ಸಾವಿರಾರು ಕೋಟಿ ಆಸ್ತಿಯ ಒಡೆಯನಾಗಿದ್ರೂ ಅಹಂ ಅನ್ನೋದು ಅವರ ಹತ್ತಿರ ಸುಳಿಯಲೇ ಇಲ್ಲ.. ಸಾವಿರಾರು ಜನರಿಗೆ ಉದ್ಯೋಗ ಕೊಟ್ಟು ಬೆಳೆಸಿದ್ರೂ ನಾನೇ ಮೇಲೆತ್ತಿದೆ ಅನ್ನೋ ಗತ್ತು ತೋರಿಸಲೇ ಇಲ್ಲ. ಪ್ರಪಂಚದಾದ್ಯಂತ 18ಕ್ಕೂ ಹೆಚ್ಚು ಇಂಟರ್ ನ್ಯಾಷನಲ್ ಬ್ಯುಸಿನೆಸ್ ವಿಸ್ತರಿಸಿದ್ರೂ ತಾನೇ ಬ್ಯುಸಿನೆಸ್ ಐಕಾನ್ ಅಂತಾ ಮೆರೆಯಲಿಲ್ಲ. ಎಲ್ಲಾ ಇದ್ರೂ ಏನೂ ಇಲ್ಲದಂತೆ ಎಲೆಮರೆಕಾಯಿಯಂತೆ ಇದ್ದ ಅವರು ವ್ಯಕ್ತಿತ್ವಕ್ಕೆ ಕೇವಲ ಕಾಫಿನಾಡು ಮಾತ್ರವಲ್ಲ, ಕರುನಾಡೇ ಬೆರಗಾಗಿದ್ದು ಸುಳ್ಳಲ್ಲ. ಯೆಸ್ ಅವರೇ ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ದಾರ್ಥ್ ಹೆಗ್ಡೆ. ಜೀವನದ ಕೊನೆಕ್ಷಣದವರೆಗೂ ಸರಳವಾಗಿ ಬದುಕಿದ್ದ ಸಿದ್ದಾರ್ಥ್ ಹೆಗ್ಡೆ ಹೆಚ್ಚು ಹಣ ಗಳಿಸಿದ್ರೂ ಅನ್ನೋಕ್ಕಿಂತಲೂ ಮಿಗಿಲಾಗಿ ಜನರ ಪ್ರೀತಿಗಳಿಸಿದ್ರೂ ಅನ್ನೋದು ಗೊತ್ತಾಗಿದ್ದು ಅವರು ನಮ್ಮಿಂದ ದೂರವಾದ ಮೇಲೆಯೇ. ಅದಕ್ಕೆ ಅವರ ಅಂತಿಮ ಯಾತ್ರೆಯಲ್ಲಿ ಜೇನಿನ ಹುಳುಗಳಂತೆ ಕಾಫಿನಾಡಿನ ಎಲ್ಲೆಡೆ ಸೇರಿದ ಲಕ್ಷಾಂತರ ಜನರೇ ಸಾಕ್ಷಿ. “ಎ ಲಾಟ್ ಕ್ಯಾನ್ ಹ್ಯಾಪನ್ ಒವರ್ ಕಾಫಿ” ಅನ್ನೋದನ್ನ ಹೇಳುತ್ತಾ ಅದೆಷ್ಟೋ ಲವ್ ಸ್ಟೋರಿಗಳಿಗೆ, ಬ್ಯುಸಿನೆಸ್ ಯಶೋಗಾಥೆಗಳಿಗೆ , ಯಾಂತ್ರಿಕ ಜೀವನದಿಂದ ತೋಳಲಾಟ ನಡೆಸುತ್ತಿದ್ದ ಜನ್ರು ನೆಮ್ಮದಿಯಾಗಿ ಕಾಲ ಕಳೆಯೋ ಕ್ಷಣಗಳಿಗೆ ವೇದಿಕೆ ಮಾಡಿಕೊಟ್ಟ ಸೂಪರ್ ಮ್ಯಾನ್ ಸಿದ್ದಾರ್ಥ್ ಹೆಗ್ಡೆ. ಈ ಮೂಲಕ ಗ್ರಾಮೀಣ ಭಾಗದ ಸಾವಿರಾರು ಯುವಕ, ಯುವತಿಯರಿಗೆ ತರಬೇತಿ ನೀಡಿ ಉದ್ಯೋಗವನ್ನ ಕೊಟ್ಟು ನಿಜವಾದ ಗಾಢ್ ಫಾದರ್ ಆದ ದೈತ್ಯ ಉದ್ಯಮಿ. ಕೊನೆಗೆ ಸಕ್ಸಸ್ಸಿನ ಉತ್ತುಂಗಕ್ಕೆ ಕಾಲಿಡುತ್ತಿರುವಾಗಲೇ ಯೂ ಟರ್ನ್ ತೆಗೆದುಕೊಂಡು ಬದುಕಿಗೆ ಗುಡ್ ಬೈ ಹೇಳಿದ ನತದೃಷ್ಟ. ಇಷ್ಟಾದ್ರೂ ಬದುಕು ರೂಪಿಸಿದ ದೇವರನ್ನ ಕಾಫಿನಾಡಿಗರು ಮರೆತಿಲ್ಲ. ಇಲ್ಲೊಬ್ಬ ಯುವಕ ತನ್ನ ಮದುವೆ ಸಮಾರಂಭದಲ್ಲೂ ಸಿದ್ದಾರ್ಥ್ ಹೆಗ್ಡೆಗೆ ನಮನ ಸಲ್ಲಿಸೋ ಮೂಲಕ ಕಾಫಿ ಕಿಂಗ್ನ್ನ ಸ್ಮರಣೆ ಮಾಡಿದ್ದಾನೆ.
