
ಬೆಂಗಳೂರು/ಚಿಕ್ಕಮಗಳೂರು, ನವೆಂಬರ್ 25: 2023ರ ವಿಧಾನಸಭೆ ಚುನಾವಣೆಯ ವೇಳೆ ಅಂಚೆ ಮತಪತ್ರಗಳನ್ನು ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ ಶೃಂಗೇರಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಡಿ.ಎನ್. ಜೀವರಾಜ್, ಚಿಕ್ಕಮಗಳೂರಿನ ಮಾಜಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮತ್ತು ಚುನಾವಣಾಧಿಕಾರಿ ವೇದಮೂರ್ತಿ ಟಿ.ಆರ್. ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಮೂಲ ಮತ ಎಣಿಕೆ ನಡೆದ ಸುಮಾರು ಮೂರು ವರ್ಷಗಳ ಬಳಿಕ ದೂರು ದಾಖಲಿಸಿರುವುದಕ್ಕೆ ಸೂಕ್ತ ಕಾರಣ ನೀಡದಿರುವುದು ಹಾಗೂ ಚುನಾವಣಾ ವಿವಾದದಲ್ಲಿ ನಡೆದಿರುವ ಬೆಳವಣಿಗೆಗಳನ್ನು ಪರಿಗಣಿಸಿದಾಗ ಕ್ರಿಮಿನಲ್ ವಿಚಾರಣೆ ಮುಂದುವರಿಸುವುದು ಸಮರ್ಥನೀಯವಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.
ಮರು ಎಣಿಕೆಯ ಬಳಿಕ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಅಭ್ಯರ್ಥಿಯೊಬ್ಬರು ಸೋತು, ಆರೋಪಿ ನಂಬರ್ 2 ಗೆಲುವು ಸಾಧಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಪೊಲೀಸರಿಂದ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಸಾಧ್ಯವಿಲ್ಲ. ನಿಸ್ಸಂದೇಹವಾಗಿ ಇದು ವಿಳಂಬದ ಕಾರಣದಿಂದ ಅನೂರ್ಜಿತವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಆರೋಪಿಗಳು ಸಲ್ಲಿಸಿದ್ದ ಮೂರು ಅರ್ಜಿಗಳನ್ನು ಪುರಸ್ಕರಿಸಿದ ಹೈಕೋರ್ಟ್, ಚಿಕ್ಕಮಗಳೂರು ಟೌನ್ ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್‌ಗಳಾದ 143, 465, 468, 471, 120B ಮತ್ತು 149 ಹಾಗೂ ಜನಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 136ರ ಅಡಿಯಲ್ಲಿ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ.
ಇದನ್ನೂ ಓದಿ: ಅಂಚೆ ಮತಪತ್ರ ತಿದ್ದುಪಡಿ ಆರೋಪ: ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧದ ಕೇಸ್ಗೆ ತಾತ್ಕಾಲಿಕ ತಡೆ
2023ರ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ವಿರುದ್ಧ ಜೀವರಾಜ್ ಸ್ಪರ್ಧಿಸಿದ್ದರು. 2023ರ ಮೇ 13ರಂದು ನಡೆದ ಮತ ಎಣಿಕೆಯ ಬಳಿಕ ರಾಜೇಗೌಡ ಅವರು ವಿಜೇತರೆಂದು ಘೋಷಿಸಲಾಗಿತ್ತು. ಈ ವೇಳೆ 279 ಅಂಚೆ ಮತಪತ್ರಗಳನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ವರ್ಷದ ಏಪ್ರಿಲ್ 6ರಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ತಿರಸ್ಕೃತಗೊಂಡಿದ್ದ 279 ಅಂಚೆ ಮತಪತ್ರಗಳನ್ನು ಮರುಪರಿಶೀಲಿಸುವಂತೆ ಹಾಗೂ ಎಲ್ಲ ಅಂಚೆ ಮತಪತ್ರಗಳ ಮರು ಎಣಿಕೆ ನಡೆಸುವಂತೆ ಚುನಾವಣಾಧಿಕಾರಿಗೆ ಆದೇಶಿಸಿತ್ತು. ಅದರಂತೆ ಮೇ 2ರಂದು ಮರುಪರಿಶೀಲನೆ ಮತ್ತು ಮರು ಎಣಿಕೆ ನಡೆದ ಬಳಿಕ ಜೀವರಾಜ್ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.
