AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಾದ್ರೂ ಮಾಡಿ ನನ್ನ ಮಗನ ಮೃತದೇಹ ಹುಡುಕಿಕೊಡಿ -ಟಿವಿ9 ಕ್ಯಾಮರಾ ಮುಂದೆ ಕಣ್ಣೀರಿಟ್ಟ ತಂದೆ

ಶ್ರೀಧರ್, ಭದ್ರಾ ನದಿ ತೀರದಲ್ಲೇ ಅನ್ನ-ನೀರು ಬಿಟ್ಟು ಮಗನಿಗಾಗಿ ಕಾಯುತ್ತಿದ್ದಾರೆ. ಕಳೆದ ಭಾನುವಾರ ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದ ಸಮೀಪವಿರುವ ಭದ್ರಾ ನದಿಯಲ್ಲಿ ಬೆಂಗಳೂರು ಮೂಲದ ವೈದ್ಯ ರುದ್ರೇಶ್ (36) ಕೊಚ್ಚಿ ಹೋಗಿದ್ದರು.

ಹೇಗಾದ್ರೂ ಮಾಡಿ ನನ್ನ ಮಗನ ಮೃತದೇಹ ಹುಡುಕಿಕೊಡಿ -ಟಿವಿ9 ಕ್ಯಾಮರಾ ಮುಂದೆ ಕಣ್ಣೀರಿಟ್ಟ ತಂದೆ
ಕಾಲುಜಾರಿ ಭದ್ರಾ ನದಿಯಲ್ಲಿ ಕೊಚ್ಚಿ ಹೋದ ವೈದ್ಯನಿಗಾಗಿ ಹುಡುಕಾಟ
TV9 Web
| Updated By: ಆಯೇಷಾ ಬಾನು|

Updated on: Aug 04, 2021 | 12:14 PM

Share

ಚಿಕ್ಕಮಗಳೂರು: ಹೇಗಾದ್ರೂ ಮಾಡಿ ನನ್ನ ಮಗನ ಮೃತದೇಹ ಹುಡುಕಿಕೊಡಿ ಎಂದು ಟಿವಿ9 ಮೂಲಕ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ನೀರುಪಾಲಾದ ವೈದ್ಯ ರುದ್ರೇಶ್ ತಂದೆ ಶ್ರೀಧರ್ ಮನವಿ ಮಾಡಿಕೊಂಡಿದ್ದಾರೆ.

