ನಾಳೆ ಶೃಂಗೇರಿ ಕ್ಷೇತ್ರ ಬಂದ್​ಗೆ ಕರೆ; ಸಂಪೂರ್ಣ ಸ್ತಬ್ಧವಾಗಲಿರುವ ಚಿಕ್ಕಮಗಳೂರು ಜಿಲ್ಲೆಯ ಈ ಮೂರು ತಾಲ್ಲೂಕುಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 16, 2024 | 9:27 PM

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿಗರಿಗೆ ಒತ್ತುವರಿ ತೆರವಿನ ಆತಂಕ ಶುರುವಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಮಲೆನಾಡು ಭಾಗದಲ್ಲಿ ಸೃಷ್ಟಿಯಾದ ಅವಾಂತರಗಳಿಗೂ, ವಯನಾಡಿನಲ್ಲಿ ಸಂಭವಿಸಿದ ದುರಂತದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಅರಣ್ಯ, ಕಂದಾಯ ಭೂಮಿ ಒತ್ತುವರಿ ತೆರವಿಗೆ ಆದೇಶ ಮಾಡಿತ್ತು. ಅದೇ ಆದೇಶ ಮಲೆನಾಡಿಗರನ್ನ ನಿದ್ದೆಗೆಡಿಸಿದ್ದು, ಶೃಂಗೇರಿ ಕ್ಷೇತ್ರ ಬಂದ್​ಗೆ ಕರೆ ನೀಡಲಾಗಿದೆ.

ನಾಳೆ ಶೃಂಗೇರಿ ಕ್ಷೇತ್ರ ಬಂದ್​ಗೆ ಕರೆ; ಸಂಪೂರ್ಣ ಸ್ತಬ್ಧವಾಗಲಿರುವ ಚಿಕ್ಕಮಗಳೂರು ಜಿಲ್ಲೆಯ ಈ ಮೂರು ತಾಲ್ಲೂಕುಗಳು
ಶೃಂಗೇರಿ ಕ್ಷೇತ್ರ ಬಂದ್​ಗೆ ಕರೆ,
Follow us on

ಚಿಕ್ಕಮಗಳೂರು, ಆ.16: ರಾಜ್ಯ ಸರ್ಕಾರ ಆದೇಶ ನೀಡಿರುವ ಕಂದಾಯ, ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂರು ತಾಲೂಕಿನಲ್ಲಿ ವಿರೋಧ ವ್ಯಕ್ತವಾಗಿದೆ. ಕೊಪ್ಪ, NR ಪುರ ತಾಲೂಕು ಒಳಗೊಂಡ ಶೃಂಗೇರಿ ಕ್ಷೇತ್ರ ಬಂದ್(Sringeri Bandh)​ಗೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕರೆ ನೀಡಲಾಗಿದೆ. ಈ ಬಂದ್​ಗೆ ಬಿಜೆಪಿ, ಜೆಡಿಎಸ್ ಸೇರಿದಂತೆ ಸರ್ವ ಸಂಘಟನೆಗಳ ಬೆಂಬಲ ವ್ಯಕ್ತವಾಗಿದ್ದು, ನಾಳೆ(ಶನಿವಾರ) ಶೃಂಗೇರಿ ಕ್ಷೇತ್ರ ಬಂದ್ ನಡೆಸಲು ಸಿದ್ದತೆ ನಡೆಸಲಾಗಿದೆ.

ತುರ್ತು ಸೇವೆ ಹೊರತುಪಡಿಸಿ ಇನ್ನುಳಿದ ಸೇವೆಗಳು ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಮಲೆನಾಡು ಭಾಗದಲ್ಲಿ ಸುರಿದ ಮಳೆಯಿಂದ ಸಾಲು ಸಾಲು ಅನಾಹುತ ಸೃಷ್ಟಿಯಾಗಿತ್ತು. ಮಲೆನಾಡು ಭಾಗದಲ್ಲಿ ಗುಡ್ಡ, ಭೂ ಕುಸಿತ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿದ್ದು, ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಕಂದಾಯ, ಅರಣ್ಯ ಭೂಮಿ ಒತ್ತುವರಿ ತೆರವಿಗೆ ಆದೇಶ ನೀಡಿ. ಒಂದು ತಿಂಗಳೊಳಗೆ ಒತ್ತುವರಿ ತೆರವು ಮಾಡಲು ಜಿಲ್ಲಾಡಳಿತ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಒತ್ತುವರಿಯಾಗಿದ್ದ ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದ್ದು, ಮಲೆನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ:ಕರ್ನಾಟಕದಲ್ಲಿ ರಾಜ್ಯ ಸರ್ಕಾರದ 1.40 ಕೋಟಿ ಎಕರೆ ಜಮೀನು: ಒತ್ತುವರಿ ಆಗಿದ್ದೆಷ್ಟು?

ಕಂದಾಯ, ಅರಣ್ಯ ಭೂಮಿ ಒತ್ತುವರಿ ತೆರವು ಸಂಬಂಧಿಸಿದಂತೆ ಜಿಲ್ಲಾಡಳಿತ, ಅರಣ್ಯ ಇಲಾಖೆಗೆ ಗೊಂದಲವಿದ್ದು, ಕಂದಾಯ, ಅರಣ್ಯ ಭೂಮಿ ಗುರುತಿಸಲು ಕಂದಾಯ ಹಾಗೂ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಜಂಟಿ ಸರ್ವೇಗೆ ಸರ್ಕಾರ ಈ ಹಿಂದೆ ಆದೇಶ ನೀಡಿತ್ತು. ಆದ್ರೆ, ಜಂಟಿ ಸರ್ವೇ ನಡೆಸದೆ ಅರಣ್ಯ ಭೂಮಿ ಒತ್ತುವರಿ ತೆರವಿಗೆ ವಿರೋಧ ವ್ಯಕ್ತವಾಗಿದೆ. ರೈತರ ತೋಟಗಳ ತೆರವಿಗೂ ಮುನ್ನ ಪ್ರಭಾವಿಗಳ ತೋಟ, ರೆಸಾರ್ಟ್, ಹೋಂ ಸ್ಟೇ ತೆರವು ಮಾಡುವಂತೆ ಪಟ್ಟು ಹಿಡಿದಿದ್ದು, ನಾಳೆ ಶೃಂಗೇರಿ ಕ್ಷೇತ್ರ ಸಂಪೂರ್ಣ ಬಂದ್ ಮಾಡಲು ಸಿದ್ದತೆ ನಡೆಸಲಾಗಿದೆ. ಕೊಪ್ಪ ,NR ಪುರ ,ಶೃಂಗೇರಿ ತಾಲೂಕು ಬಂದ್ ಮಾಡಿ ಕೊಪ್ಪ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:26 pm, Fri, 16 August 24