
ಚಿಕ್ಕಮಗಳೂರು, ಜುಲೈ 09: ಕೊಪ್ಪ (Koppa) ಪಟ್ಟಣದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ (Morarji Residential School) 9ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣವನ್ನು ನಿವೃತ್ತ ನ್ಯಾಯಾಧೀಶೆ ಶೋಭಾ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.
ವಸತಿ ಶಾಲೆಯ ಪ್ರಾಂಶುಪಾಲೆ ಹಾಗೂ ವಸತಿ ನಿಲಯದ ವಾರ್ಡನ್ನನ್ನು ಸರ್ಕಾರ ಅಮಾನತು ಮಾಡಿದೆ. ಪ್ರಾಂಶುಪಾಲೆ ರಜನಿ ಮತ್ತು ವಾರ್ಡನ್ ಸುಂದರ್ ನಾಯಕ್ ಅವರನ್ನು ಅಮಾನತು ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್)ದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ASI ಕಿರುಕುಳ ಆರೋಪ: ಎಸ್ಪಿ ಕಚೇರಿ ಎದುರು ವಿಷಸೇವಿಸಿದ ವ್ಯಕ್ತಿ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೊಮ್ಲಾಪುರ ಸಮೀಪದ ಹೊಕ್ಕಳಿಕೆ ಗ್ರಾಮದ ಶಮಿತಾ ಎಂಬುವರು ಕೊಪ್ಪದ ಮೊರಾರ್ಜಿ ವಸತಿ ಶಾಲೆಯಲ್ಲಿ 9 ತರಗತಿ ಓದುತ್ತಿದ್ದರು. ವಿದ್ಯಾರ್ಥಿನಿ ಶಮಿತಾ 2025ರ ಜೂನ್ 29ರಂದು ಶಾಲೆಯ ಶೌಚಾಲಯದಲ್ಲಿ ವೇಲ್ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾತ್ರಿ ಮಲಗುವವರೆಗೂ ಸ್ನೇಹಿತರ ಜೊತೆ ಖುಷಿ ಖುಷಿಯಾಗಿ ಮಾತನಾಡಿದ್ದ ಶಮಿತಾ ಬೆಳಗಾಗುವಷ್ಟರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಇಂತಹದ್ದೇ ಪ್ರಕರಣ 2023ರಲ್ಲಿ ಇದೇ ವಸತಿ ನಿಲಯದಲ್ಲಿ ನಡೆದಿತ್ತು. 2023 ಜುಲೈ 27ರಂದು ವಿದ್ಯಾರ್ಥಿನಿ ಅಮುಲ್ಯ ವಸತಿ ಶಾಲೆಯ ಬಾತ್ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇಬ್ಬರೂ ವಿದ್ಯಾರ್ಥಿನಿಯರು ಒಂದೇ ಸ್ಥಳದಲ್ಲಿ, ಒಂದೇ ಕಬ್ಬಿಣಕ್ಕೆ, ಒಂದೇ ಶೈಲಿಯಲ್ಲಿ ನೇಣು ಹಾಕಿಕೊಂಡಿದ್ದರು. ಇದು ವಿದ್ಯಾರ್ಥಿನಿಯರ ಪೋಷಕರಲ್ಲಿ ಮತ್ತು ಸಾರ್ಜನಿಕರಲ್ಲಿ ಅನುಮಾನ ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ವಸತಿ ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಅಗ್ರಹಿಸಿದ್ದಾರೆ.
Published On - 6:35 pm, Wed, 9 July 25