ಹಾಸನದಲ್ಲಿ ಹೃದಯಾಘಾತ: ಶಾಲೆಗಳಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆಗೆ ಸಚಿವ ರಾಜಣ್ಣ ಸೂಚನೆ
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಪ್ರಕರಣ ಹೆಚ್ಚಳ ಹಿನ್ನೆಲೆ ಇಂದು ಜಿಲ್ಲೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧಿಕಾರಿಗಳೊಂದಿಗೆ ಸಭೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ಪ್ರತಿ ವರ್ಷ ಕಡ್ಡಾಯವಾಗಿ ಹೃದಯ ತಪಾಸಣೆ ಮಾಡಿಸಲು ಸರ್ಕಾರದಲ್ಲಿ ಚಿಂತನೆ ನಡೆದಿದೆ ಎಂದಿದ್ದಾರೆ.

ಹಾಸನ, ಜುಲೈ 06: ಜಿಲ್ಲೆಯಲ್ಲಿ ಹೃದಯಾಘಾತದಿಂದ (heart attack) ಸಾವಿನ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಅಧ್ಯಯನಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚಿಸಿತ್ತು. ಈ ಸಮಿತಿ ಶನಿವಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಮಧ್ಯ ಬಾನುವಾರ ಜಿಲ್ಲೆಯ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ (K. N. Rajanna), ಹೈಸ್ಕೂಲ್ ಮಕ್ಕಳಿಗೆ 15 ದಿನದೊಳಗೆ ತಪಾಸಣೆ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಿಷ್ಟು
ಜಿಲ್ಲೆಯ ಚನ್ನರಾಯಪಟ್ಟಣ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿ ಸಚಿವ ಕೆ.ಎನ್.ರಾಜಣ್ಣ, ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ಪ್ರತಿ ವರ್ಷ ಕಡ್ಡಾಯವಾಗಿ ಹೃದಯ ತಪಾಸಣೆ ಮಾಡಿಸಲು ಸರ್ಕಾರದಲ್ಲಿ ಚಿಂತನೆ ನಡೆದಿದೆ. ಚಿಕ್ಕ ಚಿಕ್ಕ ವಯಸ್ಸಿನವರು ಅಸುನೀಗಿದ್ದಾರೆ. ಅದು ಬೇಸರದ ಸಂಗತಿ. ಮುಂದೆ ಸಾವುಗಳು ಆಗಬಾರದು, ಅದನ್ನು ತಡೆಯಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣವೇನು? ಸರ್ಕಾರಕ್ಕೆ ಸಲ್ಲಿಕೆಯಾಯ್ತು ತಜ್ಞರ ವರದಿ
ನಾನು ಬರುವಾಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಅವರು ಸಹ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದ್ದಾರೆ. ಶೀಘ್ರದಲ್ಲೇ ಸಭೆ ನಡೆಸುತ್ತೇವೆ. ಅಲ್ಲಿ ತಜ್ಞರ ಸಮಿತಿ ನೀಡುವ ಸಲಹೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ನಟ ಪುನೀತ್ ಹೆಚ್ಚು ವ್ಯಾಯಾಮ ಮಾಡಿದ್ದರಿಂದ ಮೃತಪಟ್ಟರು
ಲಸಿಕೆಯಿಂದ ಅಡ್ಡ ಪರಿಣಾಮ ಇಲ್ಲ ಎಂದು ಮಾಧ್ಯಮದಲ್ಲಿ ಬಂದಿದೆ. ಆಹಾರ ಪದ್ಧತಿ, ಹೆಚ್ಚು ಆಯಾಸದಿಂದ ಹೃದಯಾಘಾತ ಸಂಭವಿಸುತ್ತೆ. ಜನಸಂಖ್ಯೆ ಹೆಚ್ಚಿದೆ, ಮೊದಲೂ ಹೃದಯಾಘಾತದಿಂದ ಸಾಯುತ್ತಿದ್ದರು. ನಟ ಪುನೀತ್ ಹೆಚ್ಚು ವ್ಯಾಯಾಮ ಮಾಡಿದ್ದರಿಂದ ಮೃತಪಟ್ಟರು. ಈ ಬಗ್ಗೆ ಅವರ ವೈದ್ಯರೇ ಹೇಳಿದ್ದಾರೆ ಎಂದರು.
