ಪಾಳುಬಿದ್ದ ಚಿತ್ರದುರ್ಗ ಜಿಲ್ಲಾಸ್ಪತ್ರೆ ಉದ್ಯಾನವನ; ಮೂಗು ಮುಚ್ಚಿಕೊಂಡೇ ಆಸ್ಪತ್ರೆಗೆ ಬರುತ್ತಿರುವ ರೋಗಿಗಳು
ಆಸ್ಪತ್ರೆಗೆ ಬಂದವರಿಗೆ ಸುಂದರ ಪರಿಸರದಿಂದ ಮುದ ನೀಡಬೇಕಿದ್ದ ಪಾರ್ಕ್ ಹಾಳು ಕೊಂಪೆಯಂತಾಗಿದ್ದು, ಕಿರಿಕಿರಿ ಉಂಟುಮಾಡುತ್ತಿದೆ. ಈ ಬಗ್ಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರನ್ನು ಕೇಳಿದರೆ ಉದ್ಯಾನವನ ಹಾಳಾಗಿದ್ದು ನಿಜ. ಆದಷ್ಟು ಬೇಗ ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಪಾರ್ಕ್ ಅಭಿವೃದ್ಧಿ ಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗ: ಒಂದು ಸರ್ಕಾರಿ ಆಸ್ಪತ್ರೆ ಎಂದರೆ ನಿತ್ಯ ನೂರಾರು ಜನರು ಅಲ್ಲಿಗೆ ಬಂದು ಹೋಗುತ್ತಾರೆ. ಅದರಲ್ಲೂ ಕೊವಿಡ್ ಸೋಂಕು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಸರ್ಕಾರಿ ಜಿಲ್ಲಾಸ್ಪತ್ರೆ ಜನರ ಜೀವ ಉಳಿಸುವಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ. ಆದರೆ ಚಿತ್ರದುರ್ಗ ಜಿಲ್ಲೆಯ ಆಸ್ಪತ್ರೆಯ ಮುಂಭಾಗದಲ್ಲಿ ಐದು ನಿಮಿಷವೂ ಸಹ ನಿಲ್ಲಲು ಸಾಧ್ಯವಾಗದ ದುಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಆಸ್ಪತ್ರೆ ಮುಂಭಾಗದಲ್ಲಿರುವ ಉದ್ಯಾನವನದ ದುರಸ್ಥಿಯೇ ಆಗಿದೆ. ಈ ಉದ್ಯಾನವನ ಗ್ಲೌಸ್, ಮಾಸ್ಕ್, ಪ್ಲಾಸ್ಟಿಕ್ ಕಸದಿಂದ ತುಂಬಿದ್ದು, ಸುತ್ತಮುತ್ತ ತಿಪ್ಪೆಯಂತಹ ವಾತಾವರಣ ಸೃಷ್ಟಿಯಾಗಿದೆ.
ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಜಿಲ್ಲಾಸ್ಪತ್ರೆ, ಕೊವಿಡ್ ಆಸ್ಪತ್ರೆಗೆ ಬಂದ ಅನೇಕರು ಐದು ನಿಮಷ ನೆರಳಿಗೆ ಕೂರಲು ಸಹ ಸಾಧ್ಯವಾಗದ ದುಸ್ಥಿತಿ ನಿರ್ಮಾಣ ಆಗಿದೆ. ಕೊವಿಡ್ ಆಸ್ಪತ್ರೆಗೆ ಬಂದ ಅನೇಕ ರೋಗಿಗಳು ಬೆಡ್ ಸಿಗದಾಗ ಇದೇ ಸ್ಥಳದಲ್ಲಿ ಕಾಯುತ್ತಾರೆ. ರೋಗಿಗಳ ಸಂಬಂಧಿಕರು ಸಹ ಮೂಗು ಮುಚ್ಚಿಕೊಂಡು ಅನಿವಾರ್ಯವಾಗಿ ಇದೇ ಜಾಗದಲ್ಲಿ ಕಾಲ ಕಳೆಯುತ್ತಾರೆ. ಇಷ್ಟಿದ್ದರೂ ಸಹ ಆರೋಗ್ಯ ಇಲಾಖೆ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಗಮನಹರಿಸದೆ ನಿರ್ಲಕ್ಷ ತೋರುತ್ತಿದೆ ಎಂದು ಸ್ಥಳೀಯರಾದ ನಾಗರಾಜ್ ಬೇದ್ರೆ ತಿಳಿಸಿದ್ದಾರೆ.
ಇನ್ನು ಅನೇಕ ರೋಗಿಗಳ ಸಂಬಂಧಿಕರು ಇದೇ ಸ್ಥಳದಲ್ಲಿ ಆಹಾರ ಸೇವಿಸಿ, ತಿಂದುಂಡಿದ್ದ ಕಸವನ್ನು ಇಲ್ಲೇ ಬಿಸಾಡುತ್ತಾರೆ. ಹೀಗಾಗಿ, ಆಸ್ಪತ್ರೆಗೆ ಬಂದವರಿಗೆ ಸುಂದರ ಪರಿಸರದಿಂದ ಮುದ ನೀಡಬೇಕಿದ್ದ ಪಾರ್ಕ್ ಹಾಳು ಕೊಂಪೆಯಂತಾಗಿದ್ದು, ಕಿರಿಕಿರಿ ಉಂಟುಮಾಡುತ್ತಿದೆ. ಈ ಬಗ್ಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರನ್ನು ಕೇಳಿದರೆ ಉದ್ಯಾನವನ ಹಾಳಾಗಿದ್ದು ನಿಜ. ಆದಷ್ಟು ಬೇಗ ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಪಾರ್ಕ್ ಅಭಿವೃದ್ಧಿ ಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಬಹಿರಂಗ ಆಗುತ್ತಿದೆ. ಆಸ್ಪತ್ರೆ ವಾರ್ಡ್ಗಳು ಮತ್ತು ಆವರಣದಲ್ಲಿ ನಾಯಿಗಳು ಓಡಾಡುತ್ತವೆ. ಆಸ್ಪತ್ರೆಯ ಮುಂಭಾಗದ ಉದ್ಯಾನವನ ಹಾಳುಬಿದ್ದು ಗಬ್ಬೆದ್ದಿದೆ. ಹೀಗಾಗಿ, ಇನ್ನಾದರೂ ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಇಲ್ಲಿನ ಸ್ಥಳೀಯರ ಒತ್ತಾಯ.
ಇದನ್ನೂ ಓದಿ:
ಚಿತ್ರದುರ್ಗದಲ್ಲಿ ದಿನ ಬಿಟ್ಟು ದಿನ ಲಾಕ್ಡೌನ್; ಜಿಲ್ಲಾಡಳಿತದ ಈ ಕೊವಿಡ್ ನಿಯಮದಿಂದ ಸಾರ್ವಜನಿಕರಲ್ಲಿ ಗೊಂದಲ