ರಾಜ್ಯದ ಅತಿ ಎತ್ತರದ ಮುಳ್ಳಯ್ಯನಗಿರಿಗೆ, ಹಸಿರು ಸಿರಿಯನ್ನೇ ಹೊದ್ದು ಮಲಗಿರೋ ದತ್ತಪೀಠಕ್ಕೆ ನೋ ಎಂಟ್ರಿ! 4 ದಿನ ನಿರ್ಬಂಧ ಯಾಕೆ?

ತಣ್ಣನೆಯ ಗಾಳಿ.. ಮೈಗೆ ಮುತ್ತಿಕ್ಕುವ ಚಳಿ.. ಬೆಳ್ಳಿ ಚಪ್ಪರ ಹೊದ್ದು ನಿಂತಿರುವ ಗಿರಿಶಿಖರ.. ಹಸಿರು ಸೀರೆ ತೊಟ್ಟು ಪ್ರಕೃತಿ ಮಾತೆ ಕಂಗೊಳಿಸ್ತಿದ್ರೆ, ಆ ರಮಣೀಯ ದೃಶ್ಯ ನೋಡಲು ಎರಡು ಕಣ್ಣು ಸಾಲದು. ಇಂಥಾ ಪ್ರಕೃತಿ ವಿಸ್ಮಯ, ಸೊಬಗಿನ ರಾಣಿಯೇ ಚಿಕ್ಕಮಗಳೂರು. ಪ್ರವಾಸಿಗರ ಪಾಲಿನ ಸ್ವರ್ಗ.. ಆದ್ರೀಗ ಆ ಪ್ರವಾಸಿಗರ ಪಾಲಿನ ಸ್ವರ್ಗದ ಬಾಗಿಲು ಬಂದ್ ಆಗಿದೆ.

ರಾಜ್ಯದ ಅತಿ ಎತ್ತರದ ಮುಳ್ಳಯ್ಯನಗಿರಿಗೆ, ಹಸಿರು ಸಿರಿಯನ್ನೇ ಹೊದ್ದು ಮಲಗಿರೋ ದತ್ತಪೀಠಕ್ಕೆ ನೋ ಎಂಟ್ರಿ! 4 ದಿನ ನಿರ್ಬಂಧ ಯಾಕೆ?
ರಾಜ್ಯದ ಅತಿ ಎತ್ತರದ ಮುಳ್ಳಯ್ಯನಗಿರಿಗೆ, ಹಸಿರು ಸಿರಿಯನ್ನೇ ಹೊದ್ದು ಮಲಗಿರೋ ದತ್ತಪೀಠಕ್ಕೆ ನೋ ಎಂಟ್ರಿ! ನಾಲ್ಕು ದಿನ ನಿರ್ಬಂಧ ಯಾಕೆ?
TV9kannada Web Team

| Edited By: Ayesha Banu

Dec 16, 2021 | 12:19 PM

ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಯಾರಿಗ್ ತಾನೇ ಇಷ್ಟ ಇಲ್ಲಾ ಹೇಳಿ. ಅಲ್ಲಿಯ ಗಿರಿ ಶಿಖರಗಳು, ಮೈದುಂಬಿ ಹರಿಯೋ ನದಿ-ಜಲಪಾತಗಳು, ಸ್ವಚ್ಛಂದ ಗಾಳಿ, ಸುಂದರ ಕಾಫಿತೋಟಗಳು. ಈ ಬ್ಯೂಟಿಗೆ ಬೋಲ್ಡ್ ಆಗಿರೋ ಪ್ರವಾಸಿಗರು ವೀಕ್ ಡೇಸ್, ವೀಕೆಂಡ್ನಲ್ಲೂ ಕಾಫಿನಾಡಿನತ್ತ ಮುಖ ಮಾಡ್ತಾರೆ. ಆದ್ರೆ ಇನ್ ನಾಲ್ಕು ದಿನ ನೀವು ಕಾಫಿನಾಡಿಗೆ ಹೋಗೋ ಹಾಗಿಲ್ಲ, ಅದ್ರಲ್ಲೂ ಮುಳ್ಳಯ್ಯನಗಿರಿ, ದತ್ತಪೀಠದ ಕಡೆಗೆ ಅಪ್ಪಿ ತಪ್ಪಿಯೂ ಮುಖ ಮಾಡಂಗಿಲ್ಲ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಜಯಂತಿ ನಡೀತಿದೆ. ಹೀಗಾಗಿ, ಕಾಫಿನಾಡಿನ ಮುಕುಟಮಣಿ ಅಂತಾನೇ ಫೇಮಸ್ ಆಗಿರೋ ಮುಳ್ಳಯ್ಯನಗಿರಿ, ದತ್ತಪೀಠದ ದರ್ಶನದ ಬಾಗಿಲು ಬಂದ್ ಮಾಡಲಾಗಿದೆ. ಡಿಸೆಂಬರ್ 16ರಿಂದ 19ರವರೆಗೆ ಅಂದ್ರೆ ನಾಲ್ಕು ದಿನ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಆದ್ರೆ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನಹಳ್ಳ, ಮಾಣಿಕ್ಯಧಾರ ಪ್ರವಾಸಿ ತಾಣಗಳಿಗೆ ಬರದಂತೆ ಡಿಸಿ ಆದೇಶ ಹೊರಡಿಸಿದ್ದಾರೆ.