ಕಾಫಿ ಕಿಂಗ್ ಸಿದ್ದಾರ್ಥ ಹೆಗ್ಡೆಗೆ ನಮನ ಸಲ್ಲಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಕ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಳೆಕೂಡಿಗೆ ಗ್ರಾಮದ ಸಂತೋಷ್. ಬಾಳೆಹೊನ್ನೂರು ಸಮೀಪದ ಗಡಿಗೇಶ್ವರ ಗ್ರಾಮದ ಪ್ರಮೀತಾ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಬದುಕನ್ನ ರೂಪಿಸಿದವರನ್ನ ಮದುವೆ ವೇಳೆಯಲ್ಲೂ ಮಿಸ್ ಮಾಡಲಿಲ್ಲ. ಮದುವೆಗೂ ಮುನ್ನ ಸಿದ್ದಾರ್ಥ್ ಹೆಗ್ಡೆಗೆ ನಮನ ಸಲ್ಲಿಸೋ ಮೂಲಕ ಗೌರವ ಸಲ್ಲಿಸಿದ್ರು. ಮಧುಮಗನ ಈ ಕಾರ್ಯಕ್ಕೆ ಸಂಬಂಧಿಗಳು, ಸ್ಥಳೀಯರು ಸೇರಿದಂತೆ ಜನಸಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ರು.
ತುಂಬಾ ಬಡತನದಲ್ಲಿದ್ದ ಸಂತೋಷ್ ಕುಟುಂಬ, ಇವತ್ತು ಒಂದೊಳ್ಳೆ ಜೀವನ ಕಟ್ಟಿಕೊಂಡಿರುವುದಕ್ಕೆ ಕಾರಣ ಸಿದ್ದಾರ್ಥ್ ಹೆಗ್ಗೆ. ಕೇವಲ ಸಂತೋಷ್ ಮಾತ್ರವಲ್ಲ, ಇಂತಹ ಸಾವಿರಾರು ಯುವಕ-ಯುವತಿಯರು ಕಾಫಿಕಿಂಗ್ನ ಸಹಕಾರದಿಂದ ಸಾರ್ಥಕ ಜೀವನ ನಡೆಸುವಂತಾಗಿದೆ. ಹಾಗಾಗಿಯೇ ಇಂದು ಸಿದ್ದಾರ್ಥ್ ಹೆಗ್ಡೆ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ರೂ ಮಾನಸಿಕವಾಗಿ ಜನಸಾಮಾನ್ಯರ ಮನಸ್ಸಿನಲ್ಲಿ ಸದಾ ಹಸಿರಾಗಿರೋದಂತೂ ಸತ್ಯ. ತನ್ನ ವ್ಯವಹಾರ ಸಂಕಷ್ಟದಲ್ಲಿದ್ದಾಗಲೂ ಅಗ್ರ ಗಣ್ಯ ರಾಜಕೀಯ ನಾಯಕರ ಬೆಂಬಲವಿದ್ರೂ ರಾಜಕೀಯ ಆಸರೆ ಪಡೆಯದ ಸ್ವಾಭಿಮಾನಿ ಸಿದ್ದಾರ್ಥ್ ಹೆಗ್ಡೆ ಅಂದ್ರೆ ಅತಿಶೋಕ್ತಿಯಲ್ಲ. ಪ್ರಾಣವನ್ನ ಬೇಕಾದ್ರೂ ಕೊಡ್ತೀನಿ, ಸ್ವಾಭಿಮಾನವಲ್ಲ ಅನ್ನೋದನ್ನ ಕೊನೆಗೂ ಸಾಬೀತು ಮಾಡಿದ್ದ ಅಪ್ಪಟ ಕರುನಾಡಿನ ನಿಷ್ಕಲ್ಮಶ ಉದ್ಯಮಿ ಅವರು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ವಿಧಿಯ ಅಟ್ಟಹಾಸಕ್ಕೆ ಪ್ರಾಣವನ್ನ ತ್ಯಾಗ ಮಾಡಿದ ಸಿದ್ದಾರ್ಥ್ ಹೆಗ್ಡೆ, ನೆನಪು ಕಾಫಿನಾಡು-ಕರುನಾಡಿನಲ್ಲಿ ಸದಾ ಹಸಿರು.
ವರದಿ: ಪ್ರಶಾಂತ್ ಟಿವಿ9, ಚಿಕ್ಕಮಗಳೂರು
ಕಾಫಿ ಕಿಂಗ್ ಸಿದ್ದಾರ್ಥ ಹೆಗ್ಡೆ
ಇದನ್ನೂ ಓದಿ: ವಿ.ಜಿ.ಸಿದ್ಧಾರ್ಥ್ ಪತ್ನಿ ಮಾಳವಿಕಾ ’ಕಾಫಿ ಡೇ‘ಗೆ ಹೊಸ ಸಿಇಒ