ಜನರಿಗೆ ರಾಜಣ್ಣ ಮನವಿ
ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೂ ತಪಾಸಣೆ ಮಾಡಿಸಬೇಕು. ಹೈಸ್ಕೂಲ್ ಮಕ್ಕಳಿಗೆ 15 ದಿನದೊಳಗೆ ತಪಾಸಣೆ ಮಾಡಬೇಕು. ಮೃತಪಟ್ಟವರ ಮರಣೋತ್ತರ ಪರೀಕ್ಷೆಗಾಗಿ ಕುಟುಂಬಸ್ಥರಿಗೆ ಮನವಿ ಮಾಡಿ, ಪ್ರತಿಯೊಂದು ಕೇಸ್‌ಗೂ ಹಿಸ್ಟರಿ ಬರೆಯಬೇಕು. ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟರೆ ಮಾಹಿತಿ ಕಲೆಹಾಕಿ. ಹಾಸನ ಜಿಲ್ಲೆಯಲ್ಲಿ ಒಬ್ಬರೇ ಹೃದ್ರೋಗ ತಜ್ಞರಿದ್ದಾರೆ. ಇನ್ನೂ 2-3 ಹೃದ್ರೋಗ ತಜ್ಞರ ನೇಮಕಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಹೃದ್ರೋಗ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿ. ನಾನು ಕೂಡ ಗುತ್ತಿಗೆದಾರನ ಜೊತೆ ಮಾತನಾಡುತ್ತೇನೆ. ಸುಳ್ಳು ಸುದ್ದಿ ಪ್ರಸಾರ ಮಾಡುವವರನ್ನು ಕರೆಸಿ ವಾರ್ನ್ ಮಾಡಿ. ಅದನ್ನೇ ಮುಂದುವರಿಸಿದರೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದರು.
ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಿದ್ದರಿಂದ ಬಂದಿರಲಿಲ್ಲ
ಕಳೆದ 2-3 ತಿಂಗಳಿಂದ ನಾನು ಹಾಸನಕ್ಕೆ ಬಂದಿರಲಿಲ್ಲ. ನನಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಿತ್ತು, ಹಾಗಾಗಿ ಬಂದಿರಲಿಲ್ಲ. ಹಾಸನಕ್ಕೆ ಬರುವ ಮೊದಲನೇ ದಿನ ಪಟಾಕಿ ಸಿಡಿದು ಪೆಟ್ಟಾಗಿತ್ತು. ವೈದ್ಯರು ನನಗೆ ಪ್ರಯಾಣಿಸದಂತೆ ಸೂಚಿಸಿದ್ದಾರೆ. ಈ ಕಾರಣದಿಂದ ನಾನು ಹಾಸನ ಜಿಲ್ಲೆಗೆ ಬರಲು ಆಗಲಿಲ್ಲ. ಅದನ್ನು ಹೊರತುಪಡಿಸಿಯೂ ಕೆಲವು ಕಾರಣಗಳಿವೆ. ಆ ಕಾರಣಗಳಿಗೆ ನೀವು ಚಿಂತಿಸಬೇಡಿ ಎಂದು ಹಾಸ್ಯ ಮಾಡಿದರು.
ಇದನ್ನೂ ಓದಿ: ಹೃದಯಾಘಾತಕ್ಕೆ ಇದು ಕಾರಣ: ತಜ್ಞರ ವರದಿಯಲ್ಲಿ ಆತಂಕಕಾರಿ ಅಂಶ ಬಯಲು
ಉಸ್ತುವಾರಿ ಬೇಡ ಎಂದು ಕಳೆದ ಡಿಸೆಂಬರ್ನಲ್ಲೇ ಹೇಳಿದ್ದೆ. ಆ ಬಗ್ಗೆ ಇಲ್ಲಿವರೆಗೆ ಯಾವುದೇ ನಿರ್ಧಾರ ಆಗಲಿಲ್ಲ. ಹಾಗಂತ ನಾನು ಹಾಸನ ಜಿಲ್ಲೆಗೆ ಬರಬಾರದು ಅನ್ನೋದೇನಿಲ್ಲ. ನಾನು ಜಿಲ್ಲೆಗೆ ಬಂದು ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.