ಮದುವೆ ಮಂಟಪಕ್ಕೇ ನುಗ್ಗಿ ಮಾಜಿ ಪ್ರಿಯಕರನಿಗೆ ಶಾಕ್ಕೊಟ್ಟ ಯುವತಿ: ಫುಲ್ ಹೈಡ್ರಾಮಾ
10 ವರ್ಷ ಪ್ರೀತಿಸಿ ಮದುವೆಯಾಗುವುದಾಗಿ ಮೋಸ ಮಾಡಿದ ಯುವಕನ ಮದುವೆ ಮಂಟಪಕ್ಕೇ ನುಗ್ಗಿ ಯುವತಿಯೋರ್ವಳು ರಂಪಾಟ ನಡೆಸಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಇದೇ ಮಂಟಪದಲ್ಲಿ ತನ್ನನ್ನು ಮದುವೆಯಾಗಬೇಕೆಂದು ಪಟ್ಟು ಹಿಡಿದು ಧರಣಿ ಕುಳಿತ ಯುವತಿ, ತನ್ನ ಮೇಲೆ ಹಲ್ಲೆ ನಡೆದಿದೆ ಎಂದೂ ಆರೋಪಿಸಿದ್ದಾಳೆ.

ಚಿಕ್ಕಮಗಳೂರು, ಡಿಸೆಂಬರ್ 12: ಲವರ್ಗೆ ಕೈಕೊಟ್ಟು ಬೇರೆ ಯುವತಿ ಜೊತೆಗೆ ಯುವಕ ಮದುವೆಯಾದ ಹಿನ್ನಲೆ ಮೋಸ ಹೋದ ಯುವತಿ ಮದುವೆ ಮಂಟಪದಲ್ಲಿ ರಂಪಾಟ ನಡೆಸಿರುವ ಘಟನೆ ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಕಳೆದ 10 ವರ್ಷದಿಂದ ಶರತ್ ಎಂಬಾತನನ್ನು ಯುವತಿ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ ಆತ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.
ಮದುವೆ ಮಂಟಪದಲ್ಲೇ ತನ್ನ ವಿವಾಹವಾಗು ಎಂದು ಹಾಸನ ಜಿಲ್ಲೆ ಬೇಲೂರು ಮೂಲದ ಯುವತಿ ಪಟ್ಟು ಹಿಡಿದ್ದಾಳೆ. ಇನ್ನು, ಶರತ್ ಮೋಸ ಮಾಡಿರುವ ವಿಚಾರವಾಗಿ 8 ತಿಂಗಳ ಹಿಂದೆ ಆಲ್ದೂರು ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು. ನಿನ್ನೆ ಶರತ್ ಮನೆಯ ಮುಂದೆ ಏಕಾಂಗಿ ಹೋರಾಟ ಕೂಡ ಮಾಡಿದ್ದಳು. ಅದರ ಮುಂದುವರಿದ ಭಾಗವಾಗಿ ಇಂದು ಮದುವೆ ಮಂಟಪಕ್ಕೆ ಬಂದು ನೊಂದ ಯುವತಿ ರಂಪಾಟ ನಡೆಸಿದ್ದಾಳೆ. ಮದುವೆ ಮಂಟಪದೊಳಗೆ ಧರಣಿ ಕುಳಿತಿದ್ದಾಳೆ.
ಇದನ್ನೂ ಓದಿ: ಇನ್ನೇನು ತಾಳಿ ಕಟ್ಟುವ ವೇಳೆಯಲ್ಲೇ ಮಂಟಪ್ಪಕ್ಕೆ ಪ್ರೇಯಸಿ ಎಂಟ್ರಿ; ಕಕ್ಕಾಬಿಕ್ಕಿಯಾದ ಪ್ರಿಯಕರ
ಹಲ್ಲೆ ಆರೋಪ
ಆದರೆ, ಚಿಕ್ಕಮಗಳೂರು ನಗರದ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಿಗದಿಯಾದ ಮುಹೂರ್ತದಲ್ಲಿ ವಿವಾಹ ಕಾರ್ಯ ಮುಗಿದಿದೆ. ಆದರೂ ಯುವತಿ ಇದೇ ಮಂಟಪದಲ್ಲಿ ತನ್ನನ್ನು ಆತ ಮದುವೆಯಾಗಬೇಕು ಎಂದು ಪಟ್ಟು ಹಿಡಿದ್ದಾಳೆ. ಜೊತೆಗೆ ನನ್ನ ಮೇಲೆ ಹಲ್ಲೆ ಮಾಡಿದ್ರು ಎಂದು ಆಕ್ರೋಶ ಹೊರಹಾಕಿದ್ದಾಳೆ. ನಾನು ಬರುವ ಮೊದಲೇ ಮದುವೆಯಾಗಿದೆ. ನನ್ನ ಬಳಿ ಹಣ ಕೊಡ್ತೀವಿ ಇಲ್ಲಿಂದ ಹೋಗು ಅಂದ್ರು. ನನಗೆ ಯಾವುದೇ ಹಣ ಬೇಡ, ಆತ ನನ್ನ ಮದುವೆ ಆಗಬೇಕಷ್ಟೇ ಎಂದು ಯುವತಿ ತಿಳಿಸಿದ್ದಾಳೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:42 am, Sun, 14 December 25