chikmagalur tourist

ಮುಳ್ಳಯ್ಯನಗಿರಿ

ಡಿಸೆಂಬರ್ ತಿಂಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಾಫಿ ನಾಡಿನ ಕಡೆ ಬರ್ತಾರೆ. ಪ್ರಕೃತಿ ಸೌಂದರ್ಯ ಸವಿದು ಎಂಜಾಯ್ ಮಾಡ್ತಾರೆ. ಡಿಸೆಂಬರ್ 17ರಂದು ಚಿಕ್ಕಮಗಳೂರು ನಗರದಲ್ಲೇ ಸಾವಿರಾರು ಮಹಿಳೆಯರಿಂದ ಅನುಸೂಯ ಜಯಂತಿ ಕಾರ್ಯಕ್ರಮ, 18ರಂದು ಸುಮಾರು 20 ಸಾವಿರ ಜನರಿಂದ ಚಿಕ್ಕಮಗಳೂರು ನಗರದಲ್ಲೇ ಬೃಹತ್ ಶೋಭಾಯಾತ್ರೆ, 19ರಂದು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ದತ್ತಪೀಠಕ್ಕೆ ಆಗಮಿಸಿ ದತ್ತಾತ್ರೇಯನ ದರ್ಶನ ಮಾಡಲಿದ್ದಾರೆ. ಈಗಾಗಲೇ ದತ್ತಪೀಠದ ಉಮೇದುವಾರಿಕೆ ಕುರಿತಂತೆ ಹಿಂದೂ-ಮುಸ್ಲಿಂ ಧರ್ಮದವರು ಕೋರ್ಟಿಗೆ ದಾವೆ ಹಾಕಿಕೊಂಡಿರುವುದರಿಂದ ಖಾಕಿ ಕೂಡ ಹೆಚ್ಚಿನ ಅಲರ್ಟ್ ಆಗಿದೆ. ಈಗಾಗಲೇ ಚಿಕ್ಕಮಗಳೂರು ನಗರದಲ್ಲಿ ಸಾವಿರಕ್ಕೂ ಅಧಿಕ ಪೊಲೀಸರು ಪರೇಡ್ ನಡೆಸಿ ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರಿಕೆ ವಹಿಸಿದೆ. ಮೂವರು ಅಡಿಷನಲ್ ಎಸ್ಪಿ, ಹನ್ನೊಂದು ಡಿವೈಎಸ್ಪಿ, 31 ಸರ್ಕಲ್ ಇನ್ಸ್ ಪೆಕ್ಟರ್, 141 ಸಬ್ ಇನ್ಸ್ ಪೆಕ್ಟರ್, 171 ಎಎಸ್ಐ ಸೇರಿದಂತೆ 3 ಸಾವಿರ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ.

ದತ್ತಜಯಂತಿ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಯುವಕರು ಚಿಕ್ಕಮಗಳೂರು ನಗರವನ್ನ ಈಗಾಗಲೇ ಕೇಸರಿಕರಣಗೊಳಿಸಿದ್ದಾರೆ. ಇನ್ನೂ ನಾಲ್ಕು ದಿನಗಳ ಕಾಲ ಕಾಫಿನಾಡಲ್ಲಿ ಒಂದು ರೀತಿಯಾಗಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್ 19ರಂದು ರಾಜ್ಯದ ಸಾವಿರಾರು ಭಕ್ತರು ದತ್ತಪೀಠಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲಾಡಳಿತ ಇಂದಿನಿಂದ (ಡಿ 16)ನಾಲ್ಕು ದಿನಗಳ ಕಾಲ ಪ್ರವಾಸಿಗರಿಗೆ ಬ್ರೇಕ್ ಹಾಕಿದ್ದು, ಯಾರಾದ್ರೂ ಬರೋ ಪ್ಲಾನ್ ಇದ್ರೆ ಈಗಲೇ ಎಚ್ಚೆತ್ತುಕೊಂಡ್ರೆ ಒಳ್ಳೇದು.

ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು

ಇದನ್ನೂ ಓದಿ: ಯಾದಗಿರಿಯಲ್ಲಿ ಅಕ್ರಮವಾಗಿ ಮಾರಲು ಮುಂದಾಗಿದ್ದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಜಪ್ತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada