ಪ್ರವಾಸಿಗರೇ ಗಮನಿಸಿ: ದತ್ತ ಜಯಂತಿ ಹಿನ್ನಲೆ ಚಿಕ್ಕಮಗಳೂರಿನ ಈ ಸ್ಥಳಗಳಿಗೆ ನಿರ್ಬಂಧ
ರಾಜ್ಯದಲ್ಲಿ ಚಳಿಯ ವಾತಾವರಣ ಮನೆ ಮಾಡಿರುವ ಹಿನ್ನಲೆ ಚಿಕ್ಕಮಗಳೂರು ಕಡೆ ಪ್ರವಾಸಕ್ಕೆ ಹೋಗೋಣ, ವೆದರ್ ಚೆನ್ನಾಗಿರುತ್ತೆ ಎಂದು ನೀವೇನಾದ್ರೂ ಪ್ಲ್ಯಾನ್ ಮಾಡಿಕೊಂಡಿದ್ರೆ ಅದನ್ನ ಕೂಡಲೇ ಕೈಬಿಡಿ. ದತ್ತ ಜಯಂತಿ ಆಚರಣೆ ಹಿನ್ನಲೆ ಅಗತ್ಯ ಮುಂಜಾಗೃತಾ ಕ್ರಮಕ್ಕೆ ಮುಂದಾಗಿರುವ ಚಿಕ್ಕಮಗಳೂರು ಜಿಲ್ಲಾಡಳಿತ, ಸಾಲು ಸಾಲು ನಿರ್ಬಂಧಗಳನ್ನ ವಿಧಿಸಿ ಆದೇಶಿಸಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ಚಿಕ್ಕಮಗಳೂರು, ಡಿಸೆಂಬರ್ 01: ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಜಯಂತಿ ಹಿನ್ನಲೆ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮವಾಗಿ ಸಾಲು ಸಾಲು ನಿರ್ಬಂಧಗಳನ್ನ ವಿಧಿಸಲಾಗಿದೆ. ಹಿಂದೂ ಸಂಘಟನೆಗಳಿಂದ ನಾಳೆಯಿಂದ (ಡಿ.2)ಮೂರು ದಿನಗಳ ಕಾಲ ದತ್ತ ಜಯಂತಿ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಂದಿಷ್ಟು ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿದೆ.
ಪ್ರವಾಸಿಗರಿಗೆ ನಿರ್ಬಂಧ, ವಾರದ ಸಂತೆಗೆ ನಿಷೇಧ
ಡಿ.3ರಂದು ಬೃಹತ್ ಶೋಭಾಯಾತ್ರೆ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ನಡೆಯಲಿರುವ ವಾರದ ಸಂತೆಗೆ ನಿಷೇಧ ವಿಧಿಸಲಾಗಿದೆ. ಡಿ. 4ರಂದು ದತ್ತ ಪಾದುಕೆ ದರ್ಶನ ಹಿನ್ನೆಲೆ ಚಿಕ್ಕಮಗಳೂರು ನಗರ ಸೇರಿ ಜಿಲ್ಲೆಯ ಪ್ರಮುಖ ಪಟ್ಟಣಗಳು ಬಂದ್ ಆಗಲಿದ್ದು, ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಇಂದಿನಿಂದ ಡಿ.5ರ ಬೆಳಗ್ಗೆ 10 ಗಂಟೆಯವರೆಗೂ ಚಂದ್ರದ್ರೋಣ ಪರ್ವತದ ಸಾಲಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಮತ್ತೆ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ; ನಿಷೇಧಿತ ಸ್ಥಳದಲ್ಲಿ ಮಾಂಸಾಹಾರ ಸೇವನೆ ವಿಡಿಯೋ ವೈರಲ್
ಬಿಗಿ ಬಂದೋಬಸ್ತ್
ದತ್ತ ಜಯಂತಿ ಕಾರ್ಯಕ್ರಮದ ಹಿನ್ನಲೆ ಬಂದೋಬಸ್ತ್ ಕಾರ್ಯಕ್ಕೆ ಪೊಲೀಸರ ಜೊತೆಗೆ 15ಕ್ಕೂ ಹೆಚ್ಚು ಡ್ರೋನ್ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುತ್ತಿದೆ. ವಿವಿಧ ಸ್ಥಳಗಳಲ್ಲಿ ಒಟ್ಟು 28 ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದ್ದು, ಹಗಲು, ರಾತ್ರಿ ಕಣ್ಗಾವಲು ಇರಲಿದೆ. ದೇಗುಲದ ಒಳಗೆ ಫೋಟೋಗಳನ್ನು ಕ್ಲಿಕ್ ಮಾಡುವುದು ಮತ್ತು ವೀಡಿಯೊಗಳನ್ನು ಚಿತ್ರೀಕರಣ ನಿಷೇಧಿಸಲಾಗಿದೆ. ಭಕ್ತಾದಿಗಳು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಮತ್ತು ದಾರಿಯಲ್ಲಿ ಕಸ ಹಾಕದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ದತ್ತ ಜಯಂತಿ ದಿನ ಅಂದರೆ ಡಿ.4ರಂದು ಬೆಳಗ್ಗೆ 6 ಗಂಟೆಯಿಂದ ಭಕ್ತರನ್ನು ಪೀಠಕ್ಕೆ ಬಿಡಲಾಗುವುದು. ಮಧ್ಯಾಹ್ನ 2 ಗಂಟೆ ನಂತರ ಪೀಠಕ್ಕೆ ತೆರಳಲು ಅವಕಾಶ ಇರುವುದಿಲ್ಲ. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಉತ್ಸವಗಳನ್ನು ನಡೆಸಲಾಗುವುದು ಎಂದು ಈಗಾಗಲೇ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




