ಅತ್ಯಾಚಾರ ಪ್ರಕರಣ: ಕೇಸ್ ಬೇರೆ ಕೋರ್ಟ್ಗೆ ವರ್ಗಾಯಿಸಲು ಕೋರಿದ್ದ ಅರ್ಜಿ ವಜಾ
ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಅತ್ಯಾಚಾರ ಪ್ರಕರಣ ವರ್ಗಾವಣೆ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಅವರ ವಕೀಲರು ಪ್ರಕರಣದಿಂದ ಹಿಂದೆ ಸರಿದಿದ್ದು, ಬೇರೆ ವಕೀಲರನ್ನು ನೇಮಿಸಿಕೊಳ್ಳಲು ರೇವಣ್ಣ ಸಮಯಾವಕಾಶ ಕೇಳಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೇವಣ್ಣ ಅವರಿಗೆ ಇದು ಹಿನ್ನಡೆಯಾಗಿದೆ.

ಬೆಂಗಳೂರು, ಏಪ್ರಿಲ್ 23: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಅತ್ಯಾಚಾರ ಪ್ರಕರಣ ವರ್ಗಾವಣೆ ಅರ್ಜಿಯನ್ನು (Prajwal Revanna) ಕೋರ್ಟ್ ವಜಾಗೊಳಿಸಿದೆ. ಅತ್ಯಾಚಾರ ಪ್ರಕರಣವನ್ನು ಬೇರೆ ಕೋರ್ಟ್ಗೆ ವರ್ಗಾಯಿಸುವಂತೆ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಪ್ರಧಾನ ಸಿಟಿ ಸಿವಿಲ್ ಕೋರ್ಟ್(City Civil Court), ವಿಚಾರಣೆ ವಿಳಂಬಗೊಳಿಸುವ ಪ್ರಯತ್ನಗಳಿಗೆ ಖಂಡನೆ ವ್ಯಕ್ತಪಡಿಸಿ, ವಿಚಾರಣೆ ಮುಂದುವರಿಸುವಂತೆ ಸೂಚನೆ ನೀಡಿ ಅರ್ಜಿ ವಜಾಗೊಳಿಸಿದೆ. ಇದರಿಂದ ಸದ್ಯ ಅಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಹಿನ್ನಡೆಯಾಗಿದೆ.
ಇನ್ನು, ಈ ಪ್ರಕರಣದಿಂದ ನಿವೃತ್ತರಾಗಲು ಪ್ರಜ್ವಲ್ ರೇವಣ್ಣ ಪರ ವಕೀಲ ಜಿ.ಅರುಣ್ ನಿಶ್ಚಯಿಸಿದ್ದರು. ಈ ಸಂಬಂಧ ನ್ಯಾಯಾಲಯಕ್ಕೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಕೀಲ ಜಿ.ಅರುಣ್ ಪ್ರಕರಣದಿಂದ ನಿವೃತ್ತರಾಗಲು ಅನುಮತಿ ನೀಡಿದೆ. ಹೀಗಾಗಿ, ಬೇರೆ ವಕೀಲರನ್ನು ನಿಯೋಜಿಸಲು ಪ್ರಜ್ವಲ್ ರೇವಣ್ಣ ಸಮಯ ಕೇಳಿದ್ದಾರೆ. ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ (ಏ.23) ಕ್ಕೆ ಮುಂದೂಡಿದೆ.
ಪ್ರಕರಣದಿಂದ ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿ ವಾಜಾ
ಅತ್ಯಾಚಾರ ಪ್ರಕರಣದಿಂದ ಕೈಬಿಡುವಂತೆ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ಕ್ರೈಮ್ ನಂಬರ್ 20ರಲ್ಲಿ ಪ್ರಜ್ವಲ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದರು.
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳು ಹೈಕೋರ್ಟ್ನಲ್ಲಿ ವಜಾಗೊಂಡಿವೆ. ಅಲ್ಲದೇ ಸುಪ್ರೀಂಕೋರ್ಟ್ನಲ್ಲೂ ಸಹ ವಜಾಗೊಂಡಿತ್ತು. ಸದ್ಯ ಪ್ರಜ್ವಲ್ ರೇವಣ್ಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ಮಹಿಳೆ ಅಪಹರಣ ಕೇಸ್: ಭವಾನಿ ರೇವಣ್ಣಗೆ ವಿಧಿಸಿದ್ದ ಷರತ್ತು ಸಡಿಲಿಸಿದ ಹೈಕೋರ್ಟ್
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದ್ದವು. ಈ ವಿಡಿಯೋದಲ್ಲಿ ಇದ್ದಾರೆ ಎನ್ನಲಾದ ಸಂತ್ರಸ್ತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಸರ್ಕಾರ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ತಂಡ ರಚಿಸಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪಲಾಯನ ಮಾಡಿದ್ದರು. ಆದರೆ, ಎಸ್ಐಟಿ ಅಧಿಕಾರಿಗಳ ತಾಂತ್ರಿಕ ನಡೆಯಿಂದ ಪ್ರಜ್ವಲ್ ರೇವಣ್ಣನನ್ನು ಬಂಧಿಸುವಲ್ಲಿ ಯಶ್ವಿಸಿಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಎಸ್ಐಟಿ 1,632 ಪುಟಗಳ ಚಾರ್ಚ್ಶೀಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಚಾರ್ಚ್ಶೀಟ್ನಲ್ಲಿ ಮನೆ ಕೆಲಸದಾಕೆಗೆ ಲೈಂಗಿಕ ದೌರ್ಜನ್ಯ ನೀಡಿರುವುದು ಉಲ್ಲೇಖವಾಗಿದೆ.