ಚಿಕ್ಕಮಗಳೂರು: ಮಂಗ ನಾಲ್ಕು ದಿನದ ಹಿಂದೆ ಜಿಲ್ಲೆಯ ಶಾಲೆಯೊಂದಕ್ಕೆ ಆಕಸ್ಮಿಕವಾಗಿ ಬಂದಿತ್ತು. ಆ ಕೋತಿಯನ್ನು ಓಡಿಸಲು ಹೋದ ಆಟೋ ಚಾಲಕ, ಮಂಗನಿಗೆ ರೆಗಿಸಿದ್ದರು. ಇದರಿಂದ ಸಿಟ್ಟಿಗೆದ್ದ ಕೋತಿ, ಆಟೋ ಚಾಲಕನನ್ನು ಬೆಂಬಿಡದೆ ಹುಡುಕಿಕೊಂಡು 2 ಕಿಲೋ ಮೀಟರ್ ದೂರ ಬಂದು, ಆತನ ಮೇಲೆ ದಾಳಿ ಮಾಡಿತ್ತು. ಹೀಗಾಗಿ ಹಗಲು ರಾತ್ರಿ ಹರಸಾಹಸ ಮಾಡಿ ಅರಣ್ಯ ಸಿಬ್ಬಂದಿ, ಈ ಮಂಗವನ್ನು ಹಿಡಿದು ಕಾಡಿಗೆ ಬಿಟ್ಟು ಬಂದಿದ್ದರು. ಆದರೆ ಇದೀಗ ಮತ್ತೆ ಅದೇ ಮಂಗ ವಾಪಸ್ಸು ಬಂದಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಹಾವಿನ ದ್ವೇಷ, ಹನ್ನೆರಡು ವರ್ಷ ಎನ್ನುವ ಮಾತಿದೆ. ಹಾಗಂತ ದ್ವೇಷ ಸಾಧಿಸುವುದು ಹಾವು ಮಾತ್ರ ಎಂದು ನೀವು ಭಾವಿಸಿದರೆ ಖಂಡಿತಾ ತಪ್ಪಾಗುತ್ತದೆ. ಏಕೆಂದರೆ 22 ಕೀಲೋ ಮೀಟರ್ ದೂರ ಹೋಗಿ ಅರಣ್ಯ ಸಿಬ್ಬಂದಿಗಳು ಕಾಡಿಗೆ ಬಿಟ್ಟು ಬಂದರೂ. ಅದೊಬ್ಬ ವ್ಯಕ್ತಿಯನ್ನು ಹುಡುಕಿಕೊಂಡು ಮತ್ತೆ ಮಂಗ ಅದೇ ಜಾಗಕ್ಕೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಕಳೆದ ಗುರುವಾರ ಅಂದರೆ ಸೆಪ್ಟೆಂಬರ್ 16 ರಂದು ಈ ಕಪಿರಾಯ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಕಳೆದ ಗುರುವಾರದಂದು ಕೊಟ್ಟಿಗೆಹಾರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಈ ಕೋತಿ ಬಂದಿತ್ತು. ಸುದ್ದಿ ತಿಳಿದು ಅಲ್ಲಿಗೆ ಹೋಗಿದ್ದ ಕೊಟ್ಟಿಗೆಹಾರದ ಆಟೋ ಚಾಲಕ ಜಗದೀಶ್ ಎಂಬುವವರು, ಮಂಗನಿಗೆ ಚುಡಾಸಿದ್ದಾರೆ. ಅಷ್ಟೇ, ಅಲ್ಲಿಂದ ಆತನ ಮೇಲೆ ದ್ವೇಷ ಕಾರಲು ಶುರುಮಾಡಿದ ಮಂಗ, ಶಾಲೆಯಲ್ಲೆ ಮೈ ಮೇಲೆ ಎಗರಿದೆ. ಈ ವೇಳೆ ಹೇಗೋ ತಪ್ಪಿಸಿಕೊಂಡು ಆಟೋ ಚಾಲಕ ಜಗದೀಶ್ ಕೊಟ್ಟಿಗೆಹಾರದ ಆಟೋ ಸ್ಟ್ಯಾಂಡ್ ಬಳಿ ಬಂದಿದ್ದರು. ಬಳಿಕ ಕೋತಿ ಒನ್ನೊಬ್ಬರ ತಲೆ ಮೇಲೆ ಕುಳಿತು ಕೊಟ್ಟಿಗೆಹಾರದತ್ತ ಬಂತು. ಹೆಗಲ ಮೇಲೆ ಕುಳಿತುಕೊಂಡು ಬಂದ ವ್ಯಕ್ತಿಗೆ ಏನು ಮಾಡದ ಮಂಗ, ಜಗದೀಶ್ ನಿಲ್ಲಿಸಿದ ಆಟೋ ಹತ್ತಿರ ಹೋಗಿ ಆತನಿಗೆ ಕೈ ಕಚ್ಚಿದೆ. ಅಷ್ಟೇ ಅಲ್ಲ ಆಟೋದ ಸೀಟ್ ಕವರ್ಗಳನ್ನೆಲ್ಲಾ ಪುಡಿ ಮಾಡಿ ಹಾಕಿ, ತನ್ನ ಸೇಡನ್ನು ತೀರಿಸಿಕೊಂಡಿದೆ.
