ಪದೇಪದೇ ಗುಡ್ಡ ಕುಸಿತ: ಶೃಂಗೇರಿ-ಮಂಗಳೂರು ರಸ್ತೆ ಸಂಚಾರ ಬಂದ್, ಪರ್ಯಾಯ ಮಾರ್ಗಗಳು ಹೀಗಿವೆ

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆಯಿಂದ ಶೃಂಗೇರಿ ತಾಲೂಕಿನ ನೆಮ್ಮಾರು ಬಳಿಯ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಪದೇಪದೇ ಗುಡ್ಡ ಕುಸಿಯುತ್ತಿದೆ. ಹೀಗಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಪೊಲೀಸರು ಬದಲಿ ಮಾರ್ಗದಲ್ಲಿ ಸಂಚರಿಸಲು ವಾಹನ ಸವಾರರಿಗೆ ಸೂಚಿಸಿದ್ದಾರೆ. ಬದಲಿ ಮಾರ್ಗಗಳು ಯಾವವು ತಿಳಿಯಿರಿ.

ಪದೇಪದೇ ಗುಡ್ಡ ಕುಸಿತ: ಶೃಂಗೇರಿ-ಮಂಗಳೂರು ರಸ್ತೆ ಸಂಚಾರ ಬಂದ್, ಪರ್ಯಾಯ ಮಾರ್ಗಗಳು ಹೀಗಿವೆ
ಗುಡ್ಡ ಕುಸಿತ
Edited By:

Updated on: Jun 15, 2025 | 11:15 AM

ಚಿಕ್ಕಮಗಳೂರು, ಜೂನ್​ 15: ಮಲೆನಾಡು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರಿ ಮಳೆ (Rain) ಮುಂದುವರೆದಿದೆ. ಹಲವೆಡೆ ಅವಾಂತರಗಳು ಸಂಭವಿಸಿವೆ. ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಬಳಿಯ ರಾಷ್ಟ್ರೀಯ ಹೆದ್ದಾರಿ 169ರ ಒಂದೇ ಸ್ಥಳದಲ್ಲಿ ಪದೇಪದೇ ಗುಡ್ಡ ಕುಸಿಯುತ್ತಿದೆ. ಶೃಂಗೇರಿ-ಮಂಗಳೂರು ಮಾರ್ಗದ (Sringeri to Mangaluru) ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಮಂಗಳೂರಿಗೆ ತೆರಳುವ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಪೊಲೀಸರು ಸೂಚನೆ ನೀಡಿದ್ದಾರೆ.

ಶೃಂಗೇರಿ ಟು ಮಂಗಳೂರು ರಸ್ತೆ ಸಂಚಾರ ಬಂದ್

ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ನೆಮ್ಮಾರು ಗ್ರಾಮದ ಬಳಿ ಗುಡ್ಡ ಕುಸಿಯುತ್ತಿರುವುದರಿಂದ ಗುಡ್ಡ ಶೃಂಗೇರಿ ಟು ಮಂಗಳೂರು ರಸ್ತೆ ಸಂಚಾರ ಬಂದ್​ ಆಗಿದೆ. ಜೆಸಿಬಿ ಮೂಲಕ ರಸ್ತೆಗೆ ಅಡ್ಡಲಾಗಿ ಬಿದ್ದ ಮಣ್ಣು ತೆರವು ಕಾರ್ಯಚರಣೆ ನಡೆದಿದ್ದು, ಮಳೆ ಅಡ್ಡಿ ಆಗಿದೆ. ಸದ್ಯ ಶೃಂಗೇರಿ ಠಾಣೆಯ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಬದಲಿ ಮಾರ್ಗಗಳು

ಇನ್ನು ಶಿವಮೊಗ್ಗ, ಶೃಂಗೇರಿ, ನೆಮ್ಮಾರು ಮತ್ತು ಎಸ್​ಕೆ ಬಾರ್ಡರ್ ಮೂಲಕ ಮಂಗಳೂರಿಗೆ ಸಂಪರ್ಕಿಸುವ ರಸ್ತೆ ಸಂಚಾರ ಬಂದ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಬಿದರಗೋಡು, ಆಗುಂಬೆ ಮತ್ತು ಉಡುಪಿ ಮಾರ್ಗವಾಗಿ ಮಂಗಳೂರಿಗೆ ಸಂಚರಿಸಲು ವಾಹನ ಸವಾರರಿಗೆ ಪೊಲೀಸರು ಸೂಚಿಸಿದ್ದಾರೆ.

ಇದನ್ನೂ ಓದಿ
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಚಾರಣಕ್ಕೆ ಹೋಗಿ ಕಾಡಿನಲ್ಲಿ ತಪ್ಪಿಸಿಕೊಂಡ ವಿದ್ಯಾರ್ಥಿಗಳು: ಮುಂದೇನಾಯ್ತು?

ಅಪಾಯದ ಮಟ್ಟ ಮೀರಿ ಭೋರ್ಗರೆಯುತ್ತಿರುವ ಸಿರಿಮನೆ ಜಲಪಾತ

ಧಾರಾಕಾರ ಮಳೆಗೆ ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ ಅಪಾಯದ ಮಟ್ಟ ಮೀರಿ ಮೈದುಂಬಿ ಭೋರ್ಗರೆಯುತ್ತಿದೆ. ಕಲ್ಲು ಬಂಡೆಗಳ ಮೇಲೆ ಜಲಪಾತ ಆರ್ಭಟಿಸುತ್ತಿದೆ. ನೂರಾರು ಅಡಿ‌ ಎತ್ತರದಿಂದ ಜಲಪಾತ ಧುಮ್ಮಿಕ್ಕುತ್ತಿದೆ.

ಮಂಗಳೂರು-ಮೂಡಬಿದ್ರೆ-ಕಾರ್ಕಳ ಸಂಪರ್ಕಿಸುವ ರಸ್ತೆ ಬಂದ್​

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರೆದಿದ್ದು, ಜಿಲ್ಲೆಯ ಹಲವೆಡೆ ಮಳೆಯಿಂದ ಅವಾಂತರಗಳು ಸಂಭವಿಸಿವೆ. ಮಂಗಳೂರು‌ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಗುಡ್ಡ ಮತ್ತೆ ಕುಸಿಯುವ ಆತಂಕ ಉಂಟಾಗಿದೆ. ನಿನ್ನೆ ಗುಡ್ಡ ಕುಸಿದು ಮಂಗಳೂರು-ಮೂಡಬಿದ್ರೆ-ಕಾರ್ಕಳ ಸಂಪರ್ಕಿಸುವ ಒಂದು ಬದಿಯ ರಸ್ತೆ ಸಂಪೂರ್ಣ ಬಂದ್​​ ಆಗಿತ್ತು.

ಇದನ್ನೂ ಓದಿ: ಮಂಗಳೂರು: ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!

ಸದ್ಯ ಹಿಟಾಚಿ ಯಂತ್ರದ ಮೂಲಕ ಕುಸಿದಿರುವ ಬಂಡೆಕಲ್ಲು ಮತ್ತು ಮಣ್ಣು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೂ ಆತಂಕದಲ್ಲೇ ವಾಹನ ಸವಾರರು ಪ್ರಯಾಣ‌ ಮಾಡುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲೇ ಸಂಚಾರಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.