2 ಕಂತು ಇಎಂಐ ಕಟ್ಟಿಲ್ಲವೆಂದು ಜೆಸಿಬಿಯನ್ನೇ ಹರಾಜು ಹಾಕಿದ ಬ್ಯಾಂಕ್: 10 ದಿನಗಳಿಂದ ಧರಣಿ ನಡೆಸುತ್ತಿರುವ ತಾಯಿ-ಮಗ

ಚಿಕ್ಕಮಗಳೂರಿನಲ್ಲಿ ಬ್ಯಾಂಕೊಂದು ಎರಡು ಇಎಂಐ ತಡವಾದ ಕಾರಣ ಮಂಜುನಾಥ್ ಎಂಬವರ ಜೆಸಿಬಿಯನ್ನು ಜಪ್ತಿ ಮಾಡಿ, ಹರಾಜು ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಸಾಲದ ಅವಧಿ ಮುಗಿಯುವ ಮೊದಲೇ ವಾಹನ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ, ಜೆಸಿಬಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ತಾಯಿ ಮತ್ತು ಮಗ ಹತ್ತು ದಿನಗಳಿಂದ ಬ್ಯಾಂಕ್ ಮುಂದೆ ನಿರಂತರ ಧರಣಿ ನಡೆಸುತ್ತಿದ್ದಾರೆ.

2 ಕಂತು ಇಎಂಐ ಕಟ್ಟಿಲ್ಲವೆಂದು ಜೆಸಿಬಿಯನ್ನೇ ಹರಾಜು ಹಾಕಿದ ಬ್ಯಾಂಕ್: 10 ದಿನಗಳಿಂದ ಧರಣಿ ನಡೆಸುತ್ತಿರುವ ತಾಯಿ-ಮಗ
ಬ್ಯಾಂಕ್ ಎದುರು ಧರಣಿ ನಡೆಸುತ್ತಿರುವ ತಾಯಿ-ಮಗ
Image Credit source: tv9
Edited By:

Updated on: Feb 11, 2026 | 11:43 AM

ಚಿಕ್ಕಮಗಳೂರು, ಫೆಬ್ರವರಿ 11: ಕೇವಲ ಎರಡು ಕಂತು ಇಎಂಐ (EMI) ತಡವಾದ ಕಾರಣ ಜೆಸಿಬಿ ವಾಹನವನ್ನು ಸೀಜ್ ಮಾಡಿ ಹರಾಜು ಮಾಡಲಾಗಿದೆ ಎಂದು ಆರೋಪಿಸಿ ತಾಯಿ ಮತ್ತು ಮಗ ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿರುವ ಹೆಚ್​ಡಿಎಫ್​ಸಿ (HDFC) ಬ್ಯಾಂಕ್ ಮುಂದೆ ಹತ್ತಿ ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದಾರೆ. ಚಿಕ್ಕಮಗಳೂರು (Chikkamagaluru) ತಾಲೂಕಿನ ಗೌಡನಹಳ್ಳಿ ಗ್ರಾಮದ ಮಂಜುನಾಥ್ ಅವರು ಜೆಸಿಬಿ ಖರೀದಿಸಲು ಐದು ವರ್ಷಗಳ ಅವಧಿಗೆ HDFC ಬ್ಯಾಂಕ್‌ನಿಂದ ಸುಮಾರು 29 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ವೇಳೆ 7 ಲಕ್ಷ ರೂಪಾಯಿ ಮುಂಗಡವಾಗಿ ಪಾವತಿಸಿ, ಉಳಿದ ಹಣವನ್ನು ತಿಂಗಳ EMI ರೂಪದಲ್ಲಿ ಕಟ್ಟುತ್ತಿದ್ದರು. ಸುಮಾರು ಒಂದು ವರ್ಷ ಆರು ತಿಂಗಳು ನಿಯಮಿತವಾಗಿ ಕಂತು ಕಟ್ಟಿದ ಬಳಿಕ, ಎರಡು ತಿಂಗಳು ಕಂತು ತಡವಾದ ಹಿನ್ನೆಲೆ ಮೂರನೇ ತಿಂಗಳಲ್ಲಿ ಬ್ಯಾಂಕ್ ಜೆಸಿಬಿಯನ್ನು ಸೀಜ್ ಮಾಡಿದೆ ಎಂದು ಆರೋಪಿಸಲಾಗಿದೆ.

