Rajyotsava Award: ಜಾನಪದ ಕಲಾವಿದೆ ಚೌಡಮ್ಮಗೆ ಒಲಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 31, 2023 | 9:48 PM

ತನ್ನ ತಾಯಿಯ ಜೊತೆಗೂಡಿ ಕಲಿತ ಸೊಬಾನೆ ಪದಗಳನ್ನು ಇಂದಿಗೂ ಉಳಿಸಿಕೊಂಡು ಬರಲಾಗಿದೆ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂಬ ಮಹಾದಾಸೆ ಇದೆ. ಸುಮಾರು 200ಕ್ಕೂ ಅಧಿಕ ಸೋಬಾನೆ ಪದಗಳನ್ನು ಅನೇಕ ಶುಭ ಸಮಾರಂಭಗಳಲ್ಲಿ ಹಾಡಿದ್ದೇನೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಚೌಡಮ್ಮ ಅವರು ಹೇಳಿದರು.

Rajyotsava Award: ಜಾನಪದ ಕಲಾವಿದೆ ಚೌಡಮ್ಮಗೆ ಒಲಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಜಾನಪದ ಕಲಾವಿದೆ ಚೌಡಮ್ಮ
Follow us on

ಚಿಕ್ಕಮಗಳೂರು, ಅ.31: ಜಿಲ್ಲೆಯ ಕಡೂರು(Kaduru) ತಾಲೂಕಿನ ಚಿಕ್ಕಬಾಸೂರು ಗ್ರಾಮದ ಜಾನಪದ ಕಲಾವಿದೆ ಚೌಡಮ್ಮ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ(Rajyotsava Award) ಒಲಿದಿದೆ. ಬಾಲ್ಯದಿಂದಲೂ ತನ್ನ ತಾಯಿ ಅವರಿಂದ ಬಳುವಳಿಯಾಗಿ ಬಂದ ಸೋಬಾನೆ ಪದಗಳನ್ನು ಹಾಡುತ್ತಾ ರೈತಾಪಿ ಜೀವನದೊಂದಿಗೆ ಬದುಕು ಕಟ್ಟಿಕೊಂಡಿದ್ದು, ಸೋಬಾನೆ ಚೌಡಮ್ಮ ಎಂದೇ ಈ ಭಾಗದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಚೌಡಮ್ಮ ಅವರ ಪತಿ ಬೇಲೂರಯ್ಯ( ಭೈರಪ್ಪ)ರ ಸಹಕಾರದಿಂದಾಗಿ ಜಾನಪದ ಕಲೆಯಲ್ಲಿ ತೊಡಗಿಸಿಕೊಂಡಿರುವ ಚೌಡಮ್ಮ ಅವರು ಸುತ್ತಮುತ್ತಲ‌ ಭಾಗದ ಗ್ರಾಮಗಳಲ್ಲಿ ಮದುವೆ, ಶುಭ ಸಮಾರಂಭಗಳಲ್ಲಿ ಸೋಬಾನೆ ಪದ ಹಾಡುವ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ.

