ಹಾಸನದ ಹೃದಯಾಘಾತದ ಪ್ರಾಥಮಿಕ ವರದಿ ಸಿದ್ಧ: ಇದುವೇ ಮುಖ್ಯ ಕಾರಣ ಅಂತಿದ್ದಾರೆ ತಜ್ಞರು!
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸರಣಿ ಸಾವುಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಕಳವಳಗೊಂಡಿದ್ದಾರೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿದೆ. ಸಾವಿನ ಕಾರಣ ಪತ್ತೆಹಚ್ಚಲು ಸಮಿತಿ ರಚಿಸಿದೆ. ಇದೀಗ ತಾಂತ್ರಿಕ ಸಮಿತಿ ಪ್ರಾರ್ಥಮಿಕ ವರದಿ ಸಿದ್ಧ ಪಡಿಸಿದ್ದು, ಶಾಕಿಂಗ್ ಅಂಶ ಪತ್ತೆ ಮಾಡಿದೆ.

ಬೆಂಗಳೂರು, ಜುಲೈ 02: ಹಾಸನದಲ್ಲಿ (Hassan) ಆಗುತ್ತಿರುವ ಸರಣಿ ಸಾವುಗಳು ಇಡೀ ಆರೋಗ್ಯ ಇಲಾಖೆಯೇ ಫೀಲ್ಡ್‌ಗೆ ಇಳಿಯುವಂತೆ ಮಾಡಿದ್ದು, ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಕಳವಳಗೊಂಡಿದ್ದಾರೆ. ಜಸ್ಟ್ 42 ದಿನದಲ್ಲೇ 26 ಮಂದಿ ಬಲಿ ಆಗಿದ್ದಾರೆ. ಸಾವಿನ ತನಿಖೆಗೆ ತಜ್ಞರ ಸಮಿತಿಯೂ ರಚಿಸಲಾಗಿದೆ. ಈ ಮಧ್ಯೆ ಹೃದಯಾಘಾತದ (heart attack) ಬಗ್ಗೆ ತಾಂತ್ರಿಕ ಸಮಿತಿ ಪ್ರಾಥಮಿಕ ವರದಿ ಸಿದ್ಧ ಪಡಿಸಿದ್ದು, ವರದಿಯಲ್ಲಿ ಶಾಕಿಂಗ್ ಅಂಶ ಪತ್ತೆ ಆಗಿದೆ.
ಪ್ರಾಥಮಿಕ ವರದಿಯಲ್ಲಿ ಏನಿದೆ?
ಈ ಸರಣಿ ಸಾವುಗಳಿಂದ ಸರ್ಕಾರ ಕೂಡ ಆತಂಕಗೊಂಡಿದ್ದು, ಸಾವಿಗೆ ಕಾರಣ ಏನು ಅನ್ನೋದನ್ನ ತಿಳಿಯಲು ಬೆಂಗಳೂರಿನ ಜಯದೇವ ಆಸ್ಪತ್ರೆ ಮುಖ್ಯಸ್ಥರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. 10 ದಿನದಲ್ಲೇ ವರದಿ ನೀಡುವಂತೆ 12 ಜನ ತಜ್ಞರ ಸಮಿತಿಗೆ ಸರ್ಕಾರ ಸೂಚಿಸಿತ್ತು. ಇದರ ಬೆನ್ನಲ್ಲೇ ಇದೀಗ ಪ್ರಾಥಮಿಕ ವರದಿಯನ್ನು ತಜ್ಞರು ಸಿದ್ಧ ಪಡಿಸಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಹೃದಯಾಘಾತ ಹೆಚ್ಚಳ: ವಿಶೇಷ ಸಮಿತಿ ರಚಿಸಿದ ಸರ್ಕಾರ
ಅತಿಯಾದ ಬೊಜ್ಜು, ಮಾಂಸ ಸೇವನೆ, ಧೂಮಪಾನ, ಮದ್ಯಪಾನ ಮತ್ತು ಫಾಸ್ಟ್ ಫುಡ್ ಸೇವನೆಯಿಂದ ಸಾವು ಸಂಭವಿಸಿರುವ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ರೆಡ್ ಮೀಟ್ ಸೇವನೆಯಿಂದ ಕೂಡ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ಆಳವಾದ ಅಧ್ಯಯನ ಮಾಡಲು ತಾಂತ್ರಿಕ ಸಮಿತಿ ನಿರ್ಧರಿಸಿದೆ. ಇನ್ನು ವರದಿ ಸಲ್ಲಿಸಲು ಕೇವಲ ಒಂದು ವಾರ ಬಾಕಿ ಇದ್ದು, ಅಷ್ಟರ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.
ಹಾಸನದಲ್ಲಿ ಹೃದಯಘಾತದ ಸರಣಿ ನಿಲ್ಲುತ್ತಲೇ ಇಲ್ಲ. ಮೊನ್ನೆ ನಾಲ್ವರು ಉಸಿರು ನಿಲ್ಲಿಸಿದ್ದರು. ನಿನ್ನೆ ಕೂಡಾ ಮೂವರು ಬಲಿ ಆಗಿದ್ದಾರೆ. ಹೀಗೆ ಒಟ್ಟು 26 ಮಂದಿ ಬಲಿ ಆಗಿದ್ದಾರೆ. ಅದರಲ್ಲೂ ನಿನ್ನೆ ಬಾಣಂತಿ, ಯುವಕರು ಅಷ್ಟೇ ಅಲ್ಲ ಸರ್ಕಾರಿ ಆಸ್ಪತ್ರೆ ವೈದ್ಯನೇ ಹಾರ್ಟ್‌ಅಟ್ಯಾಕ್‌ಗೆ ಬಲಿ ಆಗಿದ್ದಾರೆ.
ಇದನ್ನೂ ಓದಿ: ಹಾಸನ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣವಾ? ಐಸಿಎಂಆರ್ ಅಧ್ಯಯನ ಏನು ಹೇಳುತ್ತೆ?
ಸರಣಿ ಸಾವು ಎಲ್ಲರ ಅಲರ್ಟ್‌ಗೆ ಕಾರಣವಾಗಿದೆ. ರಾಜ್ಯದ 86 ತಾಲೂಕುಗಳಲ್ಲಿ ಇರುವ ಸ್ಟೆಮಿ ಯೋಜನೆಯನ್ನ ಎಲ್ಲಾ ತಾಲೂಕಿಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಇದರ ನಡುವೆ CPR ಅಂದ್ರೆ ಹಾರ್ಟ್ಅಟ್ಯಾಕ್ ವೇಳೆ ರೋಗಿಯ ಎದೆಯನ್ನ ಒತ್ತಿ ಹೃದಯ ಬಡಿತವನ್ನ ಮರುಚಾಲನೆಗೊಳಿಸುವ ಪ್ರಾಥಮಿಕ ಚಿಕಿತ್ಸಾ ಕ್ರಮದ ಬಗ್ಗೆ ಎಲ್ಲರಿಗೂ ತರಬೇತಿ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:03 pm, Wed, 2 July 25