ಜನರೆಲ್ಲಾ ಓಡಿಸಿದರೂ ಕೋತಿ ಹೆದರಲಿಲ್ಲ. ಹೀಗಾಗಿ ಸೆಪ್ಟೆಂಬರ್ 17 ರಂದು 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೇಗೋ ಕೋತಿಯನ್ನು ಸೆರೆಹಿಡಿದು 22ಕೀಲೋ ಮೀಟರ್ ದೂರದ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟು ಬಂದಿದ್ದರು. ಆದರೆ ಮರುದಿನವೇ ರಾತ್ರಿ ಚಾರ್ಮಾಡಿ ಮಾರ್ಗವಾಗಿ ಬಂದ ಲಾರಿಯೊಂದರಲ್ಲಿ ಕುಳಿತು ಕೊಟ್ಟಿಗೆಹಾರ ಸೇರಿರುವ ಮಂಗ ಮತ್ತೆ ಜನರು ಆತಂಕ ಪಡುವಂತೆ ಮಾಡಿತ್ತು.
ಚಾರ್ಮಾಡಿ ಘಾಟ್ಗೆ ಹೊಂದಿಕೊಂಡೇ ಇರುವ ಕೊಟ್ಟಿಗೆಹಾರಕ್ಕೆ ಸಾವಿರಾರು ಮಂಗಗಳು ಬಂದು ಹೋಗಿವೆ. ಆದರೆ ಯಾವ ಮಂಗಗಳು ಕೂಡ ಈ ರೀತಿ ಸೇಡನ್ನು ಮನುಷ್ಯರ ಮೇಲೆ ತೀರಿಸಿಕೊಂಡಿರಲಿಲ್ಲ. ಇದೊಂದು ಮಂಗ ಮಾತ್ರ ಕಳೆದ ಸೆಪ್ಟೆಂಬರ್ 16-17ರಂದು ಎರಡು ದಿನ ತೋರಿದ ಚೇಷ್ಟೆಯನ್ನು ಕೊಟ್ಟಿಗೆಹಾರದ ಮಂದಿ ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ.
ಕೋತಿ ಒಬ್ಬ ವ್ಯಕ್ತಿಯನ್ನು ಏಕೆ ಹೀಗೆ ಟಾರ್ಗೆಟ್ ಮಾಡಿದೆ ಎಂದು ನಮಗೆ ತಿಳಿದಿಲ್ಲ. ಆತ ಪ್ರಾಣಿಗೆ ಈ ಹಿಂದೆ ಏನಾದರೂ ಹಾನಿ ಮಾಡಿದ್ದಾನೋ ಅಥವಾ ಇದು ತಕ್ಷಣದ ಪ್ರತಿಕ್ರಿಯೆಯೋ ನಮಗೆ ಗೊತ್ತಿಲ್ಲ. ಆದರೆ, ಕೋತಿಗಳು ಈ ರೀತಿ ವರ್ತಿಸುವುದನ್ನು ನಾವು ನೋಡುತ್ತಿರುವುದು ಇದೇ ಮೊದಲು ಎಂದು ಮೂಡಿಗೆರೆ ಅರಣ್ಯ ಇಲಾಖೆ ಸಿಬ್ಬಂದಿ ಮೋಹನ್ ಕುಮಾರ್ ತಿಳಿಸಿದ್ದಾರೆ.
ಸೆಪ್ಟೆಂಬರ್ 22 ರಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತೆ ಇದೇ ಕೋತಿಯನ್ನು ಸೆರೆಹಿಡಿದಿದ್ದಾರೆ. ಈ ಬಾರಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕೋತಿಯನ್ನು ಮತ್ತಷ್ಟು ದೂರ ಕರೆದುಕೊಂಡು ಬಿಟ್ಟಿದ್ದಾರೆ. ಮತ್ತೆ ಈ ಕೋತಿ ಊರಿಗೆ ಬಾರದೆ ಇರಲಿ ಮತ್ತು ಜನರ ಮೇಲೆ ದಾಳಿ ಮಾಡದೆ ಇರಲಿ ಎನ್ನುವುದು ಸ್ಥಳೀಯರ ಆಶಯ.
ವರದಿ: ಪ್ರಶಾಂತ್
ಕಾಫಿ ನಾಡಿನಲ್ಲಿ ಮೂವರ ಮೇಲೆ ಮಂಗನ ದಾಳಿ; ರೇಗಿಸಿದವನ ಅಟ್ಟಾಡಿಸಿ ಕೈ ಕಚ್ಚಿದ ಕೋತಿ
30ಕ್ಕೂ ಹೆಚ್ಚು ಜನರ ಮೇಲೆ ಕೋತಿಗಳ ದಾಳಿ; ಮಂಗಗಳ ಉಪಟಳ ತಡೆಯಲು ಆಗ್ತಿಲ್ಲ ಅಂತಿದ್ದಾರೆ ನಿಟ್ಟೂರು ಗ್ರಾಮಸ್ಥರು
Published On - 12:26 pm, Fri, 24 September 21