
ಚಿಕ್ಕಮಗಳೂರು, (ಮೇ 01): ಶೃಂಗೇರಿ ವಿಧಾನಸಭಾ ಕ್ಷೇತ್ರದ (sringeri assembly constituency) 2023ರ ಚುನಾವಣೆಗೆ ಸಂಬಂಧಿಸಿದ ಅಂಚೆ ಮತಗಳ (postal Ballot) ಮರು ಎಣಿಕೆ ಕಾರ್ಯಕ್ಕೆ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತವು ಸಂಪೂರ್ಣ ಸಿದ್ಧತೆಗಳನ್ನು ಕೈಗೊಂಡಿದೆ. ಮೇ 2ರಂದು ಬೆಳಗ್ಗೆ 9 ಗಂಟೆಗೆ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಮೊದಲ ಮಹಡಿಯಲ್ಲಿ ಅಂಚೆ ಮತಪತ್ರಗಳ ಪರಿಶೀಲನೆ ಮತ್ತು ಮರು ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಇದಕ್ಕೆ ಜಿಲ್ಲಾಡಳಿತ ಸಹ ಸಕಲ ಸಿದ್ಧತೆ ಕೈಗೊಂಡಿದೆ. ಒಟ್ಟು 1822 ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಮೇ 2ರ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯ ವರೆಗೂ ಮತ ಎಣಿಕೆ ಕೇಂದ್ರದ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಮೊದಲ ಮಹಡಿಯಲ್ಲಿ ಅಂಚೆ ಮತ ಮರು ಎಣಿಕೆ ನಡೆಯಲಿದ್ದು, ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ಮದ್ಯ ಮಾರಾಟ ಸಂಪೂರ್ಣ ಬಂದ್ ಇರಲಿದೆ. ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಸಂಪೂರ್ಣ ತಡೆ ವಿಧಿಸಲಾಗಿದ್ದು, ವಿಜಯೋತ್ಸವ, ಘೋಷಣೆ ಕೂಗು ಹಾಗೂ ಧ್ವನಿವರ್ಧಕಗಳ ಬಳಕೆಗೂ ನಿಷೇಧ ಹೇರಲಾಗಿದೆ. ಸಾರ್ವಜನಿಕ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೈಬರ್ ಕಫೆ ಹಾಗೂ ಝರಾಕ್ಸ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಲಾಗಿದೆ.
ಅಂಚೆ ಮತ ಎಣಿಕೆ ಪ್ರಕ್ರಿಯೆಗಾಗಿ ಒಬ್ಬ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ, ಇಬ್ಬರು ಎಣಿಕೆ ಸಹಾಯಕರು, ಒಬ್ಬ ಮೇಲ್ವಿಚಾರಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್ ಸೇರಿದಂತೆ ಆರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ, ಸ್ಟ್ರಾಂಗ್ ರೂಂನಿಂದ ಮತಪತ್ರಗಳನ್ನು ಎಣಿಕಾ ಕೇಂದ್ರಕ್ಕೆ ಸಾಗಿಸುವುದು ಹಾಗೂ ಕೇಂದ್ರದ ಭದ್ರತೆಗಾಗಿ ಸುಮಾರು 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಒಟ್ಟು 1822 ಅಂಚೆ ಮತಪತ್ರಗಳು ಬಂದಿದ್ದು, ಅವುಗಳಲ್ಲಿ 279 ಮತಪತ್ರಗಳನ್ನು ತಿರಸ್ಕರಿಸಲಾಗಿತ್ತು. ಉಳಿದ 1543 ಮತಪತ್ರಗಳನ್ನು ಅರ್ಹವೆಂದು ಪರಿಗಣಿಸಲಾಗಿತ್ತು. ಈಗ ಮರು ಪರಿಶೀಲನೆಯಲ್ಲಿ ತಿರಸ್ಕೃತ ಮತಗಳಲ್ಲಿ ಕೆಲವು ಮಾನ್ಯವಾಗಿರುವುದು ಕಂಡುಬಂದರೆ, ಅವುಗಳನ್ನು ಕೂಡ ಸೇರಿಸಿ ಮರು ಎಣಿಕೆ ನಡೆಸಲಾಗುತ್ತದೆ.
