ಚಿಕ್ಕಮಗಳೂರು: ಟ್ರ್ಯಾಕ್ಟರ್‌ ಪಲ್ಟಿ, 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ

ಕೊಪ್ಪ ತಾಲೂಕಿನ ತೀರ್ಥಕೆರೆ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಹತ್ತು ಜನಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಅಸ್ಸಾಂ ಸೇರಿದಂತೆ ಸ್ಥಳೀಯ ಕಾರ್ಮಿಕರು ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಜಯಪುರ ಮತ್ತು ಕೊಪ್ಪ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು: ಟ್ರ್ಯಾಕ್ಟರ್‌ ಪಲ್ಟಿ, 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Feb 09, 2025 | 9:44 PM

ಚಿಕ್ಕಮಗಳೂರು, ಫೆಬ್ರವರಿ 09: ಟ್ರ್ಯಾಕ್ಟರ್‌ ಪಲ್ಟಿಯಾಗಿ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಕೊಪ್ಪ (Koppa) ತಾಲೂಕಿನ ತೀರ್ಥಕೆರೆ ಬಳಿ ನಡೆದಿದೆ. ಅಸ್ಸಾಂ ಸೇರಿದಂತೆ ಸ್ಥಳೀಯ 40 ಕಾರ್ಮಿಕರು ತೀರ್ಥಕೆರೆ ಸಮೀಪದ ಎಸ್ಟೇಟ್‌ನಲ್ಲಿ ಕೆಲಸ ಮುಗಿಸಿಕೊಂಡು, ಜಯಪುರ ಪಟ್ಟಣದಲ್ಲಿ ದಿನಸಿ ಖರೀದಿಸಿಕೊಂಡು ಟ್ರ್ಯಾಕ್ಟರ್​ನಲ್ಲಿ ವಾಪಸ್​ ತೀರ್ಥಕೆರೆ ಗ್ರಾಮಕ್ಕೆ ತೆರಳುತ್ತಿದ್ದರು. ದಾರಿ ಮಧ್ಯೆ ತೀರ್ಥಕೆರೆ ಬಳಿಯೇ ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಟರ್​ 20 ಅಡಿ ಆಳಕ್ಕೆ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಜಯಪುರ ಮತ್ತು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಎರಡು ಕಾರುಗಳ ಮಧ್ಯೆ ಅಪಘಾತ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಲ್ ಕಟ್ಟೆ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಏಕಾಏಕಿ ಬಲಗಡೆಯಿಂದ ಎಡಗಡೆಗೆ ನುಗ್ಗಿ ಬಂದ ಕಾರು ಎದುರುಗಡೆ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದೆ. ಅಪಘಾತದ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೈಕ್ ಮತ್ತು ಕಾರಿನ ನಡುವೆ ಅಪಘಾತ

ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಶಾನಭೋಗನಹಳ್ಳಿ ರಸ್ತೆಯಲ್ಲಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಕಾಂಕ್ರೀಟ್ ಮಿಕ್ಸರ್ ಲಾರಿ ಡಿಕ್ಕಿ, ದರ್ಗಾಕ್ಕೆ ಹೊರಟಿದ್ದ ದಂಪತಿ ದುರಂತ ಸಾವು

ತುಂಗಾ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಗಾಂಧಿ ಮೈದಾನದ ಬಳಿ ತುಂಗಾ ನದಿಯಲ್ಲಿ ಮುಳುಗಿ 9ನೇ ತರಗತಿ ವಿದ್ಯಾರ್ಥಿ ಆಕಾಶ್ (15) ಮೃತಪಟ್ಟಿದ್ದಾರೆ. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಆಕಾಶ್​ ಸ್ನೇಹಿತರ ಜೊತೆ ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈಜು ಬಾರದಿದ್ದರೂ ನದಿಗೆ ಇಳಿದಿದ್ದ ಆಕಾಶ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