Usain Bolt: ಕಾಫಿನಾಡಿನ ಕೆಸರು ಗದ್ದೆ ಸ್ಪರ್ಧೆಗೆ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್! ವೈರಲ್ ಪೋಸ್ಟ್ ಹಿಂದಿನ ಅಸಲಿ ಕತೆ
ಮುಳ್ಳೋಡಿಯಲ್ಲಿ ಕೆಸರುಗದ್ದೆ ಸ್ಪರ್ಧೆ ಇದೆ, ಉಸೇನ್ ಬೋಲ್ಟ್ ಬರ್ತಿದ್ದಾರೆ. ಉಳಿದ ಸ್ಪರ್ಧಿಗಳಾದ ಗ್ರಾಮ ಪಂಚಾಯತ್ ಸದಸ್ಯರು, ತಾಲೂಕ್ ಪಂಚಾಯತ್ ಸದಸ್ಯರು, ಎಂಪಿ, ಎಂಎಲ್ಎಗಳಿಗೋಸ್ಕರ ಕಾಯುತ್ತಿದ್ದೇವೆ.
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮುಳ್ಳೋಡಿಯಲ್ಲಿ ಕೆಸರು ಗದ್ದೆ ಓಟದ ಸ್ಪರ್ಧೆಯಿದ್ದು ವಿಶ್ವದ ಪ್ರಸಿದ್ದ ಓಟಗಾರ ಉಸೇನ್ ಬೋಲ್ಟ್ ಸ್ಪರ್ಧಿಸುತ್ತಿದ್ದು, ಈಗಾಗಲೇ ತರಬೇತಿ ಶುರು ಮಾಡಿದ್ದಾರೆ. ಹೀಗೊಂದು ಪೋಸ್ಟ್ ಕಾಫಿನಾಡಿಗರ ಮೊಬೈಲ್ನ ವಾಟ್ಸಾಫ್, ಫೇಸ್ಬುಕ್ಗಳಲ್ಲಿ ಹರಿದಾಡುತ್ತಿದ್ದು ಜನರು ಅಚ್ಚರಿಗೊಂಡಿದ್ದಾರೆ. ನಿಜಕ್ಕೂ ವಿಶ್ವದ ವೇಗದ ಓಟಗಾರ ಚಿಕ್ಕಮಗಳೂರಿಗೆ ಬರ್ತಾರಾ..? ಅಂತಾ ಆಶ್ಚರ್ಯ ಚಕಿತರಾಗಿದ್ದಾರೆ. ಅಷ್ಟಕ್ಕೂ ಏನಿದು ಪೋಸ್ಟ್? ಏನಿದರ ಮರ್ಮ ಅಂತೀರಾ?
ಉಸೇನ್ ಬೋಲ್ಟ್ ಭಾವಚಿತ್ರವಿಟ್ಟು ಜನಪ್ರತಿನಿಧಿಗಳ ಕಾಲೆಳೆದ ಜನರು! ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಹೆಸರನ್ನ ಯಾರು ಕೇಳಿಲ್ಲ ಹೇಳಿ. ಚಿರತೆ ವೇಗವನ್ನೇ ಮೀರಿಸೋ ರೀತಿಯಲ್ಲಿ ಓಡಿ ಎಲ್ಲರನ್ನ ಹುಬ್ಬೇರಿಸುವ ಹಾಗೆ ಮಾಡಿದ ಖ್ಯಾತಿ ಉಸೇನ್ ಬೋಲ್ಟ್ ಅವರದ್ದು. ಅಂತಹ ಉಸೇನ್ ಬೋಲ್ಟ್ ಕಾಫಿನಾಡಿನ ಕುಗ್ರಾಮವೊಂದಕ್ಕೆ ಬರ್ತಾರೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಳ್ಳೋಡಿ ರಸ್ತೆ ಸ್ಥಿತಿಯಂತೂ ಕೇಳೋದೇ ಬೇಡ. ಆ ರಸ್ತೆಯನ್ನ ನೋಡಿದ್ರೆ ಯಾರೂ ಕೂಡ ಇದು ರಸ್ತೆ ಅಂತಾ ಹೇಳೋದಿಲ್ಲ, ರಸ್ತೆ ತುಂಬಾ ಗುಂಡಿಗಳೇ, ಕೆಸರು ಗದ್ದೆಯ ರೀತಿ ಬದಲಾಗಿರೋ ರಸ್ತೆಯಲ್ಲಿ ಓಡಾಡಬೇಕು ಅಂದ್ರೆ ಧಮ್, ತಾಕತ್ತು ಇರ್ಲೇ ಬೇಕು. ಯಾಕಂದ್ರೆ ಸಾಮಾನ್ಯ ವ್ಯಕ್ತಿಗಳು ಈ ರಸ್ತೆಯಲ್ಲಿ ಓಡಾಡೋಕೆ ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬೈಕ್ನಲ್ಲಿ ಓಡಾಡಿದ್ರೆ ಬೈಕ್ ಸಮೇತ ಬೀಳೋದು ಗ್ಯಾರಂಟಿ. ನಡೆದುಕೊಂಡು ಹೋಗಲು ಕೂಡ ಅಸಾಧ್ಯ.
