ಚಿಕ್ಕಮಗಳೂರು, ಜನವರಿ 11: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagalur) 1200 ವರ್ಷಗಳ ಹಳೆಯ ಪುರಾತನ ರಾಮನ ದೇವಾಲಯ (Ram Temple) ವಿಶೇಷವಾಗಿದೆ. ರಾಮಾಯಣದಲ್ಲಿ ಉಲ್ಲೇಖವಾಗಿರುವ ಭಾರ್ಗವಪುರಿಯಲ್ಲಿ ತಪಸ್ಸು ಮಾಡಿದ ಪರಶುರಾಮರಿಗಾಗಿ ಚಾಲುಕ್ಯರು ನಿರ್ಮಿಸಿದ ಈ ದೇವಾಲಯ ಹಲವು ವಿಶೇಷಗಳನ್ನೊಳಗೊಂಡಿದೆ. ಇಲ್ಲಿ ರಾಮನ ಬಲಭಾಗದಲ್ಲಿ ನಿಂತು ದರ್ಶನ ನೀಡುವ ಸೀತಾಮಾತೆ ಇದ್ದರೆ, ಕಲ್ಯಾಣ ರಾಮನಿಗೆ ನಿತ್ಯವೂ ಕನ್ನಡದಲ್ಲೇ ಮಂತ್ರಘೋಷ ನಡೆಯುತ್ತಿದೆ!
ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಪ್ರಭು ರಾಮನ ಹೆಜ್ಜೆ ಗುರುತು ಕರ್ನಾಟಕದಲ್ಲಿ ದಟ್ಟವಾಗಿದೆ. ರಾಮಾಯಣದಲ್ಲಿ ಉಲ್ಲೇಖವಾಗಿರುವ ಭಾರ್ಗವಪುರಿಯಲ್ಲಿ ಪರಶುರಾಮರ ನೆನಪಿಗಾಗಿ ಚಾಲುಕ್ಯರು 1200 ವರ್ಷಗಳ ಹಿಂದೆ ನಿರ್ಮಿಸಿದ ಪುರಾತನ ಪ್ರಸಿದ್ಧ ದೇವಾಲಯ ಕಲ್ಯಾಣ ರಾಮನ ದರ್ಶನ ನೀಡುತ್ತಿದೆ. ಚಿಕ್ಕಮಗಳೂರು ನಗರ ಸಮೀಪದ ಹಿರೇಮಗಳೂರು ರಾಮಾಯಣದಲ್ಲಿ ಉಲ್ಲೇಖವಾಗಿರುವ ಭಾರ್ಗವಪುರಿ ಎಂಬ ಪ್ರತೀತಿ ಇದೆ. ಭಾರ್ಗವಪುರಿಯಲ್ಲಿ ತಪಸ್ಸು ಮಾಡಿದ ಪರಶುರಾಮರು ತಡವಾಗಿ ಸೀತಾರಾಮರ ಕಲ್ಯಾಣಕ್ಕೆ ತೆರಳಿದ್ದರಿಂದ ಅವರಿಗೆ ಕಲ್ಯಾಣದ ಭಾಗ್ಯ ಸಿಕ್ಕಿರಲಿಲ್ಲ ಕಲ್ಯಾಣ ಮುಗಿಸಿ ಅಯೋಧ್ಯೆಗೆ ತೆರಳುವ ಮಾರ್ಗ ಮಧ್ಯೆ ಸಿಕ್ಕ ಪರಶುರಾಮರಿಗೆ ರಾಮ ಬಲ ಭಾಗದಲ್ಲಿ ಸೀತಾ ಮಾತೆ ಎಡಭಾಗದಲ್ಲಿ ನಿಂತ ಲಕ್ಷ್ಮಣನ ದರ್ಶನ ನೀಡುತ್ತಾರೆಂಬ ಪ್ರತೀತಿ ಇದೆ. ಪರಶುರಾಮರು ತಪಸ್ಸು ಮಾಡಿದ ನೆನಪಿಗಾಗಿ ಚಾಲುಕ್ಯರು ಕಲ್ಯಾಣ ರಾಮ ದೇವಾಲಯ ನಿರ್ಮಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಹಿರೇಮಗಳೂರಿನಲ್ಲಿರುವ ಕಲ್ಯಾಣ ಕೋದಂಡರಾಮ ದೇವಾಲಯದಲ್ಲಿ ಬಲ ಭಾಗದಲ್ಲಿ ರಾಮನ ಪಕ್ಕ ನಿಂತಿರುವ ಸೀತಾಮಾತೆಯ ವಿಗ್ರಹವಿದೆ. ರಾಮನ ಬಲಭಾಗದಲ್ಲಿ ಸೀತೆ ಇರುವ ವಿಶ್ವದ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಒಂದಾಗಿದೆ.
ಈ ದೇಗುಲದಲ್ಲಿ ದಿನ ನಿತ್ಯವೂ ಸೀತಾ ರಾಮ ಲಕ್ಷ್ಮಣರಿಗೆ ಕನ್ನಡದಲ್ಲೇ ಮಂತ್ರಘೋಷಗಳಿಂದ ಪೂಜೆ ಸಲ್ಲಿಸುವುದು ವಿಶೇಷವಾಗಿದೆ. ಕನ್ನಡದ ಪೂಜಾರಿ ಎಂದೇ ಖ್ಯಾತಿ ಪಡೆದಿರುವ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಕನ್ನಡದಲ್ಲಿ ಕಲ್ಯಾಣ ರಾಮನಿಗೆ ಕನ್ನಡದಲ್ಲಿ ಪೂಜೆ ಕಾರ್ಯ ನಡೆಯುತ್ತದೆ. ರಾಜ್ಯ ಹೊರ ರಾಜ್ಯದಿಂದ ಆಗಮಿಸುವ ನೂರಾರು ಭಕ್ತರು ಕಲ್ಯಾಣ ರಾಮರ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಹೇಗಿದೆ ನೋಡಿ? ಇದು ಭೂಲೋಕದ ಸ್ವರ್ಗ
ಅಯೋಧ್ಯೆಯಲ್ಲಿ ರಾಮನಿಗೆ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ರಾಮಾಯಣದಲ್ಲಿ ಉಲ್ಲೇಖವಾಗಿರುವ ಸ್ಥಳಗಳು ಬಹಳ ಗಮನ ಸೆಳೆಯುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:38 am, Thu, 11 January 24