ಅಂಚೆ ಮತಪತ್ರಗಳ ಪರಿಶೀಲನೆ ವೇಳೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಅಂಚೆ ಮತಪತ್ರದ ಲಕೋಟೆಯನ್ನು ಫಾರಂ 13(ಸಿ) ಎಂದು ಕರೆಯಲಾಗುತ್ತದೆ. ಅದರೊಳಗಿನ ಮತದಾರರ ದೃಢೀಕರಣ ಪತ್ರವನ್ನು ಫಾರಂ 13(ಬಿ) ಎಂದು, ಮತ್ತು ಮತಪತ್ರವನ್ನು ಫಾರಂ 13(ಎ) ಎಂದು ಗುರುತಿಸಲಾಗುತ್ತದೆ. ಫಾರಂ 13(ಬಿ) ಕಡ್ಡಾಯವಾಗಿದ್ದು, ಅದು ಇಲ್ಲದಿದ್ದರೆ ಮತಪತ್ರ ತಿರಸ್ಕೃತವಾಗುತ್ತದೆ. ಅದೇ ರೀತಿ, ಫಾರಂ 13(ಎ)ಯಲ್ಲಿ ಮತದಾರರ ಸಹಿ ಹಾಗೂ ಗಜೆಟೆಡ್ ಅಧಿಕಾರಿಯ ದೃಢೀಕರಣ ಇರಬೇಕು. ಇಲ್ಲದಿದ್ದರೆ ಮತಪತ್ರವನ್ನು ಅಮಾನ್ಯವೆಂದು ಘೋಷಿಸಲಾಗುತ್ತದೆ. ಜೊತೆಗೆ, ದೃಢೀಕರಣ ಪತ್ರದ ಕ್ರಮ ಸಂಖ್ಯೆ ಮತ್ತು ಮತಪತ್ರದ ಸಂಖ್ಯೆಗಳು ಹೊಂದಿಕೆಯಾಗಬೇಕು. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಮತ ಚಲಾಯಿಸಿದರೆ ಅಥವಾ ಸ್ಪಷ್ಟತೆ ಇಲ್ಲದಿದ್ದರೆ, ಅಂತಹ ಮತಪತ್ರಗಳನ್ನೂ ತಿರಸ್ಕರಿಸಲಾಗುತ್ತದೆ.
ಮರು ಎಣಿಕೆಗೆ ಮುನ್ನ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರು ಸ್ಪರ್ಧಿಸಿದ್ದ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ವಿಜೇತ ಶಾಸಕ ರಾಜೇಗೌಡ, ಪರಾಜಿತ ಅಭ್ಯರ್ಥಿ ಡಿ.ಎನ್. ಜೀವರಾಜ್ ಹಾಗೂ ಜೆಡಿಎಸ್ ಅಭ್ಯರ್ಥಿ ಸುಧಾಕರ ಎಸ್. ಶೆಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿಒಟ್ಟು 1811 ಅಂಚೆ ಮತ ಚಲಾವಣೆಯಾಗಿದ್ದವು. ಇದರಲ್ಲಿ279 ಮತಗಳು ತಿರಸ್ಕೃತಗೊಂಡಿದ್ದವು. ಬಳಿಕ 201 ಮತದಿಂದ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಗೆಲುವು ಸಾಧಿಸಿದ್ದರು. ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಮತ ಎಣಿಕೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
2023 ರಲ್ಲಿ ನಡೆದ ಚುನಾವಣೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾಗಿದ್ದ 1,811 ಅಂಚೆ ಮತಗಳ ಪೈಕಿ ತಿರಸ್ಕೃತಗೊಂಡ 279 ಅಂಚೆ ಮತಗಳನ್ನು ಮರು ಪರಿಶೀಲಿಸಿ ನಂತರ ಎಲ್ಲಅಂಚೆ ಮತಗಳನ್ನು ಎಣಿಕೆ ಮಾಡಿ ಹೊಸದಾಗಿ ಫಲಿತಾಂಶ ಪ್ರಕಟಿಸಬೇಕು ಎಂದು ಹೈಕೋರ್ಟ್ ಏ.6ರಂದು ಆದೇಶಿಸಿತ್ತು.
ಶಾಸಕ ಟಿ.ಡಿ.ರಾಜೇಗೌಡ ಅವರ ಮನವಿ ಮೇರೆಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಕೋರ್ಟ್ ಎರಡು ವಾರಗಳ ಕಾಲ ಅವಕಾಶ ನೀಡಿತ್ತು. ಆಕ್ಷೇಪಣೆ ಸಲ್ಲಿಸುವ ಅವಧಿ ಏಪ್ರಿಲ್ 20 ಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿಇದೀಗ ಜಿಲ್ಲಾ ಚುನಾವಣಾಧಿಕಾರಿ ಮತ ಎಣಿಕೆ ಕಾರ್ಯಕ್ಕೆ ಕ್ರಮ ಕೈಗೊಂಡಿದ್ದಾರೆ.