ಈ ಬೆಳವಣಿಗೆಗಳಿಂದ ರೋಸಿಹೋಗಿರುವ ಸ್ಥಳೀಯರು, ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿ ಸೋತು ಹೋಗಿದ್ದಾರೆ. ಕೊನೆಗೆ ಯಾರೂ ಸ್ಪಂದಿಸದಿದ್ದಾಗ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಭಾವಚಿತ್ರವನ್ನ ಹದೆಗೆಟ್ಟ ರಸ್ತೆ ಪೋಟೋಗೆ ಜೋಡಿಸಿ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಳ್ಳೋಡಿಯಲ್ಲಿ ಕೆಸರುಗದ್ದೆ ಸ್ಪರ್ಧೆ ಇದೆ, ಉಸೇನ್ ಬೋಲ್ಟ್ ಬರ್ತಿದ್ದಾರೆ. ಉಳಿದ ಸ್ಪರ್ಧಿಗಳಾದ ಗ್ರಾಮ ಪಂಚಾಯತ್ ಸದಸ್ಯರು, ತಾಲೂಕ್ ಪಂಚಾಯತ್ ಸದಸ್ಯರು, ಎಂಪಿ, ಎಂಎಲ್ಎಗಳಿಗೋಸ್ಕರ ಕಾಯುತ್ತಿದ್ದೇವೆ ಅಂತಾ ಕೆಲಸ ಮಾಡಿಕೊಡದ ಜನಪ್ರತಿನಿಧಿಗಳು, ಅಧಿಕಾರಿಗಳ ಕಾಲೆಳೆದಿದ್ದಾರೆ.
40 ವರ್ಷಗಳಿಂದ ದುರಸ್ತಿ ಕಾಣದ ರಸ್ತೆ.! ಕಣ್ಣಿದ್ರೂ ಕುರುಡಾದ ಜನಪ್ರತಿನಿಧಿಗಳು..! ಸದ್ಯ ಕಳಸ ತಾಲೂಕಿನ ಮುಳ್ಳೋಡಿ ಗ್ರಾಮದ ರಸ್ತೆಯ ಈ ಕಥೆ-ವ್ಯಥೆ ಇಂದು ನಿನ್ನೆಯದಲ್ಲ. ಸುಮಾರು 40 ವರ್ಷಗಳಿಂದ ಈ ರಸ್ತೆಗೆ ದುರಸ್ತಿ ಭಾಗ್ಯವೇ ಸಿಕ್ಕಿಲ್ಲ. ಅದರಲ್ಲೂ ಮಳೆಗಾಲ ಬಂತಂದ್ರೆ ಸಂಪೂರ್ಣ ಕೆಸರುಮಯವಾಗಿ ಬದಲಾಗುವ ಈ ರಸ್ತೆಯಲ್ಲಿ ಓಡಾಡೋಕೆ ಸಾಧ್ಯವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತೆ. ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುವ ರಸ್ತೆ, ಬೇಸಿಗೆ ಕಾಲದಲ್ಲಿ ಸಂಪೂರ್ಣ ಧೂಳುಮಯವಾಗಿ ಬಿಡುತ್ತೆ. ಹೀಗೆ ವರ್ಷವಿಡೀ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡು ಜನರು ನರಕಯಾತನೆ ಅನುಭವಿಸುತ್ತಲೇ ಇದ್ದಾರೆ.
ನೂರಕ್ಕೂ ಹೆಚ್ಚು ಮನೆಗಳಿರೋ ಈ ಗ್ರಾಮದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಶಾಲಾ ಕಾಲೇಜುಗಳಿಗೆ ತೆರಳಲು ಪರದಾಟ ನಡೆಸುವಂತಾಗಿದೆ. ಅಲ್ಲದೇ ಆನ್ ಲೈನ್ ಕ್ಲಾಸ್ ಗೆ ನೆಟ್ವರ್ಕ್ ಹುಡುಕಿಕೊಂಡು ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಲು ಚಿಕ್ಕ ಚಿಕ್ಕ ಪುಟಾಣಿಗಳು ಹರಸಾಹಸ ಪಡುತ್ತಿದ್ದಾರೆ. ವೃದ್ಧರು ಆಸ್ಪತ್ರೆಗೆ ತೆರಳಲು ಸಂಕಟ ಅನುಭವಿಸುತ್ತಿದ್ದಾರೆ. ಸದ್ಯ ಸಂಸೆಯಿಂದ ಮುಳ್ಳೋಡಿಗೆ ಸಂಪರ್ಕ ಕಲ್ಪಿಸುವ 7 ಕಿ.ಮೀ ರಸ್ತೆ ಸಂಪೂರ್ಣ ಕೆಸರು ರಾಡಿಯಾಗಿದೆ. ಹೀಗೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಜನರು ಪರಿತಪಿಸುತ್ತಿದ್ರೂ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಹದೆಗೆಟ್ಟ ರಸ್ತೆಗೆ ಉಸೇನ್ ಬೋಲ್ಟ್ ಭಾವಚಿತ್ರ ಜೋಡಿಸಿ ಜನಪ್ರತಿನಿಧಿಗಳು, ಅಧಿಕಾರಿಗಳ ಮಾನ-ಮರ್ಯಾದೆಯನ್ನ ಕಳೆದಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟವರು ಇತ್ತ ಗಮನಹರಿಸ್ತಾರ..? ಕಾಲವೇ ಉತ್ತರ ಕೊಡಬೇಕು.
ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು
ಇದನ್ನೂ ಓದಿ: Viral Video: ರಸ್ತೆ ಗುಂಡಿ ಮುಚ್ಚಿದ ಬೆಂಗಳೂರಿನ ಟ್ರಾಫಿಕ್ ಪೊಲೀಸ್; ವೈರಲ್ ವಿಡಿಯೋಗೆ ಗೃಹ ಸಚಿವರಿಂದಲೂ ಮೆಚ್ಚುಗೆ
ಅಮೆರಿಕಾದ ರಸ್ತೆಗಳಲ್ಲೂ ಹೊಂಡ, ಗುಂಡಿ ಸಮಸ್ಯೆ; ಬಾಳೆ ಮರ ನೆಟ್ಟು ಪ್ರತಿಭಟಿಸಿದ ಜನ
Published On - 12:54 pm, Tue, 14 September 21