ಅಶ್ಲೀಲಕ್ಕೂ ಒಂದು ಮಿತಿ ಇರಬೇಕು, ಇದು ಎಲ್ಲಾ ಮೀರಿದೆ: ಪ್ರಜ್ವಲ್ಗೆ ಹೈಕೋರ್ಟ್ ಚಾಟಿ
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಕಾರು ಚಾಲಕನ ಫೋನ್‌ನಿಂದ ಪಡೆದಿರುವ ಫೋಟೊ ಮತ್ತು ವಿಡಿಯೋಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೇ ಅಶ್ಲೀಲಕ್ಕೂ ಒಂದು ಮಿತಿ ಇರಬೇಕು ಎಂದು ಕೋರ್ಟ್ ಚಾಟಿ ಬೀಸಿದೆ.
ಬೆಂಗಳೂರು, (ಜನವರಿ 16): ಎಲೆಕ್ಟ್ರಾನಿಕ್ ಎವಿಡೆನ್ಸ್ ಅಥವಾ ಮೊಬೈಲ್ ಫೋನ್‌ನಿಂದ ವಶಪಡಿಸಿಕೊಂಡಿರುವ ಫೋಟೋ, ವಿಡಿಯೋಗಳು ಒದಗಿಸುವಂತೆ ಕೋರಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಅಲ್ಲದೇ ಪ್ರಜ್ವಲ್ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಿಸಲಾಗದು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟು, ಪ್ರಜ್ವಲ್ ರೇವಣ್ಣ ಅರ್ಜಿ ಇತ್ಯರ್ಥಪಡಿಸಿದ. ಇದರಿಂದ ಪ್ರಜ್ವಲ್ಗೆ ಹಿನ್ನಡೆಯಾಗಿದೆ.
ಕಾರು ಚಾಲಕನ ಫೋನ್‌ನಿಂದ ಪಡೆದಿರುವ ಫೋಟೊ ಮತ್ತು ವಿಡಿಯೋಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಪ್ರಜ್ವಲ್ ರೇವಣ್ಣ ಸಿಆರ್‌ಪಿಸಿ ಸೆಕ್ಷನ್ 207ರ ಅಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಇಂದು (ಜನವರಿ 16) ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಜಗದೀಶ್, ಈಗಾಗಲೇ ಎಲ್ಲಾ ವಿಡಿಯೋ ಫೋಟೋ ನೀಡಲಾಗಿದೆ. ಪ್ರಕರಣ ವಿಳಂಬ ಮಾಡುವುಕ್ಕೆ ಕೋರ್ಟ್ ಗಳಲ್ಲಿ ಈ ರೀತಿ ಅರ್ಜಿ ಹಾಕಲಾಗುತ್ತಿದೆ. ಕೆಳಹಂತದ ನ್ಯಾಯಾಲಯದಲ್ಲೂ ಕೂಡ ಸಿಡಿಆರ್ ಕೇಳಿ ಅರ್ಜಿ ಹಾಕಿದ್ದಾರೆ ಎಂದು ವಾದ ಮಂಡಿಸಿದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣನ 4ನೇ ಪ್ರಕರಣದ ಜಾಮೀನು ಅರ್ಜಿ ವಜಾ ಮಾಡಿದ ಕೋರ್ಟ್
ವಾದವನ್ನು ಆಲಿಸಿದ ಕೋರ್ಟ್, ಪ್ರಜ್ವಲ್ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಿಸಲಾಗದು. ಪ್ರಕರಣಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಎಲ್ಲವೂ ಅಶ್ಲೀಲವಾಗಿದೆ. ಅಶ್ಲೀಲಕ್ಕೂ ಒಂದು ಮಿತಿ ಇರಬೇಕು. ಇದು ಎಲ್ಲವನ್ನೂ ಮೀರಿದೆ. ಈ ರೀತಿಯ ಫೋಟೋಗಳನ್ನು ಯಾರು ಸೆರೆ ಹಿಡಿಯಲು ಸಾಧ್ಯ? ಎಂದು ಪ್ರಜ್ವಲ್ ಪರ ವಕೀಲ ಜಿ ಅರುಣ್ ಅವರನ್ನು ಕೋರ್ಟ್ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ಗೋಪಾಲಕೃಷ್ಣ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಪ್ರಕಾರ ಹಾಲಿ ಪ್ರಕರಣಕ್ಕೆ ಅಗತ್ಯವಾದ ಫೋಟೋ, ವಿಡಿಯೋಗಳನ್ನು ಪ್ರಾಸಿಕ್ಯೂಷನ್ ಒದಗಿಸಲಿದೆ. ಅದನ್ನು ಹೊರತುಪಡಿಸಿ ಬೇರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುವ ಫೋಟೋ, ವಿಡಿಯೋಗಳನ್ನು ನೀಡಲಾಗದು. ನೀವು ಏನೋ ಮಾಡಬೇಕು ಎಂಬುದಕ್ಕೆ ಬೇರೊಬ್ಬ ಮಹಿಳೆಯ ಖಾಸಗಿತನದ ಉಲ್ಲಂಘನೆಯಾಗುವುದಕ್ಕೆ ಅವಕಾಶ ನೀಡಲಾಗದು ಎಂದು ನ್ಯಾಯಾಲಯ ಚಾಟಿ ಬೀಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