ಶ್ರೀಧರ್, ಭದ್ರಾ ನದಿ ತೀರದಲ್ಲೇ ಅನ್ನ-ನೀರು ಬಿಟ್ಟು ಮಗನಿಗಾಗಿ ಕಾಯುತ್ತಿದ್ದಾರೆ. ಕಳೆದ ಭಾನುವಾರ ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದ ಸಮೀಪವಿರುವ ಭದ್ರಾ ನದಿಯಲ್ಲಿ ಬೆಂಗಳೂರು ಮೂಲದ ವೈದ್ಯ ರುದ್ರೇಶ್ (36) ಕೊಚ್ಚಿ ಹೋಗಿದ್ದರು. ಸದ್ಯ ಮೃತದೇಹಕ್ಕಾಗಿ SDRF, ಅಗ್ನಿಶಾಮಕ ದಳ, ಮುಳುಗು ತಜ್ಞರು, ಶೌರ್ಯ ತಂಡದಿಂದ ಜಂಟಿ ಕಾರ್ಯಚರಣೆ ನಡೆಯುತ್ತಿದೆ. ಕಳಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತನ್ನ ಸ್ನೇಹಿತರ ಜೊತೆಗೂಡಿ ಜಿಲ್ಲೆಯ ಕಳಸ ಪಟ್ಟಣಕ್ಕೆ ಬಂದಿದ್ದ ರುದ್ರೇಶ್ ಕಳೆದ ಭಾನುವಾರ ಪೋಟೋ ತೆಗೆಯುವ ವೇಳೆ ಕಾಲುಜಾರಿ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ರು. ಅಂದಿನಿಂದಲೂ SDRF ಪಡೆ, ಅಗ್ನಿಶಾಮಕದಳದ ಸಿಬ್ಬಂದಿ, ನುರಿತ ಮುಳುಗು ತಜ್ಞರು, ಶೌರ್ಯ ವಿಪತ್ತು ಪಡೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ನೀರುಪಾಲಾಗಿದ್ದ ರುದ್ರೇಶ್ ಹುಡುಕಾಟ ನಡೆಸುತಿದ್ರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ವಿಚಾರ ತಿಳಿದು ಭಾನುವಾರ ಸಂಜೆಯೇ ಬೆಂಗಳೂರಿನಿಂದ ಕಳಸಕ್ಕೆ ಆಗಮಿಸಿದ್ದ ರುದ್ರೇಶ್ ತಂದೆ, ಶ್ರೀಧರ್ ಭದ್ರಾ ನದಿ ತೀರದಲ್ಲಿಯೇ ಬೀಡುಬಿಟ್ಟಿದ್ದಾರೆ. ಅಯ್ಯೋ.. ಆಗಿದ್ದು ಆಗೋಯ್ತು, ನನ್ನ ಮಗನ ಮೃತದೇಹವನ್ನಾದ್ರೂ ಹುಡುಕಿಕೊಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ. ಒಬ್ಬ ಮಗನಾಗಿ ತಂದೆಯ ಅಂತ್ಯ ಸಂಸ್ಕಾರವನ್ನ ಮಾಡ್ಬೇಕು, ಆದ್ರೆ ನನಗೆ ಮಗನ ಅಂತ್ಯ ಸಂಸ್ಕಾರ ನೆರವೇರಿಸೋ ಪರಿಸ್ಥಿತಿ ಬಂದೋದಾಗಿದೆ. ಆದ್ರೂ ಪರವಾಗಿಲ್ಲ, ಗಟ್ಟಿ ಮನಸ್ಸು ಮಾಡಿಕೊಂಡಿದ್ದೇನೆ, ಹೇಗಾದ್ರೂ ಮಾಡಿ ಕೊಚ್ಚಿ ಹೋಗಿರುವ ಮಗನ ಮೃತದೇಹ ಹುಡಕಿಕೊಡಿ ಅಂತಾ ಭದ್ರಾ ನದಿ ತೀರದಲ್ಲಿ ತಂದೆ ಶ್ರೀಧರ್ ಅಂಗಲಾಚುತ್ತಿರೋ ದೃಶ್ಯ ನಿಜಕ್ಕೂ ಕರುಳು ಹಿಂಡುವಂತಿತ್ತು..

ckm body

ಮೃತ ವೈದ್ಯ ರುದ್ರೇಶ್ ಕುಟುಂಬ

ಅಪ್ಪನ ದಾರಿಯನ್ನೇ ಎದುರು ನೋಡ್ತಿರೋ 6 ವರ್ಷದ ಮಗಳು ನನ್ನ ಮಗ ರುದ್ರೇಶ್ ಕೂಡ ಉತ್ತಮ ವೈದ್ಯ. 2003ರಿಂದಲೂ ಸೇವೆಯಲ್ಲಿದ್ದ ರುದ್ರೇಶ್, ಅದೆಷ್ಟೋ ಜನರ ಆರೋಗ್ಯ ಹದೆಗೆಟ್ಟಿದ್ದಾಗ ಉತ್ತಮ ಚಿಕಿತ್ಸೆ ನೀಡಿ ನಿಜ ಜೀವನದಲ್ಲಿ ದೇವರಾಗಿದ್ದ. ಆ ಕುಟುಂಬಗಳು ಈಗಲೂ ನನ್ನ ಮಗನನ್ನ ನೆನಪಿಸಿಕೊಳ್ಳುತ್ತಾರೆ. ಆದ್ರೆ ನನ್ನ ಮಗ ಆಪತ್ತಿನಲ್ಲಿ ಇರುವಾಗ ಯಾವ ದೇವರು ಉಳಿಸಲಿಲ್ಲ ಅನ್ನೋ ಬೇಸರವಿದೆ ಅಂತಾ ಶ್ರೀಧರ್ ನೋವು ತೋಡಿಕೊಂಡರು. ಈಗಾಗಲೇ ರುದ್ರೇಶ್ ಬದುಕಿಲ್ಲ ಅನ್ನೋ ಕಠೋರ ಸತ್ಯ ನಮಗೆ ಅರಿವಿದೆ. ರುದ್ರೇಶ್ ತಾಯಿ-ಪತ್ನಿ ಎಲ್ಲರೂ ಶಾಕ್​ಗೆ ಒಳಗಾಗಿದ್ದಾರೆ. ಅವರಿಬ್ಬರೂ ಕೂಡ ವೈದ್ಯರೇ, ಆದ್ರೂ ಅವರು ರುದ್ರೇಶ್​ನನ್ನ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಈ ನಡುವೆ ಕಣ್ಣೀರು ಹಾಕುತ್ತಿರುವ ರುದ್ರೇಶ್ ಪತ್ನಿ ಡಾ. ಮೀರಾಳಿಗೆ, ಆಕೆಯ ಮಗಳೇ ಕಣ್ಣೀರು ಹಾಕಬೇಡಮ್ಮ. ಅಪ್ಪ ಬರ್ತಾರೆ ಅಂತಾ ಸಮಾಧಾನ ಪಡಿಸ್ತಾ ಇದ್ದಾಳೆ. ನನ್ನ ಮಗಳು ಅಪ್ಪ ಮತ್ತೆ ಬರ್ತಾನೆ ಅಂತಾ ದಾರಿ ನೋಡುತ್ತಿದ್ದಾಳೆ ಅಂತಾ ಶ್ರೀಧರ್ ಕಣ್ಣೀರು ಹಾಕಿದ್ದಾರೆ.

