ಹಾಸನ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣವಾ? ಐಸಿಎಂಆರ್ ಅಧ್ಯಯನ ಏನು ಹೇಳುತ್ತೆ?
Will covid-19 vaccine increase heart attack? ICMR study clarifies: ಹಾಸನ ಜಿಲ್ಲೆಯಲ್ಲಿ ಒಂದೇ ದಿನ 4 ಮಂದಿ ಹೃದಯಾಘಾತಗೊಂಡಿದ್ದಾರೆ. ಕಳೆದ 40 ದಿನದಲ್ಲಿ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿದೆ. ಕೋವಿಡ್ ಲಸಿಕೆಯೂ ಈ ಅಸಹಜ ಸಾವಿಗೆ ಕಾರಣ ಇರಬಹುದು ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ, ಐಸಿಎಂಆರ್ ಈ ಹಿಂದೆಯೇ ಅಧ್ಯಯನ ನಡೆಸಿ ವರದಿ ನೀಡಿತ್ತು. ಅದರ ಪ್ರಕಾರ....

ಬೆಂಗಳೂರು, ಜೂನ್ 30: ಹಾಸನ ಜಿಲ್ಲೆಯಲ್ಲಿ ಕಳೆದ 40 ದಿನದಲ್ಲಿ 22 ಜನರು ಹೃದಯಾಘಾತದಿಂದ ಮರಣ ಅಪ್ಪಿರುವ ಸಂಗತಿ (Hassan heart attack) ಬಹಳ ಆಶ್ಚರ್ಯ ಮೂಡಿಸಿದೆ. ಮೃತಪಟ್ಟವರು ವಯಸ್ಸಾದವರಷ್ಟೇ ಅಲ್ಲ, ಸಣ್ಣ ವಯಸ್ಸಿನವರೂ ಸೇರಿ ಎಲ್ಲಾ ವಯೋಮಾನದವರೂ ಇದ್ದಾರೆ. ಕೃಷಿ ಕೆಲಸ ಮಾಡುವವರಿಂದ ಹಿಡಿದು ಪ್ರಾಧ್ಯಾಪಕರು, ಚಾಲಕರು ಹೀಗೆ ಬೇರೆ ಬೇರೆ ಕ್ಷೇತ್ರದವರಿದ್ದಾರೆ. ಈ ಸಾವು ಯಾವುದೋ ಒಂದು ನಿರ್ದಿಷ್ಟ ತಾಲೂಕಿಗೂ ಸೀಮಿತವಾಗಿಲ್ಲ. ಜಿಲ್ಲೆಯಾದ್ಯಂತ ಸಾವಿನ ವರದಿಗಳಾಗಿವೆ.
ಹಾಸನದಲ್ಲಿ ಸಂಭವಿಸುತ್ತಿರುವ ಈ ಹೃದಯಾಘಾತಗಳಿಗೆ ಕಾರಣ ಏನೆಂದು ಗೊತ್ತಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಹೃದಯಾಘಾತಕ್ಕೆ ಕಾರಣ ಏನೆಂದು ಪತ್ತೆ ಮಾಡಲು ತಜ್ಞರಿಂದ ಮಾಹಿತಿ ತರಿಸಿಕೊಂಡು, ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಹಾಸನ: ಹೃದಯಾಘಾತಕ್ಕೆ ಒಂದೇ ದಿನ ನಾಲ್ಕು ಬಲಿ, 40 ದಿನಗಳಲ್ಲಿ 22 ಸಾವು
ಕೋವಿಡ್ ಲಸಿಕೆ ಕಾರಣ ಎಂದು ತಪ್ಪು ಮಾಹಿತಿ?
ಹಾಸನದಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಘಟನೆಗಳಿಗೆ ಕೋವಿಡ್-19 ಲಸಿಕೆಯೇ ಕಾರಣ ಇರಬಹುದು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕೆಲವರು ಪೋಸ್ಟ್ ಮಾಡುತ್ತಿದ್ದಾರೆ. ಇದು ಸಾಕಷ್ಟು ಜನರಿಗೆ ಗಾಬರಿ ಮೂಡಿಸುತ್ತಿದೆ. ಹಾಸನದಿಂದ ಬಹಳಷ್ಟು ಜನರು ಮೈಸೂರಿನ ಜಯದೇವ ಹೃದ್ರೋಗ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬರುತ್ತಿದೆ.
ಕೋವಿಡ್ ಲಸಿಕೆಯಿಂದ ಅಪಾಯ ಇದೆಯಾ? ಐಸಿಎಂಆರ್ ಅಧ್ಯಯನ ಹೇಳೋದೇನು?
ಕೋವಿಡ್-19 ಲಸಿಕೆಯಿಂದ ಹಲವು ಅಡ್ಡಪರಿಣಾಮಗಳಿವೆ ಎನ್ನುವ ಆರೋಪ ಕಳೆದ ಮೂರು ವರ್ಷಗಳಿಂದಲೂ ಇದೆ. ದೇಶದ ಕೆಲವೆಡೆ ಯುವಕರು ಮತ್ತು ಯುವತಿಯರು ಸಾವನ್ನಪ್ಪಿದ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಈ ಬಗ್ಗೆ ಐಸಿಎಂಆರ್ ಅಧ್ಯಯನ ನಡೆಸಿತ್ತು. 2021ರ ಅಕ್ಟೋಬರ್ 1ರಿಂದ 2023 ಮಾರ್ಚ್ 31ರವರೆಗೆ ಯಾವುದೇ ಕೋವಿಡ್ ಸಿಂಪ್ಟಮ್ ಇಲ್ಲದಿದ್ದರೂ ಸಾವನ್ನಪ್ಪಿದ ಪ್ರಕರಣಗಳನ್ನು ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿತ್ತು.
ಇದನ್ನೂ ಓದಿ: ಡಾ. ಮಂಜುನಾಥ್ ದಿಟ್ಟ ಹೆಜ್ಜೆ: ಕರ್ನಾಟಕದಲ್ಲಿನ ಹೃದಯಾಘಾತ ಕೇಸ್ ಪ್ರಧಾನಿ ಮೋದಿ ಅಂಗಳಕ್ಕೆ
ಈ ಐಸಿಎಂಆರ್ ಅಧ್ಯಯನದ ಪ್ರಕಾರ ಈ ಅಸಹಜ ಸಾವುಗಳು ಕೋವಿಡ್ ಲಸಿಕೆಯಿಂದ ಸಂಭವಿಸಿದ್ದಲ್ಲ. ಲಸಿಕೆ ಪಡೆದವರಲ್ಲಿ ಇಂಥ ಸಾವು ಸಂಭಾವ್ಯತೆ ಕಡಿಮೆ ಇರುವುದನ್ನೂ ಈ ಅಧ್ಯಯನ ಕಂಡು ಹಿಡಿದಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು 2024ರ ಡಿಸೆಂಬರ್ ತಿಂಗಳಲ್ಲಿ ಈ ಐಸಿಎಂಆರ್ ಅಧ್ಯಯನದ ವರದಿಯನ್ನು ರಾಜ್ಯಸಭೆಗೆ ತಿಳಿಸಿದ್ದರು.
ಈಗ ಹಾಸನದಲ್ಲಿ ಸಂಭವಿಸುತ್ತಿರುವ ಸಾವಿನ ಪ್ರಕರಣಗಳಿಗೆ ಕೆಲವರು ಕೋವಿಡ್ ಲಸಿಕೆಯನ್ನು ತಳುಕು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ತಜ್ಞರು ಈ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸುವವರೆಗೂ ಕಾರಣ ಪತ್ತೆ ಮಾಡುವುದು ಅಸಾಧ್ಯ.
ರಾಜ್ಯದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Mon, 30 June 25