ಸಾಲದ ಅವಧಿ ಬಾಕಿ ಇರುವಾಗಲೇ ಬ್ಯಾಂಕ್ ಜೆಸಿಬಿಯನ್ನು ಹರಾಜು ಮೂಲಕ ಮಾರಾಟ ಮಾಡಿರುವುದಾಗಿ ಮಂಜುನಾಥ್ ಆರೋಪಿಸಿದ್ದಾರೆ. ಸಂಪೂರ್ಣ ಬಾಕಿ ಇರುವ 22.5 ಲಕ್ಷ ರೂಪಾಯಿ ಪಾವತಿಸಿ ವಾಹನವನ್ನು ಪಡೆದುಕೊಳ್ಳಬಹುದು ಎಂದು ಬ್ಯಾಂಕ್ ಹೇಳಿದ್ದರೂ, ಹಣ ತೆಗೆದುಕೊಂಡು ಹೋದಾಗಲೇ ಜೆಸಿಬಿ ಮಾರಾಟವಾಗಿದೆ ಎಂದು ಆರೋಪಿಸಲಾಗಿದೆ.

ಜೆಸಿಬಿ ಮಾರಾಟವಾದ ಬಳಿಕವೂ ಬ್ಯಾಂಕ್‌ಗೆ ಇನ್ನೂ 1.75 ಲಕ್ಷ ರೂಪಾಯಿ ಬಾಕಿ ಇದ್ದು ಅದನ್ನು ಪಾವತಿಸುವಂತೆ ಸಿಬ್ಬಂದಿ ತಿಳಿಸಿದ್ದಾರೆ ಎಂದು ಮಂಜುನಾಥ್ ಕುಟುಂಬ ಆರೋಪಿಸಿದೆ. ಸಂಪೂರ್ಣ ಹಣ ಪಾವತಿಸಲು 15 ದಿನಗಳ ಅವಧಿ ನೀಡಿದರೂ, ಆ ಅವಧಿ ಪೂರ್ಣಗೊಳ್ಳುವ ಮುನ್ನವೇ ಜೆಸಿಬಿಯನ್ನು ಮಾರಾಟ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಸಿಬಿಯೇ ತಮ್ಮ ಜೀವನಕ್ಕೆ ಆಧಾರವಾಗಿದ್ದು, ಅದನ್ನು ವಾಪಸ್ ನೀಡುವಂತೆ ಒತ್ತಾಯಿಸಿ ಮಂಜುನಾಥ್ ಹಾಗೂ ಅವರ ತಾಯಿ ಕಳೆದ 10 ದಿನಗಳಿಂದ ಬ್ಯಾಂಕ್ ಮುಂದೆ 24 ಗಂಟೆಗಳೂ ಧರಣಿ ನಡೆಸುತ್ತಿದ್ದಾರೆ. ರಾತ್ರಿ ವೇಳೆ ಸಹ ಬ್ಯಾಂಕ್ ಮುಂದೆ ಮಲಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಮದುವೆ ನೆಪದಲ್ಲಿ 9 ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿದ್ದ ‘ಮ್ಯಾಟ್ರಿಮೋನಿ ಮನ್ಮಥ’, ನಕಲಿ ಮಾವ ಪೊಲೀಸ್ ಬಲೆಗೆ

ಜೆಸಿಬಿಯ ಮೌಲ್ಯಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿರುವ ಕುಟುಂಬ, ತಮ್ಮ ಜೆಸಿಬಿಯನ್ನು ವಾಪಸ್ ನೀಡಿ ಬಾಕಿ ಹಣವನ್ನು ಕಟ್ಟಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ HDFC ಬ್ಯಾಂಕ್ ವಿರುದ್ಧ ಸ್ಥಳೀಯರಲ್ಲೂ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣ ಸದ್ಯ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