ಟಿವಿ9 ಜೊತೆ ಮಗನ ಬಗ್ಗೆ ಮಾತನಾಡುತ್ತಿರುವಾಗಲೇ ನೀರುಪಾಲಾಗಿದ್ದ ರುದ್ರೇಶ್ ಮೊಬೈಲಿಗೆ ರೋಗಿಯೊಬ್ಬರು ಕರೆ ಮಾಡಿದ್ರು. ಸರ್, ಇವತ್ತು ಆಸ್ಪತ್ರೆಗೆ ಬರೋಕೆ ಹೇಳಿದ್ರಿ ಎಷ್ಟೊತ್ತಿಗೆ ಬರೋದು ಸರ್ ಅಂತಾ ಕೇಳಿದ್ರು. ಈ ಕಡೆ ರುದ್ರೇಶ್ ಮೊಬೈಲ್ ಎತ್ತಿಕೊಂಡಿದ್ದ ಅವರ ತಂದೆ ಶ್ರೀಧರ್, ಅವರು ಇಲ್ಲಮ್ಮ ಅಂತಾ ಫೋನ್ ಇಡೋಕೆ ಮುಂದಾದ್ರು. ಆಗ ಆ ಕಡೆಯಿಂದ ಡಾಕ್ಟರ್ ಯಾವಾಗ ಬರ್ತಾರೆ ಸರ್, ಇವತ್ತು ಬರೋಕೆ ಹೇಳಿದ್ರು ಅನ್ನೋ ಪ್ರಶ್ನೆ ಬಂತು. ಇಲ್ಲಮ್ಮಾ, ಅವರು ಇನ್ಮೇಲೆ ಬರಲ್ಲ, ನಮ್ಮನ್ನೆಲ್ಲಾ ಬಿಟ್ಟು, ದೂರ ಹೋಗ್ಬಿಟ್ಟಿದ್ದಾನೆ ಅಂತಾ ರುದ್ರೇಶ್ ತಂದೆ ಶ್ರೀಧರ್ ಕಣ್ಣೀರಿಟ್ಟರು.. ಆ ಕಡೆಯಿಂದಲೂ ಮತ್ತೆ ಪ್ರಶ್ನೆ ಬಾರದೇ ದುಃಖದ ದನಿಯೇ ಪ್ರತಿಧ್ವನಿಸುತ್ತಿತ್ತು.

ಇದನ್ನೂ ಓದಿ: ಪ್ರಧಾನಿ ನಿವಾಸವನ್ನೇ ಬಾಡಿಗೆಗೆ ಇಟ್ಟ ಪಾಕಿಸ್ತಾನ ಸರ್ಕಾರ; ಬಂಗಲೆ ಬಿಟ್ಟ ಇಮ್ರಾನ್ ಖಾನ್​