆ ಜನರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ ಎಂದು ವಿಜಯೇಂದ್ರ ತಿಳಿಸಿದರು.
ಗೋದ್ರಾ ಮಾದರಿ ಘಟನೆ ಸಂಭವಿಸಬಹುದು ಎಂದು ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಹರಿಪ್ರಸಾದ್ ಸಾಮಾನ್ಯ ವ್ಯಕ್ತಿ ಅಲ್ಲ. ಅವರು ಉದ್ದೇಶಪೂರ್ವಕವಾಗಿ ಹೇಳಿದ್ದಾರೋ, ದುರುದ್ದೇಶಪೂರ್ವಕವಾಗಿ ಹೇಳಿದ್ದಾರೋ ಅಂತಾ ರಾಜ್ಯ ಸರ್ಕಾರವೇ ಪರಿಶೀಲಿಸಬೇಕು ಎಂದರು.
ರಜೆ ಘೋಷಣೆ ಮಾಡಲಿ: ವಿಜಯೇಂದ್ರ ಆಗ್ರಹ
ರಾಮ ಮಂದಿರದಲ್ಲಿನ ಪ್ರಾಣ ಪ್ರತಿಷ್ಠೆ ಸಮಾರಂಭದ ದಿನ ರಾಜ್ಯ ಸರ್ಕಾರ ಸರ್ಕಾರಿ ರಜೆ ಘೋಷಣೆ ಮಾಡಿ ರಾಮ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಡ ಅರ್ಧ ದಿನ ರಜೆ ಘೋಷಣೆ ಮಾಡಿದೆ. ಹಾಗಾಗಿ ರಾಜ್ಯದಲ್ಲೂ ರಜೆ ಘೋಷಣೆ ಮಾಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಇದನ್ನೂ ಓದಿ: ವೈರಲ್ ಆಗುತ್ತಿರುವ ರಾಮ ಲಲ್ಲಾ ಮೂರ್ತಿ ನಿಜವಾದುದಲ್ಲ: ಅಯೋಧ್ಯೆಯ ಅರ್ಚಕ ಸತ್ಯೇಂದ್ರ ದಾಸ್ ಸ್ಪಷ್ಟೀಕರಣ
ರಾಜ್ಯದಲ್ಲಿ ರಾಮಭಕ್ತರಿಗೆ ಸಮಸ್ಯೆಯಾಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಏನಾದರೂ ಕಾನೂನು ಸುವ್ಯವಸ್ಥೆ ಸಮಸ್ಯೆಯಾದರೆ ಕಾಂಗ್ರೆಸ್ ಹೊಣೆಯಾಗುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು
ರಾಜ್ಯ ಸರ್ಕಾರವನ್ನು ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ ನಿಯಂತ್ರಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ ವಿಚಾರವಾಗಿ ತಿರುಗೇಟು ನೀಡಿದ ವಿಜಯೇಂದ್ರ, ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಅವರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡಿದೆಯೋ, ರಾಜ್ಯ ಸರ್ಕಾರ ಟಾರ್ಗೇಟ್ ಮಾಡಿದೆಯೋ ಎಂಬುದು ಮುಂದಿನ ದಿನಗಳಲ್ಲಿ ಅದು ಗೊತ್ತಾಗಲಿದೆ ಎಂದರು.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