ಸುತ್ತಮುತ್ತಲಿನ ಮಹಿಳೆಯರಿಗೆ ಸೋಬಾನೆ ಪದಗಳನ್ನು ಕಲಿಸುವ ಮೂಲಕ ಕಲೆಯ ಉಳಿವಿಗೆ ಶ್ರಮ

ಸೋಬಾನ ಪದಗಳ ಮೂಲಕ ಗ್ರಾಮೀಣ ಸಂಪ್ರದಾಯಗಳನ್ನು ನೆರವೇರಿಸುತ್ತಾ ಬಂದವರು. ಇವರ ಗಾಯನ ಪ್ರತಿಭೆಯನ್ನು ಗುರುತಿಸಿ ಭದ್ರಾವತಿ ಆಕಾಶವಾಣಿಯು ಬಿ ಗ್ರೇಡ್ ಕಲಾವಿದೆಯಾಗಿ ಮನ್ನಣೆ ನೀಡಿ ಅನೇಕ ಬಾರಿ ಇವರು ಹಾಡಿದ ಸೋಬಾನೆ ಪದಗಳನ್ನು ಪ್ರಸಾರ ಮಾಡಿದ್ದಾರೆ. ಅನಕ್ಷರಸ್ಥೆಯಾಗಿದ್ದರೂ ಸಹ ತಮ್ಮ ಜ್ಞಾಪಕ ಶಕ್ತಿಯಿಂದಲೇ ನೂರಾರು ಪದಗಳನ್ನು ಕಟ್ಟಿ ಹಾಡುತ್ತಾ ಬಂದಿದ್ದಾರೆ. ಕೇವಲ ತಾವು ಈ ಕಲೆಯನ್ನು ಮೈಗೂಡಿಸಿಕೊಂಡಿದ್ದಲ್ಲದೆ ಅನೇಕ ಗ್ರಾಮೀಣ ಮಹಿಳೆಯರಿಗೂ ಸೋಬಾನೆ ಪದಗಳನ್ನು ಕಲಿಸುತ್ತಾ ಬಂದಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಹಾಡುಗಾರಿಕೆಯನ್ನು ಇಲಾಖೆಯ ಗುರು-ಶಿಷ್ಯ ಪರಂಪರೆ ಯೋಜನೆಯ ಅಡಿಯಲ್ಲಿ ತಮ್ಮ ಗ್ರಾಮದ ಸುತ್ತಮುತ್ತಲ ಅನೇಕ ಮಹಿಳೆಯರಿಗೆ ಸೋಬಾನೆ ಪದಗಳನ್ನು ಕಲಿಸುವ ಮೂಲಕ ಕಲೆಯ ಉಳಿವಿಗೆ ಶ್ರಮಿಸಿದ್ದಾರೆ.

ಇದನ್ನೂ ಓದಿ:Rajyotsava Award: ಖ್ಯಾತ ನಟರಾದ ಬ್ಯಾಂಕ್​ ಜನಾರ್ದನ್​, ಡಿಂಗ್ರಿ ನಾಗರಾಜ್​ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

70 ರ ಇಳಿ ವಯಸ್ಸಿನಲ್ಲೂ ಸಹ ಕುಂದದ ಉತ್ಸಾಹ

ಗ್ರಾಮೀಣ ಭಾಗದ ಈ ಜಾನಪದ ಕಲೆಯಲ್ಲಿ ಸೋಬಾನೆ ಪದಗಳು, ಬಿಸೋ ಕಲ್ಲಿನ ಪದ ಮುಂತಾದ ಈ ನೆಲದ ಸಂಸ್ಕೃತಿಯನ್ನು ಯುವ ಜನತೆಗೆ ಅನೇಕ ಕಾರ್ಯಕ್ರಮಗಳಲ್ಲಿ ಹಾಡಿ ಪರಿಚಯಿಸುವ ಮೂಲಕ ಅವರಲ್ಲಿ ಆಸಕ್ತಿಯನ್ನು ಬೆಳೆಸುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಚೌಡಮ್ಮ ಅವರ ಕಲಾ ನೈಪುಣ್ಯವನ್ನು ಗಮನಿಸಿರುವ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿವೆ. 70 ರ ಇಳಿ ವಯಸ್ಸಿನಲ್ಲೂ ಸಹ ಕುಂದದ ಉತ್ಸಾಹ ಇವರದಾಗಿದ್ದು, ಯುವ ಜನಾಂಗಕ್ಕೆ ಕಲೆಯ ಜೀವಂತಿಕೆಯನ್ನು ಉಳಿಸುತ್ತಿರುವ ಚೌಡಮ್ಮ ಅವರ ಜಾನಪದ ಕಲಾ‌ಕ್ಷೇತ್ರ ಹಾಗೂ ಸೋಬಾನೆ ಪದಗಳನ್ನು‌ ಕಟ್ಟಿ‌ ಹಾಡುವಲ್ಲಿ‌ ಇನ್ನಷ್ಟು ಉತ್ತಂಗಕ್ಕೇರಲಿ‌ಎಂಬುದು ಎಲ್ಲರ ಆಶಯವಾಗಿದೆ.

 200ಕ್ಕೂ ಅಧಿಕ ಸೋಬಾನೆ ಪದ ಹಾಡಿದ ಚೌಡಮ್ಮ

ತನ್ನ ತಾಯಿಯ ಜೊತೆಗೂಡಿ ಕಲಿತ ಸೊಬಾನೆ ಪದಗಳನ್ನು ಇಂದಿಗೂ ಉಳಿಸಿಕೊಂಡು ಬರಲಾಗಿದೆ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂಬ ಮಹಾದಾಸೆ ಇದೆ. ಸುಮಾರು 200ಕ್ಕೂ ಅಧಿಕ ಸೋಬಾನೆ ಪದಗಳನ್ನು ಅನೇಕ ಶುಭ ಸಮಾರಂಭಗಳಲ್ಲಿ ಹಾಡಿದ್ದೇನೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಚೌಡಮ್ಮ ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Tue, 31 October 23