
ಚಿಕ್ಕಮಗಳೂರು, ಜೂನ್ 20: ಸೈಬರ್ ವಂಚನೆ (Cyber Crime) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ವುತ್ತಲೇ ಇವೆ. ಹೊಸ ಹೊಸ ರೀತಿಯಲ್ಲಿ ಸೈಬರ್ ವಂಚಕರು ತಮ್ಮ ವಂಚನೆಯ ಜಾಲವನ್ನು ಹೆಣೆಯುತ್ತಿದ್ದಾರೆ. ಶಾಲೆಗೆ ರಜೆ ಇದ್ದಿದ್ದರಿಂದ ಮಕ್ಕಳನ್ನು ಕರೆದುಕೊಂಡು ಕುಟುಂಬದವರ ಜೊತೆ ಮೈಸೂರು (Mysore) ಪ್ರವಾಸಕ್ಕೆ ಹೋಗಿದ್ದ ಚಿಕ್ಕಮಗಳೂರಿನ (Chikamgaluru) ವ್ಯಕ್ತಿ ಸೈಬರ್ ವಂಚಕರ ಜಾಲದಲ್ಲಿ ಬಿದ್ದು 25 ಸಾವಿರ ಹಣ ಕಳೆದುಕೊಂಡಿದ್ದಾರೆ.
ಚಿಕ್ಕಮಗಳೂರಿನ ಮಹೇಶ್ ಎಂಬುವರು ಕುಟುಂಬದವರ ಜೊತೆ ಮೈಸೂರಿಗೆ ಹೋಗಿದ್ದರು. ಮೈಸೂರಿನಲ್ಲಿನ GRS ಫ್ಯಾಂಟಸಿ ಪಾರ್ಕ್ಗೆ ಹೋಗಲು ಮಹೇಶ್ ಅವರು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಲು ಸರ್ಚ್ ಮಾಡಿದ್ದಾರೆ. ಆನ್ಲೈನ್ನಲ್ಲಿ ತೋರಿಸಿದ GRS ಫ್ಯಾಂಟಸಿ ಪಾರ್ಕ್ ಎಂಬ ಲಿಂಕನ್ನು ಮಹೇಶ್ ಕ್ಲಿಕ್ ಮಾಡಿದ್ದಾರೆ. ಅದರಲ್ಲಿ ಬಂದ ಎಲ್ಲ ಆಟಗಳನ್ನು ಕಂಪ್ಲೀಟ್ ಮಾಡಿ, ನಂತರ ಹಣ ಪೇ ಮಾಡಲು ಕಂಪ್ಲೀಟ್ ಬುಕ್ಕಿಂಗ್ಗೆ ಹೋಗಿ ಹೆಸರು, ಇಮೇಲ್ ಐಡಿ, ಮೊಬೈಲ್ ನಂಬರ್, ಪಿನ್ಕೋಡ್ ನಂಬರ್ ಅನ್ನು ಹಾಕಿ ನಂತರ ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಲು ಹೋದಾಗ ರಾಂಗ್ UPI ಪಿನ್ ಎಂದು ತೋರಿಸಿದೆ. ಸ್ವಲ್ಪ ಸಮಯದ ನಂತರ ಮಹೇಶ್ ಅವರ ಖಾತೆಯಲ್ಲಿದ್ದ 90 ಸಾವಿರ ಹಣ ಡೆಬಿಟ್ ಆಗಿರುವ ಸಂದೇಶ ಬಂದಿದೆ. ಐದು ನಿಮಿಷದ ನಂತರ ಮತ್ತೆ 5000 ಹಣ ಡೆಬಿಟ್ ಆಗಿರುಚ ಮೆಸೇಜ್ ಬಂದಿದೆ.
ಗಾಭರಿಗೊಂಡ ಮಹೇಶ್ ಅವರು ಬ್ಯಾಲೆನ್ಸ್ ಚೆಕ್ ಮಾಡಿದಾಗ 95,000 ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಮಹೇಶ್ ಸೈಬರ್ ಕ್ರೈಮ್‌ಗಳ ಸಹಾಯಕ್ಕಾಗಿ ರಾಷ್ಟ್ರೀಯ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು 95 ಸಾವಿರದಲ್ಲಿ 70000 ಹಣವನ್ನು ಫ್ರೀಜ್ ಮಾಡಿದ್ದಾರೆ.
ಇದನ್ನೂ ಓದಿ: ಮಹಿಳೆಯ ಪ್ರಾಣ ತೆಗೆದ ಮೊಬೈಲ್: ಪತ್ನಿಯನ್ನೇ ಕೊಂದ ಪತಿ, ಮಕ್ಕಳು ಅನಾಥ
ಒಟ್ಟಿನಲ್ಲಿ ಟೆಕ್ನಾಲಜಿ ಬೆಳೆದಂತೆ ಮೋಸ ಹೋಗುವವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಈ ರೀತಿ ಸೈಬರ್ ವಂಚನೆಗೆ ಒಳಗಾದವರು ಕೂಡಲೇ 1930 ಗೆ ಕಾಲ್ ಮಾಡಿ, ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಳ್ಳುತ್ತಿದ್ದರೂ ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆಯಾಗದಿರುವುದು ವಿಪರ್ಯಾಸವೆ ಸರಿ.
Published On - 9:22 pm, Fri, 20 June 25