ಚಿಕ್ಕಮಗಳೂರು: ನೂರಾರು ವರ್ಷಗಳ ಹಿಂದಿನ ಮರಗಳಿಗೆ ಮರುಜೀವ; ನಗರಸಭೆ ಕಾರ್ಯಕ್ಕೆ ಪರಿಸರ ಪ್ರೇಮಿಗಳಿಂದ ಮೆಚ್ಚುಗೆ

ಒಂದಷ್ಟು ಅಪರೂಪದ ಜಾತಿಯ ಮರಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ನಗರಸಭೆಯ ಆಯುಕ್ತರು ತೀರ್ಮಾನಿಸಿ ಅವುಗಳನ್ನು ಮತ್ತೆ ಬೆಳೆಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ರಸ್ತೆ ಅಗಲೀಕರಣ ವೇಳೆ ನೂರಾರು ವರ್ಷಗಳ ಕಾಲ ಜನರಿಗೆ ನೆರಳಾಗಿದ್ದ ಮರಗಳನ್ನು ಬುಡಸಮೇತವಾಗಿ ಆ ಸ್ಥಳದಿಂದ ತಂದು ಬೇರೆ ಸ್ಥಳಗಳಲ್ಲಿ ಚಿಗುರೊಡೆಸುವ ವಿನೂತನ ಕೆಲಸಕ್ಕೆ ಮುಂದಾಗಿದ್ದಾರೆ.

ಚಿಕ್ಕಮಗಳೂರು: ನೂರಾರು ವರ್ಷಗಳ ಹಿಂದಿನ ಮರಗಳಿಗೆ ಮರುಜೀವ; ನಗರಸಭೆ ಕಾರ್ಯಕ್ಕೆ ಪರಿಸರ ಪ್ರೇಮಿಗಳಿಂದ ಮೆಚ್ಚುಗೆ
ಮರಗಳನ್ನು ಬುಡಸಮೇತವಾಗಿ ಆ ಸ್ಥಳದಿಂದ ತಂದು ಬೇರೆ ಸ್ಥಳಗಳಲ್ಲಿ ಚಿಗುರೊಡೆಸುವ ವಿನೂತನ ಕೆಲಸ
Follow us
TV9 Web
| Updated By: preethi shettigar

Updated on:Dec 22, 2021 | 12:29 PM

ಚಿಕ್ಕಮಗಳೂರು: ಅಭಿವೃದ್ಧಿ, ರಸ್ತೆ ಅಗಲೀಕರಣ ನೆಪದಲ್ಲಿ ಎಲ್ಲೆಡೆ ಮರಗಳ ಹನನ ನಡೆಯುತ್ತಿದೆ. ನಮ್ಮ ಬದುಕಿಗೆ ಬೆಳಕಾಗಿ, ನೆರಳಾಗಿದ್ದ ಮರಗಳನ್ನು ಯಾವುದೇ ಕರುಣೆ ತೋರದೇ ಕಡಿದು ಹಾಕಲಾಗುತ್ತಿದೆ. ಈ ಮಧ್ಯೆ ಕಾಫಿನಾಡಿನಲ್ಲಿ ನೂರಾರು ವರ್ಷಗಳ ಕಾಲ ಬದುಕಿ ಬಾಳಿದ್ದ ಮರಗಳಿಗೆ ಮರುಜೀವ ಕೊಡುವ ಕೆಲಸ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಈ ರೀತಿಯ ವಿನೂತನ ಮಾದರಿ ಕಾರ್ಯ ನಡೆಯುತ್ತಿದ್ದು, ಪರಿಸರ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ನಗರದ ಕಲ್ಯಾಣನಗರದ ಪಾರ್ಕ್​ನಲ್ಲಿರುವ ಮರಗಳನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ನಿನ್ನೆ-ಮೊನ್ನೆಯವರೆಗೂ ಈ ಮರಗಳನ್ನು ನಾವು ನೋಡೇ ಇರಲಿಲ್ಲ. ಇದೀಗ ಇಷ್ಟು ದೊಡ್ಡ ಮರಗಳು ಒಮ್ಮಿಂದ ಒಮ್ಮೇಲೆ ಹೇಗೆ ಹುಟ್ಟಿಕೊಂಡವು ಎನ್ನುವ ಅನುಮಾನ ಜನರನ್ನು ಕಾಡುತ್ತಿದೆ. ಅದು ಕೂಡ ನೂರಾರು ವರ್ಷಗಳ ಹಳೆಯ ಮರಗಳು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹೇಗೆ ಪಾರ್ಕ್​ನಲ್ಲಿ ಬೆಳೆದವು ಎನ್ನುವ ಪ್ರಶ್ನೆ ಜನರಲ್ಲಿ ಎದ್ದಿದೆ. ಅಷ್ಟಕ್ಕೂ ಈ ಮರಗಳು ಇಲ್ಲಿ ಬೆಳೆದಿದ್ದಲ್ಲ, ನೂರಕ್ಕೂ ಹೆಚ್ಚು ಕಾಲ ತಾವು ನೆಲೆ ಕಳೆದುಕೊಂಡಿದ್ದ ಜಾಗವನ್ನು ಜನರು ಓಡಾಡುವ ರಸ್ತೆಗೆ ಬಿಟ್ಟುಕೊಟ್ಟು, ಇಲ್ಲಿ ಬಂದು ಮರುಜನ್ಮವನ್ನು ಪಡೆದುಕೊಂಡಿದೆ.

