ಚಿಕ್ಕಮಗಳೂರು, (ಫೆಬ್ರವರಿ 18): ಬಿಸಿಲ ಝಳಕ್ಕೆ ಪ್ರಕೃತಿ ಒಣಗಿ ನಿಂತಿದ್ದಾಳೆ. ಭೂಮಿಯ ಒಡಲಿನಲ್ಲಿ ನೀರಿನ ಸೆಲೆ ಬತ್ತಿ ಹೋಗಿದ್ದು , ಸೂರ್ಯನ ಪ್ರಕರತೆಗೆ ಪ್ರಕೃತಿ ಸೌಂದರ್ಯ ಒಣಗಿದೆ. ಈ ನಡುವೆ ಕಿಡಿಗೇಡಿಗಳು ಹಚ್ಚಿದ ಬೆಂಕಿಯ ಕೆನ್ನಾಲಿಗೆಗೆ ಚಂದ್ರದ್ರೋಣ ಪರ್ವತದ ಸಾಲು ಧಗಧಗಿಸಿ ಉರಿಯುತ್ತಿದೆ. ಹೌದು.. ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಪ್ರವಾಸಿಗರ ಸ್ವರ್ಗ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗದಲ್ಲಿ ನಿನ್ನೆ (ಫೆಬ್ರವರಿ 17) ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಇಂದು(ಫೆಬ್ರವರಿ 18) ಸಹ ಧಗಧಿಸುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುಲು ಹರಸಾಹಸಪಡುತ್ತಿದ್ದರೂ ಸಹ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ನೂರಾರು ಎಕರೆ ಪ್ರದೇಶ ಶೋಲಾ ಅರಣ್ಯದಲ್ಲಿ ಕಳೆದೊಂದು ದಿನ ದಿಂದ ಹೊತ್ತಿ ಉರಿಯುತ್ತಿದ್ದು, ಪ್ರಕೃತಿ ನಾಶವಾಗುತ್ತಿದೆ.
ನಿನ್ನೆ ಸಂಜೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಕಾಣಿಸಿಕೊಂಡ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಗಾಳಿಯ ವೇಗಕ್ಕೆ ಬೆಂಕಿ ಧಗಧಗಿಸಿ ಉರಿಯುತ್ತಿದ್ದು , ಬೆಂಕಿ ಹಿಂದಿನ ತನಿಖೆಗೆ ಇಳಿದ ಅರಣ್ಯ ಇಲಾಖೆಗೆ ಶಾಕ್ ಆಗಿದೆ. ಚಂದ್ರದ್ರೋಣ ಪರ್ವತದ ಸಾಲಿನ ಮೂರು ಭಾಗದಲ್ಲಿ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಬೆಂಕಿ ಹಾಕಿರೋದು ಬೆಳಕಿಗೆ ಬಂದಿದ್ದು. ಚಿಕ್ಕಮಗಳೂರು ಅರಣ್ಯ ವಲಯ ಕಚೇರಿಯಲ್ಲಿ ಕಿಡಿಗೇಡಿಗಳ ವಿರುದ್ಧ FIR ದಾಖಲಿಸಿ ಕಿಡಿಗೇಡಿಗಳ ಬಂಧನಕ್ಕೆ ಅರಣ್ಯ ಇಲಾಖೆ ಬಲೆ ಬೀಸಿದೆ ಕಳೆದ 24 ಗಂಟೆಗಳಿಂದ ಧಗಧಗಿಸಿ ಉರಿಯುತ್ತಿರುವ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ರಾಜ್ಯದ ಎತ್ತರದ ಪ್ರದೇಶವಾಗಿರುವ ಮುಳ್ಳಯ್ಯನಗಿರಿಯಲ್ಲಿ ಗಾಳಿಯ ವೇಗ ಹೆಚ್ಚಾಗಿದ್ದು, ಗಾಳಿಯ ವೇಗಕ್ಕೆ ಬೆಂಕಿ ಆವರಿಸುತ್ತಿದೆ. ಇನ್ನೂ ಕಿರಿದಾದ ರಸ್ತೆಯಾಗಿರುವುದರಿಂದ ಅಗ್ನಿಶಾಮಕ ದಳದ ವಾಹನ ಕೂಡ ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ದೇಶದಲ್ಲೇ ಅಪರೂಪದ ಸಸ್ಯ ರಾಶಿ ಹೊಂದಿರುವ ಚಂದ್ರದ್ರೋಣ ಪರ್ವತ ಶ್ರೇಣಿ ಕಿಡಿಗೇಡಿಗಳ ನೀಚ ಕೃತ್ಯಕ್ಕೆ ಭಸ್ಮವಾಗುತ್ತಿದೆ.
ಅಪರೂಪದ ಸಸ್ಯ ರಾಶಿಯನ್ನ ಹೊಂದಿರುವ ಚಂದ್ರದ್ರೋಣ ಪರ್ವತದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗದಲ್ಲಿ ಶೋಲಾ ಅರಣ್ಯ ನಾಶವಾಗುತ್ತಿರೋದು ಪ್ರಕೃತಿ ಪ್ರೇಮಿಗಳಿಗೆ ಆಕ್ರೋಶ ತರಿಸಿದೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ಮೋಜು ಮಸ್ತಿಯಿಂದಾಗಿ ಶೋಲಾ ಕಾಡಿನಲ್ಲಿ ಬೆಂಕಿ ದುರಂತಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರವಾಸಿಗರು ಸೂಕ್ಷ್ಮ ಪ್ರದೇಶದಲ್ಲಿ ಸಿಗರೆಟ್ ಸೇದಿ ಎಸೆಯುವುದರಿಂದ ಪದೇಪದೇ ಬೆಂಕಿ ಬೀಳಲು ಕಾರಣವಾಗುತ್ತಿದೆ ಎಂಬ ಆರೋಪದ ಕೇಳಿ ಬಂದಿದೆ. ಈ ಹಿಂದೆ ಅರಣ್ಯ ಇಲಾಖೆ ಬೇಸಿಗೆ ಆರಂಭಕ್ಕೂ ಮುನ್ನವೇ ಫೈರ್ ಲೈನ್ ಮಾಡ್ತಿತ್ತು.ಆದರೆ, ಇತ್ತೀಚೆಗೆ ಫೈರ್ ಲೈನ್ ಮಾಡೋದನ್ನ ಬಿಟ್ಟಿದೆ.
ಒಂದುಕಡೆ ಬಿಸಿಲ ಝಳಕ್ಕೆ ಬೆಂಕಿ ಬೀಳುತ್ತಿದ್ದರೆ ಮತ್ತೊಂದೆಡೆ ಹೇರಳವಾಗಿ ಬರೋ ಪ್ರವಾಸಿಗರು ಮನಸೋ ಇಚ್ಛೆ ಮೋಜು ಮಸ್ತಿ ಮಾಡಿ. ಬೀಡಿ, ಸಿಗರೇಟ್ ಸೇದಿ ಎಲ್ಲೊಂದರಲ್ಲಿ ಎಸೆಯುತ್ತಿದ್ದರಿಂದ ಬೆಂಕಿ ಹತ್ತಿಕೊಳ್ಳುತ್ತಿದೆ. ಇದೆಲ್ಲದರ ಜೊತೆಗೆ ಹೋಂ ಸ್ಟೇಗಳಲ್ಲಿ ಫೈರ್ ಕ್ಯಾಂಪ್ ಹಾಕುತ್ತಿರುವುದರಿಂದ ಸಹ ಕಿಡಿ ಹೋಗಿ ಬೆಂಕಿ ಹೊತ್ತಿಕೊಳ್ಳುತ್ತಿದೆ ಎನ್ನಲಾಗಿದೆ. ಈ ಕಾಡ್ಗಿಚ್ಚಿನಿಂದಾಗಿ ಅರಣ್ಯದಲ್ಲಿ ಸಣ್ಣ-ಪುಟ್ಟ ಪ್ರಾಣಿ ಪಕ್ಷಿಗಳು, ಸರಿಸೃಪಗಳು ಬೆಂಕಿಗಾಹುತಿಯಾಗುತ್ತಿವೆ. ಆದರೂ ಸಹ,ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತಿದೆ.
ಒಟ್ಟಾರೆಯಾಗಿ ನಿಸರ್ಗದತ್ತವಾದ ಈ ಪ್ರಕೃತಿಯ ಸೊಬಗು-ಸೌಂದರ್ಯವನ್ನ ಸವಿಯಲು ಬಂದವರ ಬೇಜವಾಬ್ದಾರಿ ತನದಿಂದಲೇ ಅರಣ್ಯ ನಾಶದ ಜೊತೆಗೆ ಪ್ರಾಣಿ ಪಕ್ಷಿಗಳ ಮಾರಣ ಹೋಮವಾಗುತ್ತಿದೆ. ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಪಶ್ಚಿಮ ಘಟ್ಟಗಳ ಸಾಲಿನ ಅಪರೂಪದ ಸಸ್ಯ ಸಂಪತ್ತು ಸುಟ್ಟು ಭಸ್ಮವಾಗುತ್ತಿದೆ.