ಪಾಠ ಕೇಳುವಾಗಲೇ ಹೃದಯಾಘಾತದಿಂದ ಮೃತಪಟ್ಟ 4ನೇ ತರಗತಿ ವಿದ್ಯಾರ್ಥಿ
ಕರ್ನಾಟಕದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಹಲವಾರು ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯುವಕ, ಯುವತಿಯರು ಹೃದಯಾಘಾತದಿಂದ ಬಲಿಯಾಗುತ್ತಿದ್ದಾರೆ. ಚಾಮರಾಜನಗರದಲ್ಲಿ 10 ವರ್ಷ ಬಾಲಕ ಶಾಲೆಯಲ್ಲಿ ಪಾಠ ಕೇಳುವಾಗಲೇ ಹೃದಯಘಾತದಿಂದ ಮೃತಪಟ್ಟಿದ್ದಾನೆ. ಗುಂಡ್ಲುಪೇಟೆ ತಾಲೂಕಿನ ಕುರಬರಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ.

ಚಾಮರಾಜನಗರ, ಜುಲೈ 09: ಗುಂಡ್ಲುಪೇಟೆ (Gundupete) ತಾಲೂಕಿನ ಕುರಬರಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಓರ್ವ ವಿದ್ಯಾರ್ಥಿಯು ಪಾಠ ಕೇಳುತ್ತಿರುವಾಗಲೇ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾನೆ. ಮನೋಜ್ ಕುಮಾರ್ (10) ಮೃತ ದುರ್ದೈವಿ. ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮನೋಜ್ ಕುಮಾರ್ ಶಾಲೆಯಲ್ಲಿ ಪಾಠ ಕೇಳುತ್ತಿದ್ದಾಗ ಕುಸಿದುಬಿದ್ದು, ಮೃತಪಟ್ಟಿದ್ದಾನೆ. ಮೃತ ಮನೋಜ್ ಕುಮಾರ್ ಹೃದಯದಲ್ಲಿ ರಂಧ್ರ ಇದ್ದು, ಜಯದೇವ, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದನು ಎಂದು ತಿಳಿದುಬಂದಿದೆ.
ಹೃದಯಾಘಾತದಿಂದ ಚಾಲಕ ಸಾವು
ಬೆಳಗಾವಿ: ಹೃದಯಾಘಾತದಿಂದ ಗೂಡ್ಸ್ ವಾಹನ ಚಾಲಕ ಮೃತಪಟ್ಟಿರುವ ಘಟನೆ ಸವದತ್ತಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದಿದೆ. ಅಶೋಕ್ ಜೀರಿಗವಾಡ (40) ಮೃತ ದುರ್ದೈವಿ. ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ನಿವಾಸಿಯಾಗಿರುವ ಮೃತ ಅಶೋಕ್ ಸವದತ್ತಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಗೂಡ್ಸ್ ವಾಹನದಲ್ಲಿ ಹೆಸರುಕಾಳು ತಂದಿದ್ದರು. ಈ ವೇಳೆ ಅಶೋಕ್ ಎದೆನೋವಿನಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಫಾರೆಸ್ಟ್ ಗಾರ್ಡ್ ನಿಧನ
ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೊಗ್ಗೆದೊಡ್ಡಿ ಗ್ರಾಮದ ನಿವಾಸಿ ಫಾರೆಸ್ಟ್ ಗಾರ್ಡ್ ಮಾದೇಶ್ ನಾಯ್ಕ್ (38) ಹೃದಯಘಾತದಿಂದ ಮೃತಪಟ್ಟಿದ್ದಾರೆ. ಬುಧವಾರ ಮುಂಜಾನೆ ಮಾದೇಶ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲವೆಂದ ಗುಂಡೂರಾವ್: ಅಧಿಸೂಚಿತ ಖಾಯಿಲೆ ಎಂದು ಘೋಷಣೆ
ಹೃದಯಾಘಾತಕ್ಕೆ ಒಂದೇ ತಾಲೂಕಿನ ಮೂವರು ಬಲಿ
ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೂವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಾರಾಯಣ ರಾಯ್ಕರ್ (52), ಬಸಪ್ಪ(78) ಮತ್ತು ಬಸಾಪುರ ಗ್ರಾಮದ ಅನ್ನಪೂರ್ಣಮ್ಮ ಚವಡಿ (56) ಮೃತದುರ್ದೈವಿಗಳು. ನಾರಾಯಣ ಮತ್ತು ಬಸಪ್ಪ ನವಲಗುಂದ ಪಟ್ಟಣದ ನಿವಾಸಿಗಳಾಗಿದ್ದು, ಅನ್ನಪೂರ್ಣಮ್ಮ ನವಲಗುಂದ ತಾಲೂಕಿನ ಬಸಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Wed, 9 July 25