ಇದಾದ ಮರುದಿನವೇ ರಾಜೇಗೌಡ ಅವರ ಚುನಾವಣಾ ಏಜೆಂಟ್ ಹಾಗೂ ಅಧಿಕೃತ ಪ್ರತಿನಿಧಿ ಸುಧೀರ್ ಕುಮಾರ್ ಮುರೊಳ್ಳಿ ಅವರು ದೂರು ದಾಖಲಿಸಿದ್ದರು. 2023ರಲ್ಲಿ ನಡೆದ ಮೂಲ ಮತ ಎಣಿಕೆಯ ಬಳಿಕ ಅಂಚೆ ಮತಪತ್ರಗಳನ್ನು ತಿರುಚಲಾಗಿದೆ ಎಂದು ಅವರು ಆರೋಪಿಸಿದ್ದರು. ರಾಜೇಗೌಡ ಪರವಾಗಿ ಎಣಿಕೆ ಮಾಡಲಾಗಿದ್ದ ಕೆಲವು ಮತಪತ್ರಗಳಲ್ಲಿ ನಂತರ ಎರಡು ಅಥವಾ ಅದಕ್ಕಿಂತ ಹೆಚ್ಚು ಗುರುತುಗಳು ಕಂಡುಬಂದಿವೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಮತಪೆಟ್ಟಿಗೆಗಳ ಸೀಲ್‌ಗಳನ್ನು ತೆಗೆದು, ಅಂಚೆ ಮತಪತ್ರಗಳನ್ನು ತಿರುಚುವ ಮೂಲಕ ಚುನಾವಣೆಯಲ್ಲಿ ಅನುಕೂಲ ಪಡೆಯಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ಇದನ್ನು ಪ್ರಶ್ನಿಸಿ ಜೀವರಾಜ್ ಸೇರಿದಂತೆ ಮೂವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮೂಲ ಮತ ಎಣಿಕೆ ನಡೆದ ಸುಮಾರು ಮೂರು ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವಿಚಾರಗಳನ್ನು ಮತ್ತೆ ಕೆದಕುವ ಉದ್ದೇಶದಿಂದ ಈ ದೂರು ದಾಖಲಿಸಲಾಗಿದೆ ಎಂದು ಅವರು ವಾದಿಸಿದ್ದರು. ಚುನಾವಣಾ ತಕರಾರು ಅರ್ಜಿಯ ಫಲಿತಾಂಶವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದೂ ಆರೋಪಿಗಳು ವಾದಿಸಿದ್ದರು. ಜನಪ್ರತಿನಿಧಿ ಕಾಯ್ದೆಯಡಿ ಬರುವ ಅಪರಾಧಗಳಿಗೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿ ಅಥವಾ ಚುನಾವಣಾ ಏಜೆಂಟ್ ದೂರು ದಾಖಲಿಸಲು ಅವಕಾಶವಿಲ್ಲ ಎಂಬ ಆರೋಪಿಗಳ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ. ಸೂಕ್ತ ಸಂದರ್ಭಗಳಲ್ಲಿ ಖಾಸಗಿ ವ್ಯಕ್ತಿಯೂ ದೂರು ದಾಖಲಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆದರೆ, ದೂರು ದಾಖಲಿಸುವಲ್ಲಿ ಉಂಟಾಗಿರುವ ವಿಳಂಬದ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. 2023ರ ಮೇ ತಿಂಗಳಲ್ಲೇ ಮೂಲ ಮತ ಎಣಿಕೆ ನಡೆದಿದ್ದು, ಆನಂತರ ಚುನಾವಣಾ ತಕರಾರು ಅರ್ಜಿಯ ಮೂಲಕ ವಿವಾದವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು ಎಂದು ಹೇಳಿದೆ. ಈ ವಿಚಾರಣೆ ವೇಳೆ ಮತಪತ್ರಗಳನ್ನು ಸಂರಕ್ಷಿಸಿಡುವಂತೆಯೂ ಜೀವರಾಜ್ ಮನವಿ ಮಾಡಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿದೆ. 2023ರಲ್ಲೇ ಅಂಚೆ ಮತಪತ್ರಗಳ ಎಣಿಕೆ ಅಥವಾ ನಿರ್ವಹಣೆಯ ಬಗ್ಗೆ ದೂರುದಾರರಿಗೆ ಅನುಮಾನಗಳಿದ್ದರೆ, ಆಗಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಯಾವುದೇ ಅಡ್ಡಿ ಇರಲಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೇವಲ ವಿಳಂಬವಾಗಿದೆ ಎಂಬ ಕಾರಣಕ್ಕೆ ಎಲ್ಲ ಸಂದರ್ಭಗಳಲ್ಲೂ ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಆದರೆ, ವಿಳಂಬದ ಜೊತೆಗೆ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿರುವ ಲಕ್ಷಣಗಳು ಕಂಡುಬಂದರೆ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸಬಹುದು ಎಂದು ಹೈಕೋರ್ಟ್ ಹೇಳಿದೆ. ಜೀವರಾಜ್ ಮತ್ತು ರಮೇಶ್ ಪರವಾಗಿ ಹಿರಿಯ ವಕೀಲರಾದ ಎಂ.ಎಸ್. ಶ್ಯಾಮ್ ಸುಂದರ್ ಹಾಗೂ ಅಶೋಕ್ ಹರನಹಳ್ಳಿ ವಾದ ಮಂಡಿಸಿದ್ದರು. ದೂರುದಾರರ ಪರವಾಗಿ ಹಿರಿಯ ವಕೀಲರಾದ ಉದಯ ಹೊಳ್ಳ ಮತ್ತು ಕೆ.ಎನ್. ಫಣೀಂದ್ರ ವಾದ ಮಂಡಿಸಿದ್ದರು.
ಮತ್ತೊಂದೆಡೆ, ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಚುನಾವಣಾ ತಕರಾರು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ವಿಚಾರಣೆಯಲ್ಲಿದೆ. ಜೀವರಾಜ್ ಅವರ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜೇಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ಅವರೇ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂದು ಮೇ 11ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:47 pm, Wed, 25 November 26