ಹೌದು, ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಹತ್ತಾರು ಮರಗಳು ರಸ್ತೆ ಅಗಲೀಕರಣ ನೆಪದಲ್ಲಿ ಬಲಿಯಾಗಿದೆ. ಆದರೆ ಒಂದಷ್ಟು ಅಪರೂಪದ ಜಾತಿಯ ಮರಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ನಗರಸಭೆಯ ಆಯುಕ್ತರು ತೀರ್ಮಾನಿಸಿ ಅವುಗಳನ್ನು ಮತ್ತೆ ಬೆಳೆಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ರಸ್ತೆ ಅಗಲೀಕರಣ ವೇಳೆ ನೂರಾರು ವರ್ಷಗಳ ಕಾಲ ಜನರಿಗೆ ನೆರಳಾಗಿದ್ದ ಮರಗಳನ್ನು ಬುಡಸಮೇತವಾಗಿ ಆ ಸ್ಥಳದಿಂದ ತಂದು ಬೇರೆ ಸ್ಥಳಗಳಲ್ಲಿ ಚಿಗುರೊಡೆಸುವ ವಿನೂತನ ಕೆಲಸಕ್ಕೆ ಮುಂದಾಗಿದ್ದಾರೆ.

ಚಿಕ್ಕಮಗಳೂರು ನಗರದ ಕಲ್ಯಾಣನಗರ, ಡಿಎಆರ್ ಗ್ರೌಂಡ್, ರಾಮನಹಳ್ಳಿಯಲ್ಲಿ ಈ ರೀತಿ ಬೃಹತ್ ಮರಗಳನ್ನು ರೀ ಪ್ಲಾಂಟೇಶನ್ ಮಾಡುವುದಕ್ಕೆ ನಗರಸಭೆ ಮುಂದಾಗಿದೆ. ಈಗಾಗಲೇ ಅರ್ಧದಷ್ಟು ಕೆಲಸವನ್ನು ಕೂಡ ಮಾಡಿ ಮುಗಿಸಿದೆ. ಮರಗಳನ್ನು ಮೂಲ ಸ್ಥಳದಿಂದ ಸ್ಥಳಾಂತರ ಮಾಡುವ ವೇಳೆ ತಮಿಳುನಾಡಿನಿಂದಲೇ ಪರಿಣಿತ ತಜ್ಞರನ್ನು ಕರೆಯಿಸಿ ಬುಡಸಮೇತ ಮೇಲೆತ್ತಿದ್ದ ಮರಗಳನ್ನು ನೆಡಲಾಗಿದೆ.  ಈ ವಿನೂತನ ಕಾರ್ಯಕ್ಕೆ ಜನಸಾಮಾನ್ಯರು, ಪರಿಸರ ಪ್ರೇಮಿಗಳಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ ಎಂದು ನಗರಸಭೆ ಆಯುಕ್ತ ಬಸವರಾಜ್ ಹೇಳಿದ್ದಾರೆ.

ಒಂದು ಗಿಡವನ್ನು ನೀರೂಣಿಸಿ ಮಳೆ, ಗಾಳಿ, ಬಿಸಿಲಿನಿಂದ ಕಾಪಾಡಿಕೊಂಡು ಬೆಳೆಸುವುದು ನಿಜಕ್ಕೂ ಕೂಡ ದೊಡ್ಡ ಸವಾಲೇ ಸರಿ. ಅಂತದರಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ನಮಗೆ ನೆರಳು ನೀಡಿ ಆಶ್ರಯ ನೀಡಿದ್ದ ಅದೆಷ್ಟೋ ಮರಗಳನ್ನು ನಾವು ಕಡಿಯುತ್ತಿರುವುದು ನಿಜಕ್ಕೂ ದುರಂತವೇ ಸರಿ. ಈ ನಡುವೆ ಒಂದಷ್ಟು ಮರಗಳನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಕೈ ಹಾಕಿರುವ ಚಿಕ್ಕಮಗಳೂರು ನಗರಸಭೆ ಕಾರ್ಯ ನಿಜಕ್ಕೂ ಶ್ಲಾಘನೀಯವೇ ಸರಿ.

ಇದನ್ನೂ ಓದಿ: ಉಡುಪಿ: ಮೌಢ್ಯದ ಹೆಸರಿನಲ್ಲಿ ಶ್ರೀತಾಳೆ ಮರ ಕಡಿಯಲು ಮುಂದಾದ ಗ್ರಾಮಸ್ಥರು; ಪರಿಸರ ಪ್ರಿಯರಿಂದ ಆಕ್ರೋಶ

ಶಿವಮೊಗ್ಗ: ಉದ್ಯಾನವನಕ್ಕೆ ಪುನೀತ್ ಹೆಸರು; ಪಾರ್ಕ್​ನಲ್ಲಿ ಗಿಡ ನೆಡುವ ಮೂಲಕ ಅಪ್ಪು ನಮನ ಕಾರ್ಯಕ್ರಮಕ್ಕೆ ಚಾಲನೆ

Published On - 12:25 pm, Wed, 22 December 21