ಅತ್ಯಾಚಾರ ಕೇಸ್: ಜಾಮೀನು ವಿಚಾರವಾಗಿ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಮಹತ್ವದ ಸೂಚನೆ
ಹಾಸನದ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದ್ದು, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಪ್ರಜ್ವಲ್ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಇದರಿಂದ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ಬೆಂಗಳೂರು, (ಜುಲೈ 09): ಹಾಸನದ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ (Karnataka High Court) ಇತ್ಯರ್ಥಗೊಳಿಸಿದೆ. ಮನೆ ಕೆಲಸದಾಕೆ ಮೇಲೆ ಅತ್ಯಾಚಾರದ ದೂರಿನ ಕೇಸ್‌ಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣಾಧೀನ ನ್ಯಾಯಾಲಯ ಅಂದರೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲು ಸೂಚನೆ ನೀಡಿದೆ. ಅಲ್ಲದೇ ಪ್ರಜ್ವಲ್ ರೇವಣ್ಣ ಸಲ್ಲಿಸುವ ಜಾಮೀನು ಅರ್ಜಿಯನ್ನು 10 ದಿನಗಳಲ್ಲಿ ನಿರ್ಧರಿಸಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಸೂಚಿಸಿದೆ. ಇದರೊಂದಿಗೆ ಪ್ರಜ್ವಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕದಸ್ಯ ಪೀಠ ಇತ್ಯರ್ಥಪಡಿಸಿದ.
ಹೊಳೆನರಸೀಪುರ ಸಂತ್ರಸ್ತೆಯ ಅತ್ಯಾಚಾರ ಪ್ರಕರಣ ಸಂಬಂಧ ವಿಳಂಬ ವಿಚಾರಣೆಯ ಕಾರಣಕ್ಕೆ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು (ಜುಲೈ 09) ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ವಿಚಾರಣಾಧೀನ ನ್ಯಾಯಾಲಯಕ್ಕೆ( ಜನಪ್ರತಿನಿಧಿಗಳ ವಿಶೇಷ ಕೋರ್ಟ್ ) ಅರ್ಜಿ ಸಲ್ಲಿಸಲು ಹೇಳಿದೆ. ಅಲ್ಲದೇ ಜಾಮೀನು ಅರ್ಜಿ ಸಲ್ಲಿಸಿದರೆ 10 ದಿನಗಳಲ್ಲಿ ನಿರ್ಧರಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಕ್ಕೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸ್: ಅಶ್ಲೀಲ ವಿಡಿಯೋಗಳ ಬಗ್ಗೆ ಕೋರ್ಟ್ ಮುಂದೆ ಸ್ಫೋಟಕ ಸಾಕ್ಷ್ಯ ನುಡಿದ ಕಾರು ಚಾಲಕ
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಜಾಮೀನು ಅರ್ಜಿ ಸಲ್ಲಿಸಿದ ಹತ್ತು ದಿನಗಳಲ್ಲಿ ನಿರ್ಧರಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದ್ದರಿಂದ ಪ್ರಜ್ವಲ್ಗೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಯಾಕಂದ್ರೆ, ಜಾಮೀನು ಅರ್ಜಿ ವಿಚಾರಣೆ ಪದೇ ಪದೇ ಮುಂದೆ ಹೋಗುತ್ತಲೇ ಇತ್ತು. ಆದ್ರೆ, ಇದೀಗ ಹೈಕೋರ್ಟ್ 10 ದಿನದಲ್ಲೇ ನಿರ್ಧರಿಸುವಂತೆ ಹೇಳಿದ್ದರಿಂದ ಎಲ್ಲೋ ಒಂದು ಕಡೆ ಪ್ರಜ್ವಲ್ಗೆ ಜಾಮೀನು ಸಿಗುವ ಆಶಾಭಾವನೆ ಮೂಡಿದ್ದು, ಜಾಮೀನು ಸಿಗುತ್ತಾ ಇಲ್ವಾ ಎಂದು ಅರ್ಜಿ ಸಲ್ಲಿಸಿದ ಹತ್ತೇ ದಿನಗಳಲ್ಲಿ ತಿಳಿಯಲಿದೆ.
ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದು ಇದು ಎರಡನೇ ಬಾರಿ. ಅವರ ವಿರುದ್ಧದ ಗಂಭೀರ ಆರೋಪಗಳು ಮತ್ತು ಸಾಕ್ಷಿಗಳನ್ನು ನಾಶ ಸಾಧ್ಯತೆಯಿಂದ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರ ಮೊದಲ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ಇದೀಗ ಪ್ರಜ್ವಲ್ ಜಾಮೀನಿಗಾಗಿ 2ನೇ ಬಾರಿಗೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಪರಿಸ್ಥಿತಿಯಲ್ಲಿ ಬದಲಾವಣೆ ಎಂದು ಹೇಳಿಕೊಂಡು ಜಾಮೀನು ಕೋರಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Wed, 9 July 25







