ಚಿಕ್ಕಮಗಳೂರು: ತಣ್ಣನೆಯ ಗಾಳಿ ಹಚ್ಚ ಹಸಿರಿನಿಂದ ಸದಾ ಕಂಗೊಳಿಸುವ ಪ್ರಕೃತಿ ಸೌಂದರ್ಯ. ಎತ್ತರದ ಶಿಖರದ ಮೇಲಿನಿಂದ ಪ್ರಕೃತಿ ಸೌಂದರ್ಯ ಸವಿಯುವ ಬಯಕೆ ಪ್ರತಿ ಪ್ರವಾಸಿಗರನ್ನು ಕಾಡುತ್ತೆ. ಅದರಲ್ಲೂ ಜಿಲ್ಲೆಯ ಮುಳ್ಳಯ್ಯನಗಿರಿ(Mullayanagiri)ಚಂದ್ರದ್ರೋಣ ಪರ್ವತದ ಸಾಲುಗಳು ಪ್ರವಾಸಿಗರ ಹಾಟ್ ಸ್ಪಾಟ್. ನಿತ್ಯವೂ ಮುಳ್ಳಯ್ಯನಗಿರಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ದತ್ತಾಪೀಠ ಮಾಣಿಕ್ಯದಾರಕ್ಕೆ ಸಾವಿರಾರು ಪ್ರವಾಸಿಗರು ರಾಜ್ಯ ಹೊರ ದೇಶದಿಂದ ಕೂಡ ಬರುತ್ತಾರೆ. ವೀಕೆಂಡ್ನಲ್ಲಂತೂ ಪ್ರವಾಸಿಗರ ಜಾತ್ರೆಯೆ ನೆರೆದಿರುತ್ತೆ. ಮುಳ್ಳಯ್ಯನಗಿರಿ ಸೇರಿದಂತೆ ಚಂದ್ರದ್ರೋಣ ಪರ್ವತ ತಲುಪಬೇಕಾದರೆ ಪ್ರವಾಸಿಗರು ಸಾಲು ಸಾಲು ಸವಾಲನ್ನು ಎದುರಿಸಬೇಕಾಗಿದೆ. ಸಾವಿರಾರು ಅಡಿ ಎತ್ತರದ ಮೇಲಿರುವ ಶಿಖರದ ರಸ್ತೆಯಲ್ಲಿ ಸಂಚರಿಸಬೇಕಾದರೆ ಪ್ರವಾಸಿಗರು ಜೀವವನ್ನು ಕೈಯಲ್ಲಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಡೆಗೋಡೆಗಳೆ ಇಲ್ಲದ ಸಾವಿರಾರು ಅಡಿ ಪ್ರಪಾತದ ರಸ್ತೆಯಲ್ಲಿ ಜೀವದ ಹಂಗನ್ನ ತೊರೆದು ಪ್ರವಾಸಿಗರು ಸಂಚರಿಸುತ್ತಿದ್ದಾರೆ.
ನೂರಾರು ಅಡಿ ಪ್ರಪಾತದಿಂದ ಉರುಳುತ್ತಿರುವ ಪ್ರವಾಸಿಗರ ವಾಹನಗಳು
ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಾನವಾದ ಚಂದ್ರದ್ರೋಣ ಪರ್ವತ ಮತ್ತು ಮುಳ್ಳಯ್ಯನಗಿರಿ ಶಿಖರಗಳಿಗೆ ಪ್ರವಾಸಿಗರು ಆಗಮಿಸುತ್ತಿದ್ದು, ಚಿಕ್ಕಮಗಳೂರು ಜಿಲ್ಲಾಡಳಿತ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಸಾವಿರ ಅಡಿ ಎತ್ತರದ ರಸ್ತೆಗಳಲ್ಲಿ ಪ್ರವಾಸಿಗರು ವಾಹನ ಚಾಲನೆ ಮಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೇಕಾಬಿಟ್ಟಿಯಾಗಿ ತಡೆಗೋಡೆಗಳನ್ನು ಕೆಲವು ಭಾಗದಲ್ಲಿ ನಿರ್ಮಿಸಿದ್ದು, ಇನ್ನುಳಿದಂತೆ ತಡೆಗೋಡೆಗಳನ್ನು ನಿರ್ಮಿಸಿಲ್ಲ. ಇದರಿಂದ ಕಳೆದ ಮೂರು ದಿನದ ಹಿಂದೆ ಮೈಸೂರು ಮೂಲದ ಪ್ರವಾಸಿಗರಿದ್ದ ಕಾರು 230 ಅಡಿ ಆಳದ ಪ್ರಪಾತಕ್ಕೆ ಉರುಳಿ, ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯವಾಗಿದ್ರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ನಿತ್ಯವೂ ಪ್ರವಾಸಿ ವಾಹನಗಳ ಅಪಘಾತ ಸಂಭವಿಸುತ್ತಾ ಇದ್ರು, ಜಿಲ್ಲಾಡಳಿತ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ.
ಮುಳ್ಳಯ್ಯನಗಿರಿ ಮತ್ತು ಚಂದ್ರದ್ರೋಣ ಪರ್ವತದ ರಸ್ತೆಯ ಕಾಮಗಾರಿಗಾಗಿ ಕೋಟ್ಯಾಂತರ ರೂಪಾಯಿ ಹಣವನ್ನ ಖರ್ಚು ಮಾಡಲಾಗಿದೆ. ತಡೆಗೋಡೆಗಳೇ ಇಲ್ಲದ ರಸ್ತೆಯಲ್ಲಿ ಪ್ರವಾಸಿಗರು ವಾಹನ ಚಲಾಯಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು. ಒಂದು ಕ್ಷಣ ಚಾಲಕ ಮೈ ಮರೆತರೂ ನೂರಾರು ಅಡಿ ಪ್ರಪಾತಕ್ಕೆ ವಾಹನಗಳು ಉರುಳುತ್ತವೆ. ನಿರಂತರವಾಗಿ ಸ್ಥಳೀಯರು, ಪ್ರವಾಸಿಗರು ರಸ್ತೆಯಲ್ಲಿ ತಡೆಗೋಡೆಗಳನ್ನು ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ರು, ಯಾವುದೇ ಪ್ರಯೋಜನವಾಗಿಲ್ಲ. ಇನ್ನಷ್ಟು ಜೀವಗಳು ಹೋಗುವ ಮುನ್ನ ಜಿಲ್ಲಾಡಳಿತ ಇತ್ತ ಗಮನಹರಿಸಿ ತಡೆಗೋಡೆಗಳನ್ನ ನಿರ್ಮಿಸಬೇಕಿದೆ.
ವರದಿ: ಅಶ್ವಿತ್ ಟಿವಿ9 ಚಿಕ್ಕಮಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